“ವಿಚ್ಛೇದನದ ನಂತರವೂ ಮಕ್ಕಳ ಮುಂದೆ ಪರಸ್ಪರ ನಿಂದಿಸದೆ, ಅವರಿಗೆ ಉತ್ತಮ ತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸಿ” ಎಂದು ದಂಪತಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ದಂಪತಿಯ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿ, ವಿಚ್ಛೇದನ ಮಂಜೂರು ಮಾಡಿದೆ.
ಮಂಗಳೂರು ಮೂಲದ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ 2 ಕೋಟಿ ರೂ. ಶಾಶ್ವತ ಜೀವನಾಂಶ ನೀಡಬೇಕೆಂಬ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿ. ಆ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ, ವೈದ್ಯೆಯಾಗಿರುವ ಪತ್ನಿಯ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯ ವಿಧಿಸಿದ್ದ 2 ಕೋಟಿ ರೂ. ಶಾಶ್ವತ ಜೀವನಾಂಶವನ್ನು 50 ಲಕ್ಷ ರೂ.ಗೆ ಇಳಿಕೆ ಮಾಡಿದೆ.
“ದಂಪತಿಯ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ತಂದೆಯು ಪ್ರತಿ ಮಗುವಿಗೆ ತಿಂಗಳಿಗೆ 25,000 ರೂ. ನೀಡಬೇಕು. ಈ ಮೊತ್ತವನ್ನು ಪ್ರತಿ ವರ್ಷ 5,000 ರೂ.ಗಳಂತೆ ಹೆಚ್ಚಿಸುತ್ತಾ ಹೋಗಬೇಕು” ಎಂದು ಆದೇಶಿಸಿದೆ.
“ವಿಚ್ಛೇದನವಾಗಿದ್ದರೂ ಮಕ್ಕಳ ಮದುವೆ ಮತ್ತು ಇತರ ಪ್ರಮುಖ ಹಂತಗಳಲ್ಲಿ ತಂದೆ ತನ್ನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಜವಾಬ್ದಾರಿ ನಿರ್ವಹಿಸಬೇಕು. ತಂದೆಗೆ ಪ್ರತಿ ಶನಿವಾರ ಮತ್ತು ಭಾನುವಾರ ತಾಯಿಯ ಸಮ್ಮುಖದಲ್ಲಿ ತಲಾ 3 ಗಂಟೆಗಳ ಕಾಲ ಮಕ್ಕಳನ್ನು ಭೇಟಿಯಾಗಲು ಮತ್ತು ಆಡಿಯೋ/ವಿಡಿಯೋ ಕರೆ ಮೂಲಕ ಮಾತನಾಡಲು ಅವಕಾಶ ಇರಬೇಕು” ಎಂದು ಕೋರ್ಟ್ ಹೇಳಿದೆ.
ತಂದೆಯ ಅನುಮತಿ ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಮಕ್ಕಳನ್ನು ವಿದೇಶಕ್ಕೆ ಕರೆದೊಯ್ಯಬಾರದು ಎಂದು ಪತ್ನಿಗೆ ಸೂಚಿಸಿದೆ.



