ತಂಜಾವೂರಿನ ಐತಿಹಾಸಿಕ ಬೃಹದೀಶ್ವರ ದೇವಾಲಯದ ಎದುರು ಇರುವ ಉಪಾಹಾರ ಗೃಹವೊಂದು ‘ಹೋಟೆಲ್ ಸಂಗೇತಾಸ್ ಪ್ಯೂರ್ ವೆಜ್’ (Hotel Sangethas) ಎಂಬ ಹೆಸರನ್ನು ಬಳಸದಂತೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ‘ಸಂಗೀತಾ’ (Sangeetha) ಹೋಟೆಲ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಹಸಿದು ಬರುವ ಗ್ರಾಹಕರು ಈ ಹೆಸರನ್ನು ನೋಡಿ ಸುಲಭವಾಗಿ ಮೋಸಹೋಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಟ್ರೇಡ್‌ಮಾರ್ಕ್ ಉಲ್ಲಂಘನೆಗೆ ಸಂಬಂಧಿಸಿದಂತೆ ‘ಸಂಗೀತಾ ಕ್ಯಾಟರರ್ಸ್ ಅಂಡ್ ಕನ್ಸಲ್ಟೆಂಟ್ಸ್ ಎಲ್‌ಎಲ್‌ಪಿ’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಈ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ವಿಚಾರಣೆ ವೇಳೆ ತಮಿಳು ಕವಯಿತ್ರಿ ಯೊಬ್ಬರ ‘ಯಹಸಿವಾದಾಗ ಪಾಲಿಸಬೇಕಾದ ಹತ್ತು ಮೌಲ್ಯಗಳೂ ಮರೆತುಹೋಗುತ್ತವೆ ಹಾಗೂ ಹಸಿವು ಕಣ್ಣು ಮಂಜಾಗುವಂತೆ ಮಾಡುತ್ತದೆ ಎಂಬ ತಮಿಳಿನ ನಾಣ್ಣುಡಿಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಇಂಥ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ‘ಸಂಗೀತಾ’ ಮತ್ತು ‘ಸಂಗೇತಾ’ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ನಾರಾಯಣನ್ ಚಂದ್ರಶೇಖರನ್ ಎಂಬುವವರಿಗೆ ಸೇರಿದ ಈ ಹೋಟೆಲ್, ಇಂಗ್ಲಿಷ್‌ನಲ್ಲಿ ‘ಸಂಗೇತಾಸ್’ ಎಂದು ಬರೆಯುವಾಗ ಉದ್ದೇಶಪೂರ್ವಕವಾಗಿ ‘ಇ’ (e) ಅಕ್ಷರವನ್ನು ಬಿಟ್ಟಿದೆ. ಆದರೆ, ತಮಿಳಿನಲ್ಲಿ ‘ಸಂಗೀತಾ’ ಎಂದೇ ನಾಮಫಲಕ ಅಳವಡಿಸಿದೆ. ಹಸಿವಿನಿಂದ ಬಂದ ಗ್ರಾಹಕರು ಇಂಗ್ಲಿಷ್ ಅಕ್ಷರದಲ್ಲಿ ಬಿಟ್ಟುಹೋದ ಅಕ್ಷರದ ಬಗ್ಗೆಯಾಗಲಿ, ಅಥವಾ ಮೂಲ ಹೋಟೆಲ್ ಬಳಸುವ ವೀಣೆ ಲೋಗೋ ಬದಲು ಪ್ರತಿವಾದಿ ಬಳಸುತ್ತಿರುವ ಚಕ್ರ ಮತ್ತು ಶಂಖದ ಲೋಗೋ ಬಗ್ಗೆಯಾಗಲಿ ಗಮನಹರಿಸುವಷ್ಟು ತಾಳ್ಮೆ ಹೊಂದಿರುವುದಿಲ್ಲ. ಅವರು ಕೇವಲ ಹೆಸರನ್ನು ನೋಡಿ ಮೂಲ ಹೋಟೆಲ್‌ನ ಶಾಖೆ ಎಂದು ಭಾವಿಸುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಪ್ರತಿವಾದಿ ಹೋಟೆಲ್ ಮಾಲೀಕರು, ‘ಸಂಗೀತಾ’ ಹೋಟೆಲ್‌ನ ಯಾವುದೇ ಶಾಖೆ ತಂಜಾವೂರಿನಲ್ಲಿ ಇಲ್ಲದಿರುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗುವುದಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ತಂಜಾವೂರು ಒಂದು ಸಾಂಸ್ಕೃತಿಕ ಪರಂಪರೆಯುಳ್ಳ ಐತಿಹಾಸಿಕ ನಗರವಾಗಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜಗತ್ತಿನ ನಾನಾ ಭಾಗಗಳಿಂದ ಬರುವ ಆ ಪ್ರವಾಸಿಗರು ಈ ಹೋಟೆಲ್ ಅನ್ನು ಪ್ರಸಿದ್ಧ ‘ಸಂಗೀತಾ’ ಹೋಟೆಲ್‌ನ ಶಾಖೆ ಎಂದೇ ನಂಬುವ ಅಪಾಯವಿದೆ ಎಂದು ಸ್ಪಷ್ಟಪಡಿಸಿದೆ.




