ದೊಡ್ಡಬಳ್ಳಾಪುರದ ಕಚೇರಿಪಾಳ್ಯದ ನಿವಾಸಿ, ದಲಿತ ಹಾಗೂ ಪ್ರಗತಿಪರ ಹೋರಾಟಗಾರ ಸಿ. ಗುರುರಾಜಪ್ಪ (55) ಅವರು ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾಗಿದ್ದರು.
ಕಳೆದ ಗುರುವಾರ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಯಿಂದ ತೆರಳಿದ್ದ ಅವರು ಆ ಬಳಿಕ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆತಂಕಗೊಂಡ ಕುಟುಂಬಸ್ಥರು ಶನಿವಾರ ಬೆಳಿಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಲು ತೆರಳಿದ್ದರು. ಇದೇ ವೇಳೆ, ಧರ್ಮಸ್ಥಳದ ಶ್ರೀಮುಡಿ ಭವನದ ವರಾಂಡದಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿರುವ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ಮೃತದೇಹದ ಭಾವಚಿತ್ರಗಳನ್ನು ಪರಿಶೀಲಿಸಿದಾಗ, ಅದು ಗುರುರಾಜಪ್ಪ ಅವರದ್ದೇ ಎಂಬುದು ದೃಢಪಟ್ಟಿದೆ.
ಅನಾರೋಗ್ಯ ಅಥವಾ ಇತರ ಕಾರಣಗಳಿಂದಾಗಿ ತಾವು ಮಲಗಿದ್ದ ಸ್ಥಳದಲ್ಲಿಯೇ ಅವರು ಕೊನೆಯುಸಿರೆಳೆದಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.
ದಲಿತ, ಕನ್ನಡ ಹಾಗೂ ವಿವಿಧ ಪ್ರಗತಿಪರ ಹೋರಾಟಗಳಲ್ಲಿ ಗುರುರಾಜಪ್ಪ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ನಿಧನಕ್ಕೆ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ತಿಮ್ಮರಾಯಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಪ್ಪ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ. ಆಂಜನೇಯ, ಪ್ರಮುಖರಾದ ರಾಜು ಸಣ್ಣಕ್ಕಿ, ಛಲವಾದಿ ಸುರೇಶ್, ತಳಗವಾರ ಪುನೀತ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.




