ಶಿವಮೊಗ್ಗ : 2023ರಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನದಂತೆ ಮತಾಂತರ ಕಾಯ್ದೆ ಅಧಿನಿಯಮವನ್ನು ರದ್ದುಪಡಿಸುವ ಮಸೂದೆಯನ್ನು ಶೀಘ್ರದಲ್ಲೇ ಮಂಡಿಸಿ ಅಂಗೀಕರಿಸಬೇಕು ಎಂದು ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಕ್ರೈಸ್ತ ಒಕ್ಕೂಟಗಳ ಮುಖಂಡರುಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗ ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಿಂದ ಮೌನ ಮೆರವಣಿಗೆ ಆರಂಭಿಸಿ, ವಿವಿಧ ರಸ್ತೆಗಳ ಮೂಲಕ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಕಾಯ್ದೆ ರದ್ದಾಗುವವರೆಗೆ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಕಾನೂನು ಬಾಹಿರ ಕಿರುಕುಳ, ಬಂಧನ ಅಥವಾ ಮಾನಹಾನಿಗೆ ಒಳಗಾಗದಂತೆ ರಕ್ಷಣೆ ನೀಡಬೇಕು. ಆತ್ಮ ಸಾಕ್ಷಿಯ ಸ್ವಾತಂತ್ರ್ಯ,, ಧಾರ್ಮಿಕ ಸ್ವಾತಂತ್ರ್ಯ,, ವಿವಾಹದ ಖಾಸಗಿತನ ಮತ್ತು ವೈಯಕ್ತಿಕ ಸ್ವಾಯತ್ತತೆ ಸೇರಿದಂತೆ ಪರಸ್ಪರರ ಸಮ್ಮತಿಯುಳ್ಳ ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ರಕ್ಷಿಸಬೇಕು.
ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022ರ ಅಡಿಯಲ್ಲಿ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು, ಕಾನೂನುಬದ್ಧ ಧಾರ್ಮಿಕ ಸಭೆಗಳು, ಆರಾಧನೆ, ದತ್ತಿ ಚಟುವಟಿಕೆಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಶಾಂತಿಯುತವಾಗಿ ಹಂಚಿಕೊಳ್ಳುವ ಹಕ್ಕಿಗೆ ಪರಿಣಾಮಕಾರಿ ರಕ್ಷಣೆ ಒದಗಿಸಬೇಕು.
2022ಲ್ಲಿ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯ,, ವೈಯಕ್ತಿಕ ಸ್ವಾತಂತ್ರ, ಖಾಸಗಿತನ ಮತ್ತು ವಾಕ್ ಸ್ವಾತಂತ್ರ್ಯದಂತಹ ಸಂವಿಧಾನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಗಂಭೀರವಾದ ಸಾಂವಿಧಾನಿಕ ಆಂತಕಗಳನ್ನು ಹುಟ್ಟುಹಾಕುತ್ತದೆ. ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಸಂಶಯಾತ್ಮಕವಾಗಿ ನೋಡುವ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಪ್ರಸ್ತುತ ಕಾನೂನು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಂವಿಧಾನಿಕ ಹಕ್ಕಿನ ಮೇಲಿನ ಹಸ್ತಕ್ಷೇಪವಾಗಿದೆ. ಈ ನಿಯಮದ ಕಲಂ 6ರ ಪ್ರಕಾರ ಕಾನೂನುಬಾಹಿರ ಮತಾಂತರದ ಉದ್ದೇಶದಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ನೆರವೇರಿಸಲಾದ ವಿವಾಹಗಳನ್ನು ಅಮಾನ್ಯ ಎಂದು ಘೋಷಿಸಲಾಗಿದೆ.
ವಿಭಿನ್ನ ಧರ್ಮಗಳಿಗೆ ಸೇರಿದ ವ್ಯಕ್ತಿಗಳ ನಡುವಿನ ವಿವಾಹಗಳು ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ಧಾರ್ಮಿಕ ಮತಾಂತರದ ಅಪರಾಧದ ಆರೋಪಗಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಪ್ರಣಾಳಿಕೆಯಲ್ಲಿ ಈ ಕಾನೂನನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಈಗ ಅಧಿಕಾರಕ್ಕೇರಿ ಮೂರುವರೆ ವರ್ಷವಾಗುತ್ತ ಬಂದರೂ ಈ ಬಗ್ಗೆ ಕ್ರಮ ಜರುಗಿಸಿಲ್ಲ. ಇನ್ನಿರುವ ಒಂದುವರೆ ವರ್ಷದಲ್ಲಿ ಈ ಕಾನೂನಿನ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಕಿಶ್ಚಿಯನ್ನರನ್ನು ಅನುಮಾನದ ದೃಷ್ಟಿಯಲ್ಲಿ ನೋಡದಂತೆ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಅಭಿಷೇಕ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಫೋರಂ ಅಧ್ಯಕ್ಷ ಸೈಮನ್ ಪಿಂಟೋ, ಕಾರ್ಯದರ್ಶಿ ರೇಮಂಡ್ ಸಗಾಯ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಮೊನ್ಸಿಸ್ಟೋರ್ ಸ್ಪ್ಯಾನಿಶ್ ಡಿಸೋಜ, ವೀರೇಶ್, ಜಿ. ಕುಮಾರ್, ಸತೀಶ್ ಡಿಸೋಜ, ಯೇಸುದಾಸ್, ಚಿನ್ನಪ್ಪ, ರೋಸಲಿನ್ ಮೊದಲಾದವರಿದ್ದರು…




