ಪಶ್ಚಿಮ ಬಂಗಾಳದ SIR ಪ್ರಕ್ರಿಯೆ ಮುಗಿದರೂ, ಅಲ್ಲಿನ ಮತದಾರರ ಪಟ್ಟಿಯ ಸುತ್ತ ಸುತ್ತಿಕೊಂಡಿರುವ ವಿವಾದ ಮಾತ್ರ ತಣ್ಣಗಾಗುತ್ತಿಲ್ಲ. ಪರಿಶೀಲನೆಯ ಬಳಿಕ ನ್ಯಾಯಾಂಗ ಅಧಿಕಾರಿಗಳೇ ಒಪ್ಪಿ ಮರುಸೇರ್ಪಡೆ ಮಾಡಿದ್ದ ಬರೋಬ್ಬರಿ 16.10 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು, ಚುನಾವಣಾ ಆಯೋಗವೇ ಮೇಲ್ಮನವಿ ಸಲ್ಲಿಸಿ ಮತ್ತೆ ತಡೆಹಿಡಿಯಲು ಯತ್ನಿಸುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮತದಾರರ ಪಟ್ಟಿಯಲ್ಲಿನ ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಎಂದು ಗುರುತಿಸಲಾಗಿದ್ದ ಪ್ರಕರಣಗಳನ್ನು ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಿದ್ದರು. ಈ ಪೈಕಿ 16,10,311 ಮತದಾರರ ಸೇರ್ಪಡೆಗೆ ಅನುಮತಿ ನೀಡಲಾಗಿತ್ತು. ವಿಧಾನಸಭಾ ಚುನಾವಣೆಗೆ ಮುನ್ನ ಪ್ರಕಟಿಸಲಾದ ಪೂರಕ ಮತದಾರರ ಪಟ್ಟಿಯಲ್ಲೂ ಇವರ ಹೆಸರು ಸೇರಿಸಲಾಗಿತ್ತು. ಆದರೆ, ಈ ಸೇರ್ಪಡೆಯನ್ನೇ ಪ್ರಶ್ನಿಸಿ ಚುನಾವಣಾ ಆಯೋಗದ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲು ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೆಲವು ನಿರ್ದಿಷ್ಟ ಅಧಿಕಾರಿಗಳಿಗೆ ಮಾತ್ರ ಅವಕಾಶವಿದೆ. ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿಗಳು ಈ ಅಧಿಕಾರ ಹೊಂದಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ 16.10 ಲಕ್ಷ ಮತದಾರರ ಹೆಸರುಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವವರು ಯಾರು? ಅವರಿಗೆ ಅಂತಹ ಅರ್ಜಿ ಸಲ್ಲಿಸುವ ಕಾನೂನುಬದ್ಧ ಅಧಿಕಾರ ಇದೆಯೇ? ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಿಲ್ಲ.
ಅಕ್ಟೋಬರ್ 26ರಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ಈ ಮೇಲ್ಮನವಿಗಳ ಬಗ್ಗೆ ಆರಂಭದಲ್ಲಿ ತನಗೆ ಮಾಹಿತಿ ಇರಲಿಲ್ಲ ಎಂದು ಆಯೋಗ ಹೇಳಿದೆ. ಅಕ್ಟೋಬರ್ 22ರಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಮಾಹಿತಿ ಬಂದಿದ್ದು, ಅಲ್ಲಿನ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದಂತೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿದ ಅಧಿಕಾರಿಗಳ ಹುದ್ದೆ ಯಾವುದು ಮತ್ತು ಅವರಿಗೆ ಈ ಅಧಿಕಾರ ನೀಡಿದ ಕಾನೂನು ಯಾವುದು ಎಂಬುದನ್ನು ಆಯೋಗ ಸ್ಪಷ್ಟವಾಗಿ ತಿಳಿಸಿಲ್ಲ.
ಮೇಲ್ಮನವಿ ರದ್ದತಿಗೆ ಕಾಂಗ್ರೆಸ್ ಪಟ್ಟು
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಮರುಸೇರ್ಪಡೆಗೊಂಡ 16.10 ಲಕ್ಷ ಜನರ ವಿರುದ್ಧ ಸಲ್ಲಿಸಿರುವ ಮೇಲ್ಮನವಿಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ ಎಂಬುದನ್ನು ತಿಳಿಯಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದೂ ಆಗ್ರಹಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪ್ರಸೇನ್ಜಿತ್ ಬೋಸ್, ಮೇಲ್ಮನವಿ ಸಲ್ಲಿಸಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಅಂತಹ ಅರ್ಜಿ ಸಲ್ಲಿಸುವ ಅಧಿಕಾರವೇ ಇಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ 2026ರ ಏಪ್ರಿಲ್ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ವಿಶೇಷ ಮೇಲ್ಮನವಿ ನ್ಯಾಯಮಂಡಳಿಗಳನ್ನು ರಚಿಸಿತ್ತು. ಆದರೆ, ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಇಂತಹ ನ್ಯಾಯಮಂಡಳಿಗಳ ಮುಂದೆ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಹೀಗಿರುವಾಗ, ಚುನಾವಣಾ ಆಯೋಗದ ಅಧಿಕಾರಿಗಳು ಯಾವ ಕಾನೂನಿನ ಆಧಾರದ ಮೇಲೆ 16.10 ಲಕ್ಷ ಮತದಾರರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬೋಸ್ ಆಗ್ರಹಿಸಿದ್ದಾರೆ.
ಅಕ್ಟೋಬರ್ 29ರಂದು ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿರುವ ಕಾಂಗ್ರೆಸ್, ಈ ಎಲ್ಲ ಮೇಲ್ಮನವಿಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. ಅಲ್ಲದೆ, ಅರ್ಜಿಗಳನ್ನು ಯಾವ ದಿನ, ಯಾವ ಸಮಯದಲ್ಲಿ ಮತ್ತು ಯಾವ ವಿಧಾನದಲ್ಲಿ ಸಲ್ಲಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಕಂಪ್ಯೂಟರ್ ದಾಖಲೆಗಳ ಪರಿಶೀಲನೆ (ಐಟಿ ಆಡಿಟ್) ನಡೆಸಬೇಕು ಎಂದು ಆಗ್ರಹಿಸಿದೆ.
60 ಲಕ್ಷ ಮತದಾರರ ಪರಿಶೀಲನೆ ನಡೆಸಿದ್ದ ನ್ಯಾಯಾಂಗ ಅಧಿಕಾರಿಗಳು
ಸುಪ್ರೀಂ ಕೋರ್ಟ್ ಸೂಚನೆಯಂತೆ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಲ್ಲಿದ್ದ ಸುಮಾರು 60 ಲಕ್ಷ ಅನುಮಾನಾಸ್ಪದ ಹೆಸರುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿತ್ತು. ಕಲ್ಕತ್ತಾ ಹೈಕೋರ್ಟ್ ಒದಗಿಸಿದ್ದ ಪಟ್ಟಿಯಿಂದ ಆಯ್ಕೆಯಾದ ಸುಮಾರು 700 ನ್ಯಾಯಾಂಗ ಅಧಿಕಾರಿಗಳು ಈ ಕೆಲಸ ಮಾಡಿದ್ದರು. ಪರಿಶೀಲನೆ ಬಳಿಕ 32,77,360 ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಮುಂದುವರಿಸಲು ಅಥವಾ ಮತ್ತೆ ಸೇರಿಸಲು ಅನುಮತಿ ನೀಡಲಾಗಿತ್ತು. ಉಳಿದ 27.23 ಲಕ್ಷ ಜನರ ಹೆಸರುಗಳನ್ನು ಕೈಬಿಡಲಾಗಿತ್ತು. ಈ ನಿರ್ಧಾರವನ್ನು ಒಪ್ಪದ ಸುಮಾರು 22 ಲಕ್ಷ ಮಂದಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಗಳನ್ನು ವಿಚಾರಣೆ ನಡೆಸಲು ಮಾರ್ಚ್ 21ರಂದು ಚುನಾವಣಾ ಆಯೋಗ ವಿಶೇಷ ನ್ಯಾಯಮಂಡಳಿಗಳನ್ನು ರಚಿಸಿತ್ತು. ಅವು ಏಪ್ರಿಲ್ 13ರ ವೇಳೆಗೆ ಕಾರ್ಯಾರಂಭ ಮಾಡಿದ್ದವು. ಮೇಲ್ಮನವಿಯಲ್ಲಿ ಮತದಾರರ ಪರವಾಗಿ ತೀರ್ಪು ಬಂದರೆ ಅವರ ಹೆಸರುಗಳನ್ನು ಪೂರಕ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಏಪ್ರಿಲ್ 16ರಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಏಪ್ರಿಲ್ 23ರಿಂದ ವಿಧಾನಸಭಾ ಚುನಾವಣೆ ಆರಂಭವಾಗಬೇಕಿದ್ದ ಕಾರಣ ಈ ಆದೇಶ ಮಹತ್ವ ಪಡೆದಿತ್ತು. ಆದರೆ, ಚುನಾವಣೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಕೇವಲ 136 ಮತದಾರರ ಹೆಸರುಗಳ ಸೇರ್ಪಡೆಗೆ ಮಾತ್ರ ಅನುಮತಿ ದೊರೆತಿತ್ತು ಎಂದು ವರದಿಯಾಗಿದೆ.
ಈ ಮಧ್ಯೆ, ನ್ಯಾಯಾಂಗ ಅಧಿಕಾರಿಗಳು ಪರಿಶೀಲನೆ ನಡೆಸಿ ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಅನುಮತಿ ನೀಡಿದ್ದ 16,10,311 ಜನರ ಹೆಸರುಗಳನ್ನೇ ಪ್ರಶ್ನಿಸಿ ಮತ್ತೊಂದು ದೊಡ್ಡ ಸಂಖ್ಯೆಯ ಮೇಲ್ಮನವಿಗಳನ್ನು ಸಲ್ಲಿಸಲಾಯಿತು. ಇದರಿಂದ ವಿಶೇಷ ನ್ಯಾಯಮಂಡಳಿಗಳ ಮುಂದೆ ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 38 ಲಕ್ಷ ದಾಟಿದೆ. ಅಂದರೆ, ಈಗಾಗಲೇ ಪರಿಶೀಲನೆ ನಡೆಸಿ ಮತದಾರರ ಪಟ್ಟಿಗೆ ಸೇರಿಸಿದ್ದವರ ಹೆಸರನ್ನೂ ಮತ್ತೆ ಪ್ರಶ್ನಿಸಿರುವುದೇ ಈ ಹೊಸ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ: SIR: ಪಶ್ಚಿಮ ಬಂಗಾಳದ ಅವಾಂತರಗಳು
ಇನ್ನೊಂದೆಡೆ, 16 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳನ್ನು ಅಷ್ಟೊಂದು ಕಡಿಮೆ ಅವಧಿಯಲ್ಲಿ ಅಧಿಕಾರಿಗಳು ಸಲ್ಲಿಸಲು ಸಾಧ್ಯವಿಲ್ಲ. ಇದು ಸ್ವಯಂಚಾಲಿತ ಸಾಫ್ಟ್ವೇರ್ ಅಥವಾ ಬ್ಯಾಕ್-ಡೋರ್ (Back-door) ಮೂಲಕ ಸಗಟಾಗಿ ಅಪ್ಲೋಡ್ ಮಾಡಲಾದ ಡೇಟಾ ಇರಬಹುದು ಎಂಬ ಅನುಮಾನ ದಟ್ಟವಾಗಿದೆ. ಕಾಂಗ್ರೆಸ್ ಐಟಿ ಆಡಿಟ್ಗೆ ಒತ್ತಾಯಿಸುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಈಗಾಗಲೇ ಮತ ಚಲಾಯಿಸಿರುವ ನಾಗರಿಕರ ಮತಗಳು ಈ ಮೇಲ್ಮನವಿಗಳ ಪರಿಣಾಮದಿಂದ ಅಸಿಂಧುಗೊಳ್ಳುತ್ತವೆಯೇ? ಅಥವಾ ಅವರ ಮತದಾನದ ಹಕ್ಕನ್ನು ಹಿಂಬಾಗಿಲ ಮೂಲಕ ರದ್ದುಗೊಳಿಸುವ ಯತ್ನವೇ ಎಂಬ ಸಾರ್ವಜನಿಕ ಆತಂಕ ಕೂಡ ಎದುರಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.92.47ರಷ್ಟು ಮತದಾನವಾಗಿದೆ. ಇದು ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಮತದಾನ ಪ್ರಮಾಣವಾಗಿದೆ. ಆದರೆ, ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು, ಮತ್ತೆ ಸೇರ್ಪಡೆಗೊಳಿಸಿರುವುದು ಹಾಗೂ ಈ ನಿರ್ಧಾರಗಳ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳು ಈಗ ವಿವಾದಕ್ಕೆ ಕಾರಣವಾಗಿವೆ. ಮತದಾರರ ಹೆಸರುಗಳ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ಎಷ್ಟು ಅಧಿಕಾರವಿದೆ ಮತ್ತು ಮತದಾರರ ಹಕ್ಕುಗಳನ್ನು ಹೇಗೆ ರಕ್ಷಿಸಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.





