ಯಲ್ಲಾಪುರ ವಿಧಾನಸಭಾ ಕ್ಷೇತ್ರ | ಪಕ್ಷಾಂತರಿಗಳ ಸೆಣೆಸಾಟದಲ್ಲಿ ಅಭಿವೃದ್ಧಿಯ ಪ್ರಸ್ತಾಪವೇ ಇಲ್ಲ

Date:

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣಾ ಕಣದಲ್ಲಿರುವ ಇಬ್ಬರೂ ಪ್ರಬಲ ಅಭ್ಯರ್ಥಿಗಳು ಅಧಿಕಾರದ ಲಾಲಸೆಗೆ ಪಕ್ಷಾಂತರ ಮಾಡಿದವರು ಎಂಬ ಮನೋಭಾವ ಮತದಾರರಲ್ಲಿದೆ.

ಶಿವರಾಮ್‌ ಹೆಬ್ಬಾರ್‌

ಬಿಜೆಪಿಯ ಅಭ್ಯರ್ಥಿ, ಹಾಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ 2019ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಅದಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು, ಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿರುವ ಇದೇ ಹೆಬ್ಬಾರ್‌ 90ರ ದಶಕದಲ್ಲಿ ಬಿಜೆಪಿಯಲ್ಲಿದ್ದರು ಎಂಬುದು ಗಮನಿಸಬೇಕಾದ ಅಂಶ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಅವರು 2008ರಲ್ಲಿ ಮೊದಲ ಬಾರಿಗೆ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಗ ಬಿಜೆಪಿಯಲ್ಲಿದ್ದ ಇದೇ ವಿ.ಎಸ್‌ ಪಾಟೀಲ್‌ ವಿರುದ್ಧ ಸೋಲನುಭವಿಸಿದ್ದರು. ಅದಾದ ನಂತರ 2013, 2018ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯದಿದ್ದಾಗ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆಗಿನ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದ ಅದು ಕೈಗೂಡದೇ ಇದ್ದಾಗ ತಮ್ಮಂತೆ ಬಂಡಾಯವೆದ್ದಿದ್ದ ಶಾಸಕರ ಜೊತೆಗೆ ಬಿಜೆಪಿ ಸೇರಿ ಕ್ಷೇತ್ರದ ಜನತೆ ಉಪಚುನಾವಣೆ ಎದುರಿಸುವಂತೆ ಮಾಡಿದ್ದವರು ಶಿವರಾಮ್‌ ಹೆಬ್ಬಾರ್‌. ಅವರು ಹಣ, ಅಧಿಕಾರದ ಆಮಿಷಕ್ಕೊಳಗಾಗಿ ಬಿಜೆಪಿ ಸೇರಿದವರು ಎನ್ನುವ ಭಾವನೆ ಮತದಾರರಲ್ಲಿದೆ. ಕ್ಷೇತ್ರದಲ್ಲಿನ ಮೂಲ ಬಿಜೆಪಿಗರನ್ನು ಹೆಬ್ಬಾರ್‌ ಕಡೆಗಣಿಸುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಮೇಲ್ನೋಟಕ್ಕೆ ಕಾಣುವ ಕೆಲಸಗಳನ್ನು ಬಿಟ್ಟರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬಲ್ಲ ಯಾವ ಯೋಜನೆಗಳನ್ನೂ ಶಿವರಾಮ್‌ ಹೆಬ್ಬಾರ್‌ ಅನುಷ್ಠಾನಕ್ಕೆ ತಂದಿಲ್ಲ ಎಂಬ ಮಾತಿದೆ.

ವಿ.ಎಸ್‌ ಪಾಟೀಲ್‌

ಯಲ್ಲಾಪುರ ಕ್ಷೇತ್ರ ರಚನೆಯಾದ ಬಳಿಕ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್‌ ಪಾಟೀಲ್‌ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಅವರ ಆಡಳಿತ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಅಸಮಾಧಾನ ಜನರಲ್ಲಿತ್ತು. ಅದು ಮತವಾಗಿ ಬದಲಾಗಿದ್ದು 2013ರ ಚುನಾವಣೆಯಲ್ಲಿ. ಅದರ ಫಲವಾಗಿ ಆಗ ಕಾಂಗ್ರೆಸಿನಲ್ಲಿದ್ದ ಶಿವರಾಮ್‌ ಹೆಬ್ಬಾರ್‌ ಮೊದಲ ಬಾರಿಗೆ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2013 ಮತ್ತು 2018ರ ಚುನಾವಣೆಗಳಲ್ಲಿಯೂ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಪಾಟೀಲ್‌, ಆಗ ಕಾಂಗ್ರೆಸ್‌ನಲ್ಲಿದ್ದ ಹೆಬ್ಬಾರ್‌ ಎದುರು ಸೋಲುಂಡರು. 2019ರಲ್ಲಿ ಹೆಬ್ಬಾರ್‌ ಬಂಡಾಯವೆದ್ದು ಕಾಂಗ್ರೆಸ್‌ನಿಂದ ಬಿಜೆಪಿ ವಲಸೆ ಬಂದಾಗ ಬಿಜೆಪಿಯಲ್ಲೇ ಇದ್ದ ವಿ.ಎಸ್‌ ಪಾಟೀಲ್‌ ಅವರಿಗೆ ಕ್ಷೇತ್ರ ಕೈ ತಪ್ಪಿತು. ಹೈಕಮಾಂಡ್‌ ಮಾತಿಗೆ ಕಟ್ಟುಬಿದ್ದು ಉಪಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದ ಪಾಟೀಲ್‌, ತಮ್ಮ ವಿರೋಧಿ ಹೆಬ್ಬಾರ್‌ಗೆ ಬೆಂಬಲ ವ್ಯಕ್ತಪಡಿಸಿ ಚುನಾವಣಾ ಪ್ರಚಾರವನ್ನೂ ಮಾಡಿದರು. ಅದಕ್ಕೆ ಫಲವಾಗಿ ಸಿಕ್ಕ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷಗಿರಿಯನ್ನು ಅನುಭವಿಸಿದ ಅವರು ಇನ್ನೆಂದಿಗೂ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತಲೇ ಕಾಂಗ್ರೆಸ್‌ನತ್ತ ಮುಖ ಮಾಡಿದರು.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಮತದಾರರೇ ಹೇಳುವಂತೆ ಕ್ಷೇತ್ರದಲ್ಲಿ ವಿ.ಎಸ್‌ ಪಾಟೀಲ್‌ ಅವರ ವೈಯಕ್ತಿಕ ವರ್ಚಸ್ಸು ಅಷ್ಟಾಗಿಲ್ಲ. ಆರ್‌.ವಿ ದೇಶಪಾಂಡೆ ಪ್ರತಿನಿಧಿಸುತ್ತಿದ್ದ ಕಾಲದಿಂದ ಹಿಡಿದು ಈಗ ಬಿಜೆಪಿಯಲ್ಲಿರುವ ಶಿವರಾಮ್‌ ಹೆಬ್ಬಾರ್‌ ಕಾಂಗ್ರೆಸ್‌ನಲ್ಲಿದ್ದ ಅವಧಿಯವರೆಗೂ ಕೈ ಪಾಳಯದ ನೆಲೆಯಾಗಿದ್ದ ಈ ತಾಲ್ಲೂಕುಗಳಲ್ಲಿ ಪಕ್ಷದ ವರ್ಚಸ್ಸಿನ ಕಾರಣಕ್ಕೆ ವಿ.ಎಸ್‌ ಪಾಟೀಲ್‌ ಸ್ಪರ್ಧೆ ಪ್ರಾಮುಖ್ಯತೆ ಪಡೆದುಕೊಂಡಿದೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜ್ವಲಂತ ಸಮಸ್ಯೆಗಳು

ಯಲ್ಲಾಪುರ ವಿಧಾನಸಭಾ ಕ್ಷೇತ್ರ, ಯಲ್ಲಾಪುರ ಮತ್ತು ಮುಂಡಗೋಡು ತಾಲ್ಲೂಕು ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಒಳಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರ ಹೆಚ್ಚು ವಿಸ್ತಾರವಾದದ್ದು. ಈ ವಿಸ್ತಾರವಾದ ಕ್ಷೇತ್ರ ಜನ್ಮತಾಳಿ ಒಂದು ದಶಕ ಕಳೆದರೂ ಜನರ ಮೂಲಭೂತ ಸಮಸ್ಯೆಗಳಿಗೆ ಈವರೆಗೆ ಸೂಕ್ತ ಪರಿಹಾರ ದೊರೆತಿಲ್ಲ. ಎರಡು ತಾಲ್ಲೂಕು ಮತ್ತು ಒಂದು ಹೋಬಳಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ತಾಲ್ಲೂಕು ಆಸ್ಪತ್ರೆಗಳನ್ನು ಬಿಟ್ಟರೆ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಇಲ್ಲಿನ ಜನ ತುರ್ತು ಪರಿಸ್ಥಿತಿಗಳಲ್ಲಿ ವಾಹನ ಬಾಡಿಗೆ ಮಾಡಿಕೊಂಡು 50 ರಿಂದ 60 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಯ ಕಿಮ್ಸ್‌ ಅಥವಾ ಧಾರವಾಡ ಸಮೀಪದ ʼಎಸ್‌ಡಿಎಂʼ ಆಸ್ಪತ್ರೆಗಳ ಮೊರೆ ಹೋಗಬೇಕು.

ಬಿಎ ಪ್ರಥಮ ದರ್ಜೆ ಕಾಲೇಜು, ಎಪಿಎಂಸಿ ಕಟ್ಟಡದಲ್ಲೇ ದಿನದೂಡುತ್ತಿರುವ ಪಾಲಿಟೆಕ್ನಿಕ್‌ ಕಾಲೇಜು, ಜೂನಿಯರ್‌ ಹೈಸ್ಕೂಲು ಬಿಟ್ಟರೆ ಮುಂಡಗೋಡ ತಾಲ್ಲೂಕಿನಲ್ಲಂತೂ ಹೇಳಿಕೊಳ್ಳುವಂಥ ಯಾವುದೇ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಲ್ಲ. ಯಲ್ಲಾಪುರ ತಾಲ್ಲೂಕಿನ ಸ್ಥಿತಿಯೂ ಇದೇ. ಇಲ್ಲಿನ ಯುವಜನತೆ ಉನ್ನತ ಶಿಕ್ಷಣಕ್ಕಾಗಿ ಪಕ್ಕದ ಕುಮಟಾ ಅಥವಾ ಹುಬ್ಬಳ್ಳಿ ಧಾರವಾಡಕ್ಕೆ ವಲಸೆ ಹೋಗುವುದು ಮಾಮೂಲಿಯಾಗಿದೆ.

ತಾಲ್ಲೂಕು ಕೇಂದ್ರಗಳಿಂದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಈವರೆಗೆ ಈ ಕ್ಷೇತ್ರ ಕಂಡಿಲ್ಲ. ಚುನಾವಣೆಗೆ ಮುನ್ನ ಮತ ಓಲೈಕೆಗಾಗಿ ಸಿದ್ಧವಾದ ರಸ್ತೆಗಳನ್ನು ಬಿಟ್ಟರೆ ಈಗಲೂ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ರಸ್ತೆ, ಚರಂಡಿ ಮುಂತಾದ ಮೂಲ ಸೌಕರ್ಯಗಳಿಲ್ಲ. ಯಲ್ಲಾಪುರ ಕ್ಷೇತ್ರ ಜನ್ಮತಾಳುವ ಮುನ್ನ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳು ಹಳಿಯಾಳ ವಿಧಾನಸಭಾ ಕ್ಷೇತ್ರದ ಭಾಗಿವಾಗಿದ್ದವು. ಆಗ ಕಾಂಗ್ರೆಸಿನ ಆರ್‌.ವಿ ದೇಶಪಾಂಡೆ ಇಲ್ಲಿಂದಲೇ ಗೆದ್ದು ಸರ್ಕಾರಗಳ ಸಂಪುಟಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಆದರೂ ಈ ಸಮಸ್ಯೆಗಳು ಕೇವಲ ಸಮಸ್ಯೆಗಳಾಗಿಯೇ ಉಳಿದಿವೆ. ಆದರೆ, ಈ ಯಾವ ಸಮಸ್ಯೆಯೂ ಎಂದಿನಂತೆ ಈ ಬಾರಿಯೂ ಚುನಾವಣೆಯ ಮುಖ್ಯ ವಿಚಾರವಾಗದೇ ಇರುವುದು ವಿಪರ್ಯಾಸ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...