ಯಲ್ಲಾಪುರ: ಮನೆಯ ಹಿಂದಿನ ಬಾಗಿಲಿನ ಚಿಲಕದ ಹುಕ್ಕನ್ನು ಮುರಿದು ಒಳನುಗ್ಗಿದ ಕಳ್ಳರು ಪುರೋಹಿತರೊಬ್ಬರ ಮನೆಯಿಂದ ಸುಮಾರು ₹83,500 ಮೌಲ್ಯದ ತಾಮ್ರ, ಹಿತ್ತಾಳೆ ಪಾತ್ರೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮದ ಹೊನ್ನಗದ್ದೆಯ ಗಿಡಗಾರಿ ನಿವಾಸಿ ಮಂಜುನಾಥ ಅಲಿಯಾಸ್ ಗಿರೀಶ ಶಂಕರ ಭಟ್ಟ (41) ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಸದ್ಯ ಯಲ್ಲಾಪುರದ ಅಜ್ಜಪ್ಪನಕೆರೆ ಗಣಪತಿ ದೇವಸ್ಥಾನದ ಪಕ್ಕದಲ್ಲಿ ವಾಸವಾಗಿದ್ದಾರೆ.
ಸೆಪ್ಟೆಂಬರ್ 3ರ ಸಂಜೆ 5 ಗಂಟೆಯಿಂದ ನವೆಂಬರ್ 1ರ ಮಧ್ಯಾಹ್ನ 3.30ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಹಿಂದಿನ ಬಾಗಿಲಿನ ಚಿಲಕದ ಹುಕ್ಕನ್ನು ಮುರಿದು ಒಳನುಗ್ಗಿದ್ದಾರೆ. ಮನೆಯ ಒಳಜಗಲಿಯಲ್ಲಿ ಇಟ್ಟಿದ್ದ ದೊಡ್ಡ ತಾಮ್ರದ ಹಂಡೆ, ಕಡಬು ಮಾಡುವ ದಳ್ಳೆ, ತಾಮ್ರದ ತೋಪುಗಳು, ಅನ್ನ ಮಾಡುವ ತಾಮ್ರದ ಹಂಡೆಗಳು ಸೇರಿದಂತೆ ವಿವಿಧ ತಾಮ್ರದ ಪಾತ್ರೆಗಳನ್ನು ಕದ್ದೊಯ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಪಿಎಸ್‌ಐ ಕಡೆಗೆ ರಾಡ್ ಎಸೆದ, ಟ್ಯಾಂಕರ್ ಚಾಲಕನ ಬಂಧನ
ಅಲ್ಲದೆ, ದೇವರ ಮನೆಯಲ್ಲಿದ್ದ ಹಿತ್ತಾಳೆ ಜಾಗಟೆಗಳು, ತಂಬಿಗೆಗಳು, ದೀಪಗಳು, ಸೌಟುಗಳು ಹಾಗೂ ಅಡುಗೆ ಮನೆಯಲ್ಲಿದ್ದ ಕುಕ್ಕರ್, ಗ್ಯಾಸ್ ಒಲೆಯ ಬರ್ನರ್‌ಗಳು ಮತ್ತು ನಾನ್‌ಸ್ಟಿಕ್ ತವಾವನ್ನೂ ಕಳ್ಳರು ಕದ್ದಿದ್ದಾರೆ.
ಒಟ್ಟು ಸುಮಾರು 143 ಕೆ.ಜಿ. ತೂಕದ ತಾಮ್ರದ ಪಾತ್ರೆಗಳು, 58 ಕೆ.ಜಿ. ತೂಕದ ಹಿತ್ತಾಳೆ ಪಾತ್ರೆಗಳು ಹಾಗೂ ಇತರ ವಸ್ತುಗಳು ಸೇರಿ ₹83,500 ಮೌಲ್ಯದ ಸ್ವತ್ತು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳುವಾದ ಪಾತ್ರೆಗಳನ್ನು ಹುಡುಕಾಡಿ ಮನೆಯವರೊಂದಿಗೆ ಚರ್ಚಿಸಿದ ಬಳಿಕ ಮಂಜುನಾಥ ಭಟ್ಟ ಅವರು ತಡವಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



