ರಾಜ್ಯದ ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು ಪ್ರಮುಖ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ಶೀಘ್ರ ನೀಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಸಿಎಂ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸಲ್ಲಿಸಿದರು.
ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರ ₹16,745 ಕೋಟಿ ಮೊತ್ತದ ಡಿಪಿಆರ್ ಸಲ್ಲಿಸಿದೆ. ಕೇಂದ್ರ ಜಲ ಆಯೋಗವು ಆದ್ಯತೆ ಮೇರೆಗೆ ಡಿಪಿಆರ್ ಪರಿಶೀಲಿಸಿ ಅನುಮೋದನೆ ನೀಡುವಂತೆ ನಿರ್ದೇಶಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಯೋಜನೆಗೆ ಯಾವುದೇ ಕಾನೂನು ಅಥವಾ ಇತರ ಅಡೆತಡೆಗಳಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಡಿಪಿಆರ್‌ನ ಶೀಘ್ರ ಮೌಲ್ಯಮಾಪನಕ್ಕೆ ಕೇಂದ್ರದ ಸಹಕಾರ ಕೋರಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ-3) ಜಾರಿಗೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ತೀರ್ಪಿನ ಅಧಿಸೂಚನೆ ಇನ್ನೂ ಬಾಕಿ ಇದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ, ಅಧಿಸೂಚನೆ ಹೊರಡಿಸುವಂತೆ ಕೋರಿ ಕೇಂದ್ರ ಜಲಶಕ್ತಿ ಸಚಿವಾಲಯವು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಅಧಿಸೂಚನೆ ಹೊರಬಂದರೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪಾಲನ್ನು ಬಳಸಿಕೊಳ್ಳಲು ಹಾಗೂ ಸಂಬಂಧಿತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಸೇರಿಸಲು 16ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ. 2026ರ ಮಾರ್ಚ್ 20ರಂದು ನಡೆದ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಯೋಜನೆಯ ₹21,167.93 ಕೋಟಿ ಪರಿಷ್ಕೃತ ಅಂದಾಜು ವೆಚ್ಚದ ಪ್ರಸ್ತಾವನೆ ಪರಿಶೀಲಿಸಿರುವುದನ್ನು ಉಲ್ಲೇಖಿಸಿರುವ ಶಿವಕುಮಾರ್, 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಅನುದಾನವನ್ನು ಶೀಘ್ರ ಒದಗಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ.
ರಾಜ್ಯ ಸರ್ಕಾರವು PMKSY ಹಾಗೂ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಯೋಜನೆ (FMBAP) ಅಡಿಯಲ್ಲಿ ನೀರಾವರಿ ಅಭಿವೃದ್ಧಿ, ಆಧುನೀಕರಣ, ಪ್ರವಾಹ ನಿಯಂತ್ರಣ ಸೇರಿದಂತೆ ಹಲವು ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಇವುಗಳನ್ನು ಶೀಘ್ರ ಪರಿಶೀಲಿಸಿ ಅಗತ್ಯ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣ: ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ಕೋರ್ಟ್ ಅನುಮತಿ
ಇದೇ ವೇಳೆ ಗೋದಾವರಿ-ಕಾವೇರಿ ನದಿ ಜೋಡಣೆ ಹಾಗೂ ಬೇಡ್ತಿ-ವರದಾ (ಹಿರೆವಡ್ಡಟ್ಟಿ) ಜೋಡಣೆ ಯೋಜನೆಗಳ ಬಗ್ಗೆಯೂ ರಾಜ್ಯ ತನ್ನ ನಿಲುವು ತಿಳಿಸಿದೆ. 2026ರ ಸೆಪ್ಟೆಂಬರ್ 3ರಂದು ಕರ್ನಾಟಕ ಸರ್ಕಾರವು ಈ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದದ ಜ್ಞಾಪಕ ಪತ್ರಕ್ಕೆ (MoA) ಸಹಿ ಹಾಕಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ (NWDA) ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಫಲಾನುಭವಿ ರಾಜ್ಯಗಳಿಗೆ ಪ್ರಸ್ತಾಪಿಸಿರುವ ನೀರಿನ ಹಂಚಿಕೆಯನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಒತ್ತಾಯಿಸಿದೆ.
ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಕರ್ನಾಟಕದ ನ್ಯಾಯಬದ್ಧ ಅಗತ್ಯತೆ ಹಾಗೂ ಹಿತಾಸಕ್ತಿಗಳನ್ನು ಪರಿಗಣಿಸಿ, ಇತರ ಫಲಾನುಭವಿ ರಾಜ್ಯಗಳಂತೆ ಕರ್ನಾಟಕಕ್ಕೂ ಸಮಾನವಾದ ನೀರಿನ ಹಂಚಿಕೆ ನೀಡುವಂತೆ NWDAಗೆ ನಿರ್ದೇಶನ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.




