ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧವಾಗಿ ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಇಂಡಿಯಾ ಒಕ್ಕೂಟ, ಇತರೆ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಲಿದೆ. ರಾಜ್ಯದಲ್ಲೂ ಅಲ್ಲಲ್ಲಿ ಎಸ್‌ಐಆರ್ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್ ನೆಪದಲ್ಲಿ ಬಿಜೆಪಿಗರು ಅರ್ಹರ ಮತವನ್ನು ಕಸಿಯಲು ಯತ್ನಿಸಿದ ಘಟನೆಗಳು ಒಂದಾದ ಮೇಲೆ ಒಂದು ಹೊರಬೀಳುತ್ತಿದ್ದಂತೆ ಎಸ್‌ಐಆರ್ ವಿರುದ್ಧಕ್ಕೆ ಹೋರಾಟಕ್ಕೆ ಬಲ ತುಂಬಲ ರಾಜ್ಯಕ್ಕೆ ಸಿಜೆಪಿ ನಾಯಕರ ದಂಡೇ ಧಾವಿಸುತ್ತಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಅಕ್ರಮಗಳು ಹಾಗೂ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಏಕಾಏಕಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸಿಜೆಪಿ ಮತ್ತು ವಿವಿಧ ನಾಗರಿಕ ಹಕ್ಕುಗಳ ಒಕ್ಕೂಟಗಳು ಅಕ್ಟೋಬರ್ 8ರಂದು ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ಜನತಾ ನ್ಯಾಯಾಲಯ’ವನ್ನು ಆಯೋಜಿಸಿವೆ. ಈ ಬೃಹತ್ ಸಮಾವೇಶಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸಿಜೆಪಿ ಕಾರ್ಯಕರ್ತರು, ನಾಗರಿಕ ಹಕ್ಕುಗಳ ಹೋರಾಟಗಾರರು ಹಾಗೂ ಎಸ್‌ಐಆರ್ ಪ್ರಕ್ರಿಯೆಯಿಂದ ಸಂತ್ರಸ್ತರಾದ ಮತದಾರರು ಧರಣಿ ಸ್ಥಳಕ್ಕೆ ದಂಡಾಗಿ ಹರಿದುಬರಲಿದ್ದಾರೆ.
ಈ ಧರಣಿಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಿಜೆಪಿ ವಕ್ತಾರರಾದ ಆಶುತೋಷ್ ರಾಂಕಾ, ಸೌರವ್ ದಾಸ್, ಅಫ್ರೀನ್ ನವಾಜ್ ಭಾಗವಹಿಸಲಿದ್ದಾರೆ. ಜತೆಗೆ ಎಸ್‌ಐಆರ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಕೂಡಾ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವ ಕಗ್ಗೊಲೆ ಆರೋಪ; ಎಸ್‌ಐಆರ್ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ
ಚುನಾವಣಾ ಆಯೋಗವು ಕೈಗೊಂಡ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಬಡವರು, ಕಾರ್ಮಿಕರು, ಅಲ್ಪಸಂಖ್ಯಾತರು, ದಲಿತರು ಮತ್ತು ಶೋಷಿತ ಸಮುದಾಯಗಳ ಮತಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಈಗ ಸ್ಫುಟವಾಗುತ್ತಿದೆ. ಫಾರ್ಮ್ ನಂ. 7ರ ದುರುಪಯೋಗ ಮತ್ತು ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಂಡಿರುವುದನ್ನು ‘ನಾಗರಿಕ ಮತ ಕಾವಲು ಸಮಿತಿ’ ರಾಜ್ಯದಾದ್ಯಂತ ದಾಖಲೆ ಸಮೇತ ಬಹಿರಂಗಪಡಿಸುತ್ತಿದೆ. ಈ ಎಲ್ಲ ಅನ್ಯಾಯಗಳು ಮತ್ತು ಅಕ್ರಮಗಳ ಸಾಕ್ಷ್ಯಗಳನ್ನು ಅಕ್ಟೋಬರ್ 8ರಂದು ನಡೆಯುವ ‘ಜನತಾ ನ್ಯಾಯಾಲಯ’ದ ಮುಂದೆ ಮುಕ್ತವಾಗಿ ಅನಾವರಣಗೊಳಿಸಲಾಗುತ್ತದೆ.
ಈ ಜನತಾ ನ್ಯಾಯಾಲಯದಲ್ಲಿ ಕೇವಲ ಭಾಷಣಗಳು ಮಾತ್ರವಲ್ಲದೆ, ಎಸ್‌ಐಆರ್ ಪ್ರಕ್ರಿಯೆಯಿಂದ ತಮ್ಮ ಅತ್ಯಮೂಲ್ಯವಾದ ಮತದಾನದ ಹಕ್ಕನ್ನೇ ಕಳೆದುಕೊಂಡಿರುವ ಸಂತ್ರಸ್ತ ನಾಗರಿಕರು ನೇರವಾಗಿ ಹಾಜರಾಗಿ ತಮ್ಮ ಅಳಲನ್ನು ತೋಡಿಕೊಳ್ಳಲಿದ್ದಾರೆ. ಮನೆಗೆ ತೆರಳಿ ಸೂಕ್ತ ಪರಿಶೀಲನೆ ನಡೆಸದೆ ಅಧಿಕಾರಿಗಳು ಏಕಪಕ್ಷೀಯವಾಗಿ ಮತಗಳನ್ನು ತೆಗೆದುಹಾಕಿರುವುದು, ಇತರೆ ಗೊಂದಲಗಳ ಬಗ್ಗೆ ಸಾಕ್ಷ್ಯಧಾರಿತ ವರದಿಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುತ್ತದೆ.
ಈ ಜನತಾ ನ್ಯಾಯಾಲಯದ ಪೀಠದಲ್ಲಿ ವಿಶ್ರಾಂತ ನ್ಯಾಯಮೂರ್ತಿಗಳು, ಪ್ರಮುಖ ಹಿರಿಯ ನ್ಯಾಯವಾದಿಗಳು, ಸಾಹಿತಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕ ವಿಚಾರಣೆ ನಡೆಸಿದ ನಂತರ, ಜನತಾ ನ್ಯಾಯಾಲಯವು ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪದೋಷಗಳ ಕುರಿತು ಒಂದು ಪ್ರಮುಖ ತೀರ್ಪು ಅಥವಾ ವರದಿಯನ್ನು ನೀಡಲಾಗುತ್ತದೆ. ಅದನ್ನು ಚುನಾವಣಾ ಆಯೋಗ ಹಾಗೂ ನ್ಯಾಯಾಲಯಗಳ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಈ ವಿಶೇಷ ನಡಾವಳಿಯಲ್ಲಿ ರಾಜ್ಯದ ಪ್ರಜ್ಞಾವಂತ ನಾಗರಿಕರು ಪಾಲ್ಗೊಳ್ಳಬೇಕು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಕರೆ ನೀಡಿದೆ.




