ತುಪ್ಪದ ತಕರಾರು | ಅಮುಲ್‌ ಅನುಕೂಲಕ್ಕಾಗಿ ಬಿಜೆಪಿ ಮಾಡಿದ ಮಸಲತ್ತು

Date:

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಬಳಕೆಯಾಗುತ್ತಿದ್ದ ನಮ್ಮ ಕರ್ನಾಟಕದ ನಂದಿನಿ ಬ್ರ್ಯಾಂಡ್‌ನ ತುಪ್ಪದ ಸರಬರಾಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಉದ್ದೇಶಪೂರ್ವಕವಾಗಿ ನಿಲ್ಲಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

ಬಿಜೆಪಿಯವರು ಆರೋಪ ಮಾಡುತ್ತಿರುವಂತೆ ಇದರ ಹಿಂದೆ ಕಾಂಗ್ರೆಸ್‌ ಸರ್ಕಾರದ ಕೈವಾಡ ಇದೆಯೇ? ಹೀಗೆ ಏಕಾಏಕಿಯಾಗಿ ತಿರುಪತಿಗೆ ನಂದಿನಿ ತುಪ್ಪದ ಸಪ್ಲೈ ನಿಲ್ಲಲು ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಹೇಳಿದ್ದೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಇತ್ತೀಚೆಗೆ ಹಾಲಿನ ದರ ಹೆಚ್ಚಳದ ಬಗ್ಗೆ ಮಾತನಾಡುತ್ತಾ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಂದಿನಿ ತುಪ್ಪದ ಸಪ್ಲೈ ನಿಂತಿರುವ ಬಗ್ಗೆ ತಿಳಿಸಿದ್ದರು. “ನಂದಿನಿ ತುಪ್ಪ ಉತ್ತಮ ಗುಣಮುಟ್ಟವನ್ನು ಹೊಂದಿದೆ. ಹೀಗಾಗಿ ಬೆಲೆ ಕೂಡ ಜಾಸ್ತಿ ಇದೆ. ಸಹಜವಾಗಿಯೇ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡುವವರಿಗೆ ತಿರುಪತಿ ದೇವಸ್ಥಾನದ ಟೆಂಡರ್‌ ಸಿಕ್ಕಿದೆ” ಎಂದಿದ್ದರು. ಆದರೆ, ರಾಜ್ಯ ಬಿಜೆಪಿ ನಾಯಕರು ಇದನ್ನೇ ರಾಜಕೀಯಕ್ಕೆ ಬಳಸಿಕೊಂಡರು.

ಬಿಜೆಪಿ ನಾಯಕರು ಹುಟ್ಟುಹಾಕಿದ ಕಟ್ಟು ಕಥೆಗಳೇನು?

ಕಳೆದ 50 ವರ್ಷಗಳಿಂದ ನಂದಿನಿ ತುಪ್ಪ ತಿರುಪತಿಗೆ ಸಪ್ಲೈ ಆಗುತ್ತಿತ್ತು ಎಂದು ನಳಿನ್‌ಕುಮಾರ್‌ ಕಟೀಲ್‌, ವಿಜಯೇಂದ್ರ ತರಹದ ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿದ್ದಾರೆ. ಆದರೆ, ಅದು ಸತ್ಯಕ್ಕೆ ದೂರವಾದ ಮಾತು. ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಅವರು ಕೂಡ 20 ವರ್ಷದಿಂದ ನಂದಿನಿ ತುಪ್ಪ ತಿರುಪತಿಗೆ ಸಪ್ಲೈ ಆಗುತ್ತಿದೆ ಎಂದಿದ್ದಾರೆ. ಈ ಮಾತು ಕೂಡ ನಿಜವಲ್ಲ.

ಸ್ವತಃ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ನ ಎಕ್ಸಿಕ್ಯೂಟಿವ್‌ ಆಫೀಸರ್‌ ಧರ್ಮಾ ರೆಡ್ಡಿ ಈ ಎಲ್ಲಾ ಅಂತೆಕಂತೆಯ ಮಾತುಗಳನ್ನು ತಳ್ಳಿ ಹಾಕಿದ್ದಾರೆ. “ನಾವು ಪ್ರತಿ ಆರು ತಿಂಗಳಿಗೊಮ್ಮೆ ತುಪ್ಪದ ಖರೀದಿಗೆ ಆನ್‌ಲೈನ್‌ ಟೆಂಡರ್‌ ಕರೆಯುತ್ತೇವೆ. ಆ ಟೆಂಡರ್‌ನಲ್ಲಿ ಯಾರು ಕಡಿಮೆ ಬೆಲೆಗೆ ತುಪ್ಪದ ಸರಬರಾಜಿಗೆ ಒಪ್ಪಿಕೊಳ್ತಾರೊ ಅಂಥವರಿಂದ ಖರೀದಿ ಮಾಡಲಾಗುತ್ತದೆ. ಕಳೆದ 20 ವರ್ಷಗಳಿಂದ ನಿರಂತರವಾಗಿ ನಂದಿನಿ ತುಪ್ಪವನ್ನು ಖರೀದಿ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಅಧಿಕಾರವಧಿಯಲ್ಲೇ ನಿಂತಿದ್ದ ತುಪ್ಪದ ಸಪ್ಲೈ

ತುಪ್ಪದ ಸಪ್ಲೈ ನಿಲ್ಲಲು ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೇ ಮೂಲ ಕಾರಣ. ತಿರುಪತಿ ತಿರುಮಲ ಟ್ರಸ್ಟ್‌ 6 ತಿಂಗಳಿಗೊಮ್ಮೆ ತುಪ್ಪದ ಖರೀದಿಗೆ ಟೆಂಡರ್‌ ಕರೆಯುವಂತೆ ಕಳೆದ ಮಾರ್ಚ್‌ನಲ್ಲೂ ಟೆಂಡರ್‌ ಪ್ರಕ್ರಿಯೆ ನಡೆಸಿತ್ತು. ಆಗ ಕೆಎಂಎಫ್‌ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ ಎನ್ನುವ ಅಂಶವನ್ನು ಧರ್ಮಾ ರೆಡ್ಡಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಕಳೆದ ಮಾರ್ಚ್‌ನಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಲ್ಲವೇ? ಬಿಜೆಪಿಯ ಪ್ರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗ ಕೆಎಂಎಫ್‌ನ ಅಧ್ಯಕ್ಷರಾಗಿದ್ದರಲ್ಲವೇ? ಅಧಿಕಾರಲ್ಲಿದ್ದಾಗ ಟೆಂಡರ್‌ ಪ್ರಕ್ರಿಯೆಗೆ ಹಾಜರಾಗದೆ, ತಿರುಪತಿಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡದ ಬಿಜೆಪಿ ನಾಯಕರು ಕಳೆದ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.

ಕಳೆದ ಮಾರ್ಚ್‌ನಲ್ಲಿ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಎಂಎಫ್‌ ಭಾಗಿಯಾಗಿರಲಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಆದರೆ, ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಎಂ ಸಿದ್ದರಾಮಯ್ಯ, “ಒಂದೂವರೆ ವರ್ಷದಿಂದಲೂ ಕೆಎಂಎಫ್‌, ತಿರುಪತಿ ದೇವಸ್ಥಾನದ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ” ಎಂಬ ಅಂಶವನ್ನು ಬಯಲಿಗೆಳೆದಿದ್ದಾರೆ.

ಕರ್ನಾಟಕದ ಬಿಜೆಪಿ ಶಾಸಕರೇ ಟಿಟಿಡಿ ಸದಸ್ಯರಾಗಿರುವಾಗ ತುಪ್ಪದ ಸಪ್ಲೈ ನಿಂತಿದ್ದು ಹೇಗೆ?

ಇನ್ನೊಂದು ಪ್ರಮುಖವಾದ ವಿಚಾರ ಅಂದ್ರೆ ಬೆಂಗಳೂರಿನ ಯಲಹಂಕಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಿಎಂ ಯಡಿಯೂರಪ್ಪನವ ಆಪ್ತ ಎಸ್‌.ಆರ್‌ ವಿಶ್ವನಾಥ್‌ ಅವರು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ನ ಸದಸ್ಯರಲ್ಲೊಬ್ಬರು. 2021ರ ಸೆಪ್ಟೆಂಬರ್‌ನಲ್ಲಿ, ಅಂದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ವಿಶ್ವನಾಥ್‌ ಅವರನ್ನು ಟಿಟಿಡಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ನಮ್ಮ ರಾಜ್ಯದ, ಅದರಲ್ಲೂ ಬಿಜೆಪಿಯ ಶಾಸಕರೇ ಟಿಟಿಡಿಯ ಸದಸ್ಯರಾಗಿದ್ದರೂ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ತಿರುಪತಿಗೆ ಯಾಕೆ ತುಪ್ಪ ಸಪ್ಲೈ ಮಾಡೋಕೆ ಸಾಧ್ಯ ಆಗಲಿಲ್ಲ? ತಿರುಪತಿ ದೇವಸ್ಥಾನದವರು ಬೇರೆ ಬ್ರ್ಯಾಂಡ್‌ಗಳ ತುಪ್ಪವನ್ನು ಖರೀದಿ ಮಾಡುತ್ತಿದ್ದಾಗ ಅದೇ ಮಂಡಳಿಯ ಸದಸ್ಯರಾಗಿರೋ ವಿಶ್ವನಾಥ್‌ ಅವರು ನಮ್ಮ ನಂದಿನಿ ತುಪ್ಪವನ್ನೇ ಖರೀದಿ ಮಾಡಿ ಅಂತ ಯಾಕೆ ಶಿಫಾರಸ್ಸು ಮಾಡಲಿಲ್ಲ?

ತುಪ್ಪದ ಸರಬರಾಜು ಸ್ಥಗಿತಗೊಂಡಿರುವ ವಿಚಾರ ಮುನ್ನೆಲೆಗೆ ಬಂದ ನಂತರ ವಿಶ್ವನಾಥ್‌ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಬೆಲೆ ಕಡಿಮೆ ಮಾಡಿ ಎಂದು ಕೆಎಂಎಫ್‌ಗೆ ಪತ್ರ ಬರೆದಿದ್ದೆ ಎಂದಿದ್ದಾರಷ್ಟೇ. ಆದರೆ, ನಮ್ಮ ನಂದಿನಿ ತುಪ್ಪದ ಗುಣಮಟ್ಟದ ಬಗ್ಗೆ ತಿಳಿದಿರುವ ಸನ್ಮಾನ್ಯ ವಿಶ್ವನಾಥ್‌ ಅವರು ನಿಗದಿತ ಬೆಲೆಗೆ ತುಪ್ಪ ಖರೀದಿ ಮಾಡುವಂತೆ ಟಿಟಿಡಿಯ ಆಡಳಿತ ಮಂಡಳಿಯ ಮನವೊಲಿಸುವ ಪ್ರಯತ್ನ ಮಾಡಲಿಲ್ಲವೇಕೆ?

ತಿರುಪತಿ ತುಪ್ಪದ ಟೆಂಡರ್‌ ಮೇಲೆ ಗುಜರಾತಿ ಅಮುಲ್‌ ಕಣ್ಣು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಅದೇ ಪಕ್ಷದ ಶಾಸಕರು ತಿರುಪತಿ ದೇವಸ್ತಾನಂ ಟ್ರಸ್ಟ್‌ನ ಸದಸ್ಯರಾಗಿದ್ದರೂ ದೇವಸ್ಥಾನಕ್ಕೆ ನಂದಿನಿ ತುಪ್ಪದ ಸರಬರಾಜು ನಿಂತಿದ್ದು ಯಾಕೆ ಎಂಬ ಪ್ರಶ್ನೆಗೆ ಅಸಲಿ ಉತ್ತರ ಇಲ್ಲಿದೆ.

ಬಿಜೆಪಿಯರ ಒಲವು ಇರುವುದು ಗುಜರಾತಿನ ಅಮುಲ್‌ ಬ್ರ್ಯಾಂಡ್‌ ಮೇಲೆ. ಈ ಅಮುಲ್‌ ಕಂಪನಿ ನಮ್ಮ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ಮೇಲೂ ಕಣ್ಣಿಟ್ಟಿತ್ತು. ಆರು ತಿಂಗಳ ಹಿಂದೆ ತಂತ್ರಜ್ಞಾನ ವಿನಿಮಯದ ನೆಪದಲ್ಲಿ ನಂದಿನಿ ಬ್ರ್ಯಾಂಡ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿತ್ತು. ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರೇ ನಂದಿನಿ-ಅಮುಲ್‌ ವಿಲೀನದ ಬಗ್ಗೆ ಮಾತನಾಡಿದ್ದರು. ರಾಜ್ಯ ಬಿಜೆಪಿಯ ನಾಯಕರು ಕೂಡ ದೆಹಲಿ ಹುಕೂಮ್ಮತಿಗೆ ಜೀ ಹುಜೂರ್‌ ಎಂದಾಗಿತ್ತು. ಆದರೆ, ಸ್ವಾಭಿಮಾನಿ ಕನ್ನಡಿಗರ ಹೋರಾಟದ ಫಲವಾಗಿ ನಂದಿನಿ ಬ್ರ್ಯಾಂಡ್‌ ಉಳಿದುಕೊಂಡಿತು.

ಈಗ ಅದೇ ಅಮುಲ್‌ ಕಂಪನಿ ಆಂಧ್ರಪ್ರದೇಶದ ಜನಪ್ರಿಯ ಮಿಲ್ಕ್‌ ಬ್ರ್ಯಾಂಡ್‌ ಚಿತ್ತೂರ್‌ ಡೈರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚಿತ್ತೂರಿನಿಂದ 80 ಕಿಲೋ ಮೀಟರ್‌ ದೂರದಲ್ಲಿರುವ ತಿರುಪತಿಯ ದೇವಸ್ಥಾನಕ್ಕೆ ಇದೇ ಚಿತ್ತೂರ್‌ ಅಮುಲ್‌ ಮಿಲ್ಕ್‌ ಡೈರಿ ಇನ್ನುಮುಂದೆ ತುಪ್ಪ ಸಪ್ಲೈ ಮಾಡಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಎಮ್‌ಎಫ್‌ ಸಂಸ್ಥೆ ತಿರುಪತಿ ದೇವಸ್ಥಾನದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನೋಡಿಕೊಳ್ಳಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಕೂಡ ಟೆಂಡರ್‌ ಪಡೆದ ಕಂಪನಿಯ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ. ಕಡಿಮೆ ಬೆಲೆಗೆ ತುಪ್ಪ ಸರಬರಾಜು ಮಾಡಲು ಒಪ್ಪಿದವರಿಗೆ ಟೆಂಡರ್‌ ಕೊಡಲಾಗಿದೆ ಎಂದು ಹಾರಿಕೆಯ ಉತ್ತರಗಳನ್ನು ಕೊಡುತ್ತಿದ್ದಾರಷ್ಟೇ.

ತಾವು ಅಧಿಕಾರದಲ್ಲಿದ್ದಾಗ ನಂದಿನಿ ಬ್ರ್ಯಾಂಡ್‌ನ ಮತ್ತು ತಿರುಪತಿ ಲಡ್ಡು ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ನಾಯಕರು, ಕನಿಷ್ಠ ನೈತಿಕತೆಯೂ ಇಲ್ಲದವರಂತೆ ತುಪ್ಪದ ವಿಚಾರದಲ್ಲಿ ಕೀಳು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಹೇಳಿಕೆ ಟೀಕಿಸಿದ ಬಿಜೆಪಿಯ ಬಿಕಾನೇರ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷರ ಬಂಧನ!

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ...

ಮೀಸಲಾತಿ ರದ್ದು ಮಾಡುವುದೇ ಬಿಜೆಪಿ ಗುರಿ; ಅದರ ನಾಯಕರ ಹೇಳಿಕೆಗಳಿಂದಲೇ ಸ್ಪಷ್ಟ: ರಾಹುಲ್ ಗಾಂಧಿ

ಸಂವಿಧಾನವನ್ನು ಬದಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾಶಪಡಿಸುವುದು ಮತ್ತು ದಲಿತರು, ಹಿಂದುಳಿದ ವರ್ಗಗಳು...

ಬಿಜೆಪಿ ನಾಯಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದ ತೇಜಸ್ವಿ ಯಾದವ್!

ಬಿಹಾರದ ಎರಡನೇ ಹಂತದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ನಾಯಕರು ಖಿನ್ನತೆಗೆ...