ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ ಕುರಿತು ಮುಂಡಗೋಡ ಮೂಲದ ಗುತ್ತಿಗೆದಾರರೊಬ್ಬರು ದೂರು ನೀಡಿದ್ದಾರೆ. ಮುಂಡಗೋಡದ ಕಂಬಾರಗಟ್ಟಿ ಪ್ಲಾಟ್ ನಿವಾಸಿ, ಗುತ್ತಿಗೆದಾರ ನಜೀರ್ ಅಹಮದ್ ದಾವಲ್‌ಸಾಬ್ ಕಬನೂರ (52) ಅವರು ಈ ಕುರಿತು ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಯಲ್ಲಾಪುರ ತಾಲೂಕಿನ ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 2025ರ ಡಿಸೆಂಬರ್‌ನಿಂದ ಅಕ್ಟೋಬರ್ 4, 2026ರ ಬೆಳಗ್ಗೆ 10 ಗಂಟೆಯವರೆಗೆ ವಿವಿಧ ಪ್ರಮಾಣದ ಕಡಿ ಹಾಗೂ ಎಂ-ಸ್ಯಾಂಡ್‌ಗಳನ್ನು ದಾಸ್ತಾನು ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ, ಶಿರಸಿಯಲ್ಲಿ ಗಾಂಜಾ ಸೇವನೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಇದರಲ್ಲಿ 10 ಲಾರಿಗಳ 20 ಎಂಎಂ ಕಡಿ, 10 ಲಾರಿಗಳ ಎಂ-ಸ್ಯಾಂಡ್ ಹಾಗೂ 6 ಲಾರಿಗಳ 40 ಎಂಎಂ ಕಡಿ ಸೇರಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದಾಸ್ತಾನಿನಿಂದ ಸುಮಾರು ನಾಲ್ಕು ಟ್ರ್ಯಾಕ್ಟರ್‌ಗಳಷ್ಟು 20 ಎಂಎಂ ಕಡಿ ಹಾಗೂ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಎಂ-ಸ್ಯಾಂಡ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಳವಾದ ಸ್ವತ್ತಿನ ಒಟ್ಟು ಮೌಲ್ಯ ಸುಮಾರು ₹36,000 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಜೀರ್ ಅಹಮದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




