ಈದಿನ ವಿಶೇಷ | ಬೊಮ್ಮಾಯಿ ಮಾಮನ ದುರಹಂಕಾರ: ನೋವು ತೋಡಿಕೊಂಡ ಪವನ್ ಕುಮಾರ

Date:

ಈ ಬಾರಿಯ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಕನ್ನಡದ ಖ್ಯಾತ ನಿರ್ದೇಶಕ, ನಿರ್ಮಾಪಕ ಪವನ್‌ ಒಡೆಯರ್‌ ಅವರ ಒಂದು ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದೆ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ರಾಷ್ಟ್ರಪ್ರಶಸ್ತಿ ಗೆದ್ದ ʼಡೊಳ್ಳುʼ ಚಿತ್ರತಂಡದೊಂದಿಗೆ ಅಹಂಕಾರದಿಂದ ವರ್ತಿಸಿದ ಘಟನೆಯನ್ನು ನೆನೆದು ಆ ಚಿತ್ರದ ನಿರ್ಮಾಪಕರೂ ಆದ ಪವನ್‌ ನೋವಿನಿಂದ ಹೇಳಿಕೊಂಡಿದ್ದರು. ಸದ್ಯ ಅವರ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಈದಿನ.ಕಾಮ್‌ ಜೊತೆಗೆ ಮಾತನಾಡಿರುವ ಪವನ್‌ ಕುಮಾರ್ ಒಡೆಯರ್‌ ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಚುನಾವಣೆ ಫಲಿತಾಂಶದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕುರಿತು ನೀವು ಮಾಡಿದ್ದ ಟ್ವೀಟ್‌ ಭಾರೀ ಚರ್ಚೆಗೆ ಕಾರಣವಾಗಿದೆ…

ಕಳೆದ ವರ್ಷ ನಮ್ಮ ʼಡೊಳ್ಳುʼ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಕೇವಲ ನಮ್ಮ ಚಿತ್ರ ಮಾತ್ರವಲ್ಲ, ಸಂಚಾರಿ ವಿಜಯ್‌ ನಟನೆಯ ʼತಲೆದಂಡ’ ಮತ್ತು ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರಗಳು ಕೂಡ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದವು. ಹೀಗೆ ಬೇರೆ ರಾಜ್ಯಗಳ ಸಿನಿಮಾಗಳು ಪ್ರಶಸ್ತಿಗಳನ್ನು ಗೆದ್ದಾಗ ಅಲ್ಲಿನ ಸರ್ಕಾರಗಳು ಸಂಬಂಧಪಟ್ಟ ಚಿತ್ರತಂಡದವರನ್ನು ಕರೆದು ಉಭಯ ಕುಶಲೋಪರಿ ವಿಚಾರಿಸಿ, ಗೌರವಿಸುವ ಪರಿಪಾಠ ಇದೆ. ನಾವು ಕೂಡ ರಾಜ್ಯ ಸರ್ಕಾರದಿಂದ ಅದೇ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಿನಿಮಾ ಆಸಕ್ತಿ ಇಲ್ಲದಿದ್ದಿದ್ದರೆ ನಾವು ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಬೊಮ್ಮಾಯಿ ಅವರು ತೆಲುಗಿನ ʼಆರ್‌ಆರ್‌ಆರ್‌ʼ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ನಾಲ್ಕು ಗಂಟೆ ಕೂತಿದ್ದರು. ನಮ್ಮ ಕನ್ನಡದ್ದೇ ʼ777 ಚಾರ್ಲಿʼ ಚಿತ್ರವನ್ನು ನೋಡಿ ತೆರಿಗೆ ವಿನಾಯಿತಿ ನೀಡಿದ್ದರು. ನಾವು ಕೂಡ ಕನ್ನಡದವರೇ, ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯನ್ನು ಆಧರಿಸಿ ಡೊಳ್ಳು ಮತ್ತು ಪರಿಸರ ಕಾಳಜಿಯುಳ್ಳ ತಲೆದಂಡ ಹಾಗೂ ನಾದದ ನವನೀತ ಚಿತ್ರಗಳನ್ನು ಮಾಡಿದ್ದೇವೆ ಹೀಗಾಗಿ ನಮ್ಮೆಲ್ಲರನ್ನು ಕನಿಷ್ಠ ಕಾಟಾಚಾರಕ್ಕಾದರೂ ಕರೆಸಿ ಮಾತನಾಡುತ್ತಾರೆ ಎಂದು ನಂಬಿಕೊಂಡಿದ್ದೆವು. ಆದರೆ, ಹಾಗಾಗಲಿಲ್ಲ. ಸಿನಿಮಾ ವೀಕ್ಷಣೆಗೆ ಬರುವುದಕ್ಕೂ ನಿರಾಕರಿಸಿದರು. ಅದೇ ಬೇಸರವನ್ನು ಟ್ವೀಟ್‌ ಮೂಲಕ ಹೇಳಿಕೊಂಡೆ ಅಷ್ಟೇ.

ಡೊಳ್ಳು ಸಿನಿಮಾ ವೀಕ್ಷಣೆಗೆ ನೀವು ಆಹ್ವಾನಿಸಿದಾಗ ಬೊಮ್ಮಾಯಿ ಅವರ ಪ್ರತಿಕ್ರಿಯೆ ಏನಾಗಿತ್ತು?

ನಮ್ಮ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಗೆದ್ದರು ಕೂಡ ಸರ್ಕಾರದ ಯಾರೊಬ್ಬರು ನಮ್ಮನ್ನು ಮಾತನಾಡಿಸಲೇ ಇಲ್ಲ. ನಾವಾಗಿಯೇ ಮುಖ್ಯಮಂತ್ರಿಗಳ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ʼಡೊಳ್ಳುʼ ಸಿನಿಮಾ ವೀಕ್ಷಣೆಗೆ ಆಹ್ವಾನಿಸಿದೆವು. ಅವರಿಗೆ ನಮ್ಮ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಇರಲಿಲ್ಲ. ʼಆಗಲ್ಲ ರೀʼ ಅಂತ ಕರೆಯನ್ನು ಕಟ್‌ ಮಾಡಿಬಿಟ್ಟರು. ಸ್ವಲ್ಪ ದಿನದ ಬಳಿಕ ನೇರವಾಗಿ ಮುಖ್ಯಮಂತ್ರಿಗಳನ್ನೇ ಭೇಟಿಯಾಗಿ ಆಹ್ವಾನಿಸಿದರಾಯಿತು ಎಂದುಕೊಂಡು ಅವರ ಕಚೇರಿಗೆ ಹೋದೆವು. ನಮ್ಮನ್ನು ನೋಡಿದ ಬೊಮ್ಮಾಯಿ ಅವರು ಸೌಜನ್ಯಕ್ಕೆ ಕುಳಿತುಕೊಳ್ಳುವಂತೆಯೂ ಹೇಳಲಿಲ್ಲ. ಯಾರು ನೀವು? ಯಾರು ನಿಮ್ಮನ್ನು ಒಳಗಡೆ ಬಿಟ್ಟಿದ್ದು? ಯಾವ ಸಿನಿಮಾನೂ ನೋಡಕಾಗಲ್ಲ ನಡೀರಿ ಎಂದರು. ಅವರ ಆ ಮಾತುಗಳು ನಿಜಕ್ಕೂ ನಮಗೆ ನೋವುಂಟು ಮಾಡಿತು.

ನಿಮ್ಮ ಮಾತಿಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಅದರ ಬಗ್ಗೆ ಏನು ಹೇಳುತ್ತೀರಿ?

ನಾನು ಈ ಬಗ್ಗೆ ಟ್ವೀಟ್‌ ಮಾಡಿದ ನಂತರ ಕೆಲವರು ಇದು ರಾಜಕೀಯ ಪ್ರೇರಿತ ಹೇಳಿಕೆ, ಬಿಜೆಪಿಯನ್ನು ಗುರಿಯಾಗಿಸಿ ಈ ರೀತಿ ಮಾತನಾಡುತ್ತಿದ್ಧೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ನಡೆದಾಗಲೇ ಹೇಳಲಿಕ್ಕೆ ನಿಮಗೆ ಧಮ್‌ ಇರಲಿಲ್ವಾ? ಇಷ್ಟು ದಿನ ಏನು ಮಾಡುತ್ತಿದ್ದಿರಿ ಅಂತೆಲ್ಲ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಅಸಲಿಯತ್ತು ಗೊತ್ತಿಲ್ಲ. ನನಗೆ ರಾಜಕೀಯದಿಂದ ಏನಾಗಬೇಕಿದೆ ಹೇಳಿ? ಘಟನೆ ನಡೆದ ನಂತರ ನಾನು ನಮ್ಮ ತಂಡಕ್ಕಾದ ಅವಮಾನದ ಬಗ್ಗೆ ಆಗಲೇ ಮಾಧ್ಯಮಗಳಲ್ಲಿ ಮಾತನಾಡಿದ್ದೆ. ಆದರೆ, ಯಾರು ಕೂಡ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲವಲ್ಲ. ಈ ರೀತಿ ಅವಮಾನ ಆಗಿದ್ದನ್ನು ನಾವು ಹೇಳಿಕೊಳ್ಳಲೇಬಾರದಾ? ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನನಗಾದ ಅವಮಾನವನ್ನು ಹೇಳಿಕೊಂಡಿದ್ದೇನಷ್ಟೇ. ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.

ನಿಮ್ಮ ಚಿತ್ರವನ್ನು ಪ್ರೋತ್ಸಾಹಿಸಿದ್ದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ಈಗ ರಚನೆಯಾಗುತ್ತಿರುವ ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಂಡಿದ್ದೀರಿ?

ನಾನು ರಾಜಕೀಯ ಪಕ್ಷಗಳ ಹಿಂಬಾಲಕನಲ್ಲ, ವ್ಯಕ್ತಿತ್ವದ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರೂ ನಾನು ಇಷ್ಟ ಪಡುವ ನಾಯಕರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗುತ್ತಿರುವುದು ಖುಷಿಯ ವಿಚಾರ. ಅವರು ಈಗಾಗಲೇ 5 ವರ್ಷಗಳ ಪೂರ್ಣ ಅವಧಿಯ ಆಡಳಿತ ನಡೆಸಿ ಯಶಸ್ವಿ ಮುಖ್ಯಮಂತ್ರಿ ಎನ್ನಿಸಿಕೊಂಡವರು. ಮೈಸೂರಿನಲ್ಲಿ ಡಾ. ರಾಜ್‌ಕುಮಾರ್‌ ಹೆಸರಿನಲ್ಲಿ ಚಿತ್ರನಗರಿ ನಿರ್ಮಿಸುವ ಭರವಸೆ ನೀಡಿದ್ದರು. ಅವರ ಮಾತಿನಂತೆ ಚಿತ್ರನಗರಿ ನಿರ್ಮಾಣವಾದರೆ ನಮ್ಮ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ. ಜೊತೆಗೆ ಹೊಸಬರ ಚಿತ್ರಗಳಿಗೆ ಉತ್ತೇಜನ ನೀಡುವ ಕುರಿತು ಸಿದ್ದರಾಮಯ್ಯನವರ ಸರ್ಕಾರ ಚಿಂತನೆ ನಡೆಸಬೇಕು.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನ ಪಾಪ್‌ಕಾರ್ನ್ ಬೆಲೆಗೆ ಹೆದರಿ ಮಲ್ಟಿಫ್ಲೆಕ್ಸ್, ಥಿಯೇಟರ್‌ಗಳಿಗೆ ಬರುತ್ತಿಲ್ಲವೇ?

ತೆಲುಗು ಸಿನಿಮಾ ನಿರ್ದೇಶಕ ತೇಜಾ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಒಂದು...

ದಸರಾ | ನನಗೆ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ....

ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ...