ಹರಿಯಾಣ ಮತ್ತು ಆಂಧ್ರಪ್ರದೇಶದ ಶಾಲಾ ಆವರಣಗಳಲ್ಲೇ ನಡೆದಿರುವ ಎರಡು ಭೀಕರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಹರ್ಯಾಣದ ಪಂಚಕುಲದಲ್ಲಿ ಆರು ವರ್ಷದ ವಿಶೇಷ ಚೇತನ ಬಾಲಕಿಯ ಮೇಲೆ ಶಾಲೆಯ ಒಳಗೇ ಸಹಪಾಠಿ ವಿದ್ಯಾರ್ಥಿಯಿಂದ ಭೀಕರ ಹಲ್ಲೆ ನಡೆದಿದ್ದರೆ, ಆಂಧ್ರಪ್ರದೇಶದ ಅನಂತಪುರದಲ್ಲಿ ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆಯಲ್ಲೇ ಅತಿಕ್ರಮವಾಗಿ ನುಗ್ಗಿದ ಯುವಕನೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯರ ಮೇಲೆ ಗರಗಸದಿಂದ (ಚೈನ್-ಸಾಗೆ) ಪೈಶಾಚಿಕ ದಾಳಿ ನಡೆಸಿದ್ದಾನೆ. ಈ ಘಟನೆಗಳು ಮಕ್ಕಳಲ್ಲಿನ ಮಾನಸಿಕತೆಯ ಬಗ್ಗೆ ಕಳವಳ ಹುಟ್ಟುಹಾಕಿವೆ.
ಹರ್ಯಾಣದ ಪಂಚಕುಲದ ಸೆಕ್ಟರ್ 20ರಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ಆರು ವರ್ಷದ ವಿಶೇಷ ಚೇತನ ಬಾಲಕಿಯ ಮೇಲೆ ಅದೇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ಕಲ್ಲು ಮತ್ತು ಇಟ್ಟಿಗೆಗಳಿಂದ ತೀವ್ರ ಹಲ್ಲೆ ನಡೆಸಿದ್ದಾನೆ.
‘ನಿನ್ನ ತಂದೆ ನಿನ್ನನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಆ ಬಾಲಕ ಹೆಣ್ಣುಮಗಳನ್ನು ಶಾಲೆಯ ಮೊದಲ ಮಹಡಿಯಲ್ಲಿನ ಖಾಲಿ ತರಗತಿಯೊಂದರ ಒಳಗೆ ಕರೆದೊಯ್ದಿದ್ದಾನೆ. ಆಕೆಯ ತಲೆಯನ್ನು ನೆಲಕ್ಕೆ ಜಜ್ಜಿದ್ದಾನೆ. ಮಾತ್ರವಲ್ಲದೆ, ಇಟ್ಟಿಗೆಯನ್ನು ತಂದು ಆಕೆಯ ತಲೆಗೆ ಪದೇ-ಪದೇ ಹೊಡೆದಿದ್ದಾನೆ. ತೀವ್ರ ರಕ್ತಸಿಕ್ತ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಶಾಲೆಯ ಆವರಣದಲ್ಲೇ ಬಿಟ್ಟು ಹೋಗಲಾಗಿದ್ದಾನೆ.
ಬಾಲಕಿ ಕಾಣೆಯಾದಾಗ ಕುಟುಂಬದವರು ಹುಡುಕಾಟ ನಡೆಸುತ್ತಿದ್ದರೆ, ಹಲ್ಲೆ ನಡೆಸಿದ ಬಾಲಕನೇ ಆಕೆ ಬಿದ್ದಿದ್ದ ಸ್ಥಳಕ್ಕೆ ಕರೆದೊಯ್ದು ತೋರಿಸಿದ್ದಾನೆ. ಬಳಿಕ, ಬಾಲಕಿಯನ್ನು ತಕ್ಷಣವೇ ಪಂಚಕುಲದ ಸೆಕ್ಟರ್ 6ರಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ರವಾನಿಸಿದ್ದಾರೆ.
ಬಾಲಕಿಯ ಮುಖದ ಮೂಳೆಗಳು ಮುರಿದಿದ್ದು, ಮೂಗಿನ ಮೂಳೆಗೂ ಪೆಟ್ಟಾಗಿದೆ. ಪ್ರಸ್ತುತ ಬಾಲಕಿಯ ಪ್ರಾಣಾಪಾಯ ತಪ್ಪಿದೆ ಎಂದು ವೈದ್ಯರು ತಿಳಿಸಿದ್ದರೂ ಚಿಕಿತ್ಸೆ ಮುಂದುವರಿದಿದೆ.
ಘಟನೆಯನ್ನು ತೀವ್ರವಾಗಿ ಪರಿಗಣಿಸಿರುವ ಹರ್ಯಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಆಯೋಗದ ಅಧ್ಯಕ್ಷೆ ತೃಪ್ತಿ ಹರಿಪಾಲ್ ಶಿಯೋರಾನ್ ಅವರು ಚಂಡೀಗಢದ PGIMER ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಶಾಲೆಯ ಮೇಲ್ವಿಚಾರಣೆಯಲ್ಲಿ ಲೋಪವಾಗಿದೆಯೇ ಎಂಬುದರ ಬಗ್ಗೆ ಆಯೋಗವು ಪಂಚಕುಲ ಜಿಲ್ಲಾ ಶಿಕ್ಷಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿ, ಕರ್ತವ್ಯದ ವಿವರ ಮತ್ತು ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಕ್ಟರ್ 20 ಪೊಲೀಸ್ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇನ್ನು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದ ಜಿಲ್ಲಾ ಪರಿಷತ್ ಸರ್ಕಾರಿ ಪ್ರೌಢಶಾಲೆಯಲ್ಲಿ ತರಗತಿಯಲ್ಲಿ ಪಾಠ ನಡೆಯುತ್ತಿದ್ದಾಗಲೇ ಯುವಕನೊಬ್ಬ ಬಾಲಕಿಯರ ಮೇಲೆ ಭೀಕರ ದಾಳಿ ನಡೆಸಿದ್ದಾನೆ. ಶನಿವಾರ ಬೆಳಿಗ್ಗೆ ಸುಮಾರು 10:30ಕ್ಕೆ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಧರ್ಮವಂಶದ 21 ವರ್ಷದ ಹೇಮಂತ್ (ದುಮ್ಮು) ಎಂಬ ಯುವಕ ಶಾಲೆಯೊಳಗೆ ನುಗ್ಗಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಚೈನ್-ಸಾಗೆಯಿಂದ (ಮರ ಕತ್ತರಿಸುವ ವಿದ್ಯುತ್ ಗರಗಸ) ಭೀಕರವಾಗಿ ದಾಳಿ ನಡೆಸಿದ್ದಾನೆ.
ಹಲ್ಲೆಗೊಳಗಾದ ಇಬ್ಬರೂ ಬಾಲಕಿಯರನ್ನು ತಕ್ಷಣವೇ ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬಾಕೆಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ದಾಳಿ ನಡೆಸಿದ ಆರೋಪಿಯು ಸಂತ್ರಸ್ತೆಯೊಬ್ಬಳ ದೂರದ ಸಂಬಂಧಿಯಾಗಿದ್ದು, ದಾಳಿಯ ನಂತರ ಪರಾರಿಯಾಗಿದ್ದ ಆತನನ್ನು ಪೊಲೀಸರು ಧರ್ಮವಂಶ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈ ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲೆಯ ತರಗತಿಯೊಳಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ದಾಳಿ ನಡೆಸುವ ಕ್ರಿಮಿಗಳಿಗೆ ಸಮಾಜದಲ್ಲಿ ಜಾಗವಿಲ್ಲ ಎಂದು ಹೇಳಿರುವ ಅವರು, ಗಾಯಾಳು ಬಾಲಕಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಮತ್ತು ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ. ಶಿಕ್ಷಣ ಸಚಿವ ನಾರಾ ಲೋಕೇಶ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಈ ಘಟನೆಯ ಕುರಿತು ಟಿಡಿಪಿ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಈ ‘ಚೈನ್-ಸಾ ದಾಳಿ’ ನಿದರ್ಶನ ಎಂದಿದ್ದಾರೆ.
“ಸರ್ಕಾರದ ರಾಜಕೀಯ ಸೇಡಿನ ರಾಜಕಾರಣದಿಂದಾಗಿ ಅಪರಾಧಿಗಳು ಭಯವಿಲ್ಲದೆ ಓಡಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.



