ಮನೆಯವರಿಗೆ ಚಾಕು ತೋರಿಸಿ ಬೆದರಿಸಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಮೊಬೈಲ್ ಹಾಗೂ ನಗದು ಹಣದ ಜೊತೆಗೆ ಬೈಕ್‌ವೊಂದನ್ನು ಕಳವು ಮಾಡಿಕೊಂಡು ಹೋದ ಘಟನೆ ಯಲ್ಲಾಪುರ ತಾಲೂಕಿನ ಬಾಳಗೀಮನೆ ಗ್ರಾಮದಲ್ಲಿ ನಡೆದಿದೆ.
ಬಾಳಗೀಮನೆ ನಿವಾಸಿ ರಾಮಚಂದ್ರ ಮಹಾಬಲೇಶ್ವರ ಭಟ್ಟ (63) ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಆರೋಪಿಗಳು ಮನೆಯ ಮುಂದಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದು, ಮನೆಯ ಮೇಲಿನ ಮಹಡಿಯಲ್ಲಿದ್ದ ಮೂರು ಕೊಠಡಿಗಳಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ನಂತರ ಒಂದು ಕೊಠಡಿಯಲ್ಲಿದ್ದ ಗೋಡ್ರೇಜ್ ಕಪಾಟನ್ನು ಅದರ ಚಾವಿಯಿಂದಲೇ ತೆರೆದು, ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಒಳಗಿನ ಡ್ರಾವರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಸುಮಾರು 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ತಲಾ 10 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 12 ಗ್ರಾಂ ತೂಕದ ಎರಡು ಕಿವಿಯೋಲೆಗಳು, 3 ಗ್ರಾಂ ತೂಕದ ಉಂಗುರ ಹಾಗೂ 1 ಗ್ರಾಂ ತೂಕದ ಚಿನ್ನದ ಲಾಕೆಟ್ ಸೇರಿದಂತೆ ಒಟ್ಟು ಸುಮಾರು 56 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ನೀರು ತುಂಬಲು ಮೋಟಾರ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು
ಇದರ ಜೊತೆಗೆ ಎರಡು ಬೆಳ್ಳಿ ಬಟ್ಟಲುಗಳು, ಎರಡು ಕೈಗಡಿಯಾರಗಳು, ಸ್ಯಾಮ್ಸಂಗ್ ಮತ್ತು ವಿವೋ ಕಂಪನಿಯ ತಲಾ ಒಂದು ಮೊಬೈಲ್, ₹12 ಸಾವಿರ ನಗದು ಹಣ ಹಾಗೂ ಕೆಎ-31/ಇಬಿ-7117 ನೋಂದಣಿ ಸಂಖ್ಯೆಯ ಟಿವಿಎಸ್ ಅಪಾಚೆ ಬೈಕ್‌ನ್ನೂ ಕಳವು ಮಾಡಿದ್ದಾರೆ.
ಕಳವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹3.70 ಲಕ್ಷಕ್ಕೂ ಅಧಿಕವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ವೇಳೆ ಆರೋಪಿಗಳು ಚಾಕು ತೋರಿಸಿ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಬಳಿಕ ರಾಮಚಂದ್ರ ಭಟ್ಟ ಅವರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಮನೆಯವರೊಂದಿಗೆ ಚರ್ಚಿಸಿದ ನಂತರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 231/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 309(6)ರ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




