ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ ಕೃಷಿ ಪದ್ದತಿ. ಅಲ್ಲಿ ಬಲುದೊಡ್ಡ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲವಾದರೂ ಅದೊಂದು ರೀತಿಯ ಸುಸ್ಥಿರ ಕೃಷಿ. ಮನಸ್ಸಿಗೆ ಖುಷಿ ಕೊಡುವ ಕೃಷಿ. ಹೊಲ ಅಥವಾ ತೋಟ ಸದಾ ಹಸಿರಿನಿಂದ ಕಂಗೊಳಿಸುವ ಕೃಷಿ. ಪರಿಸರ ಸ್ನೇಹಿ ಕೃಷಿ. ಹೊಲದಲ್ಲಿ ಉತ್ಪತ್ತಿಯಾಗುವ ಕೃಷಿ ತ್ಯಾಜ್ಯಗಳು ಮತ್ತಿತರ ಸಂಪನ್ಮೂಲಗಳನ್ನು ಹೊಲದಲ್ಲಿಯೇ ಪರಿಣಾಮಕಾರಿಯಾಗಿ ಬಳಸುವ ಕೃಷಿ ಪದ್ದತಿ.
ಏಕಬೆಳೆ ಬೆಳೆಯುವ ರೈತರು ಒಮ್ಮೊಮ್ಮೆ ಲಾಭ ಪಡೆಯುತ್ತಾರೆ. ಬೆಲೆ ಸಿಗದಿದ್ದಾಗ ಕೈಸುಟ್ಟುಕೊಳ್ಳುತ್ತಾರೆ. ಹಾಗೆ ಕೈ ಸುಟ್ಟುಕೊಂಡಾಗ ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕಾಗಬಹುದು. ರೈತರಿಗೆ ಎಲ್ಲಾ ವರ್ಷಗಳಲ್ಲಿ ನಿರಂತರವಾಗಿ ಕೊಂಚವಾದರೂ ಆದಾಯ ಬರಲಿ ಎಂದು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರ ಕಂಡುಕೊಂಡ ಉಪಾಯವೇ ಸಮಗ್ರ ಕೃಷಿ ಪದ್ದತಿಗಳು (Integrated Farming System :IFS).. ತಮಿಳುನಾಡಿನ ಕೊಯಮತ್ತೂರಿನ ಕೃಷಿ ವಿಶ್ವವಿದ್ಯಾಲಯವು 1976ರ ಸುಮಾರಿಗೆ ಸಮಗ್ರ ಕೃಷಿ ಪದ್ದತಿ ಕುರಿತು ಸಂಶೋಧನೆಯನ್ನು ಆರಂಭಿಸಿತು. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು 2010-11ನೇ ಸಾಲಿನಿಂದ ಸಮಗ್ರ ಕೃಷಿ ಪದ್ದತಿಯ ಸಂಶೋಧನೆಗೆ ಒತ್ತು ನೀಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವೂ ಕೂಡ 2010ರಿಂದ ಸಮಗ್ರ ಕೃಷಿ ಪದ್ದತಿಯನ್ನು ಬೋಧನೆಯಲ್ಲಿ ಅಳವಡಿಸಿಕೊಂಡು, ಸಂಶೋಧನೆಯನ್ನು ನಡೆಸುತ್ತಾ, ವಿಸ್ತರಣಾ ಚಟುವಟಿಕೆಯ ಮೂಲಕ ರೈತರಿಗೆ ತಲುಪಿಸುತ್ತಿದೆ.
ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ ಕೃಷಿ ಪದ್ದತಿ. ಅಲ್ಲಿ ಬಲುದೊಡ್ಡ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲವಾದರೂ ಅದೊಂದು ರೀತಿಯ ಸುಸ್ಥಿರ ಕೃಷಿ. ಮನಸ್ಸಿಗೆ ಖುಷಿ ಕೊಡುವ ಕೃಷಿ. ಹೊಲ ಅಥವಾ ತೋಟ ಸದಾ ಹಸಿರಿನಿಂದ ಕಂಗೊಳಿಸುವ ಕೃಷಿ. ಪರಿಸರ ಸ್ನೇಹಿ ಕೃಷಿ. ಹೊಲದಲ್ಲಿ ಉತ್ಪತ್ತಿಯಾಗುವ ಕೃಷಿ ತ್ಯಾಜ್ಯಗಳು ಮತ್ತಿತರ ಸಂಪನ್ಮೂಲಗಳನ್ನು ಹೊಲದಲ್ಲಿಯೇ ಪರಿಣಾಮಕಾರಿಯಾಗಿ ಬಳಸುವ ಕೃಷಿ ಪದ್ದತಿ.

ಸಮಗ್ರ ಕೃಷಿ ಪದ್ದತಿಯಲ್ಲಿ ಏಕ ಬೆಳೆಯ ಬದಲಿಗೆ ಬಹುಬೆಳೆಗಳ ಬೇಸಾಯದ ಜೊತೆಗೆ ಹಲವಾರು ಕೃಷಿ ಸಂಬಂಧಿತ ಚಟುವಟಿಕೆಗಳಿರುತ್ತವೆ. ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಹೈನುಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಮೀನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ, ಕಾಂಪೋಸ್ಟ್ ತಯಾರಿಕೆ, ಹೀಗೆ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಬಹುದು. ಅಲ್ಲಿಯ ತ್ಯಾಜ್ಯಗಳನ್ನು ಅಲ್ಲಿಯೇ ಬಳಸಬಹುದು. ಮನೆಮಂದಿಯೆಲ್ಲಾ ಸಂತೋಷದಿಂದ ಜಮೀನಿನಲ್ಲಿ ಕಾಲ ಕಳೆಯಬಹುದು. ಆಸಕ್ತಿಯಿಂದ ಭೇಟಿ ನೀಡುವ ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಿ ಅವರಿಗೂ ಪ್ರೇರಣೆಯಾಗಬಹುದು. ಕೃಷಿ ಅಧಿಕಾರಿಗಳ ಗಮನ ಸೆಳೆಯಬಹುದು. ಕೃಷಿ ವಿಶ್ವವಿದ್ಯಾಲಯಗಳ ದೃಷ್ಟಿಯಲ್ಲಿ ‘ಮಾದರಿ ಸಮಗ್ರ ಕೃಷಿ ರೈತ’ರಾಗಬಹುದು.
ಮರುಕಳಿಸುತ್ತಿರುವ ಬರ – ವರದಾನವಾಗಬೇಕಿರುವ ಸಮಗ್ರ ಕೃಷಿ
ಎಲ್ ನಿನೋದಿಂದ ಬರ ಬರುತ್ತದೆಯೆಂಬುದು ಪವನ ವಿಜ್ಞಾನದ ಅವಲೋಕನದಿಂದ ಮತ್ತೆ ಮತ್ತೆ ಸಾಬೀತಾಗಿದೆ. ಎರಡರಿಂದ ಒಂಬತ್ತು ವರ್ಷಗಳ ಅಂತರದಲ್ಲಿ ಆಗಿಂದಾಗ್ಗೆ ಎಲ್ ನಿನೋ ಸಂಭವಿಸುತ್ತಿರುವುದರಿಂದ ನಮ್ಮ ರಾಜ್ಯದಲ್ಲಿ ಐದಾರು ವರ್ಷಗಳಿಗೊಮ್ಮೆ ಹಲವಾರು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರುತ್ತಿದೆ. ಬರ ಬಂದಾಗ ರೈತರಿಗೆ ಸಂಕಷ್ಟ. ಜಾನುವಾರುಗಳಿಗೆ ಮೇವು ಸಿಗದು. ಕೃಷಿ ಕಾರ್ಮಿಕರಿಗೆ ಕೆಲಸ ಸಿಗದು. ಅಂತಹ ಸಂದರ್ಭಗಳಲ್ಲಿ ಬರ ಪೀಡಿತ ಜಿಲ್ಲೆಗಳಿಗೆ ಸಮಗ್ರ ಕೃಷಿ ಪದ್ದತಿಯು ವರದಾನವಾಗಬೇಕಿದೆ.
ಸಮಗ್ರ ಕೃಷಿಗೆ ಭೂಮಿಯ ವಿಸ್ತೀರ್ಣ
ಸಮಗ್ರ ಕೃಷಿ ಕೈಗೊಳ್ಳಲು ಕನಿಷ್ಟ ಒಂದು ಹೆಕ್ಟೇರ್ (2.471 ಎಕರೆ ಅಥವಾ 98.84 ಗುಂಟೆಗಳು ಅಥವಾ 247.12 ಸೆಂಟ್ಸ್) ಜಮೀನಿರಬೇಕು. ಇಷ್ಟು ಜಮೀನನ್ನು ಹಲವು ವಿಭಾಗಗಳನ್ನಾಗಿ ವಿಂಗಡಿಸಿಕೊಳ್ಳಬೇಕು. ಸಾಧಾರಣವಾಗಿ 10 ಗುಂಟೆಗಳ 9 ವಿಭಾಗಗಳನ್ನಾದರೂ ಮಾಡಿಕೊಳ್ಳಬಹುದು. ಏಕದಳ ಮತ್ತು ದ್ವಿದಳ ಆಹಾರ ಬೆಳೆಗಳಿಗೆ ಶೇ. 30ರಿಂದ 40ರಷ್ಟು ಜಮೀನನ್ನು ಕಾಯ್ದಿಟ್ಟುಕೊಳ್ಳಬಹುದು. ನಮ್ಮ ರಾಜ್ಯದ ಜಿಲ್ಲೆಗಳಿಗೆ ಅನುಗುಣವಾಗಿ ಸಾಮಾನ್ಯವಾಗಿ ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕದಳ ಬೆಳೆಗಳ ಮಧ್ಯೆ ದ್ವಿದಳ ಧಾನ್ಯಗಳ ಬೆಳೆಗಳ ಸಾಲುಗಳನ್ನು ಹಾಕಬೇಕು.

ಬೆಳೆಯ ತಳಿಗಳ ಆಯ್ಕೆ
ಮಳೆಯಾಶ್ರಯದಲ್ಲಿ, ಮುಂಗಾರಿನಲ್ಲಿ ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವುದಾದರೆ ದೀರ್ಘಾವಧಿ ತಳಿಗಳನ್ನು, ಜೂನ್ ಮುಗಿದ ನಂತರವಾದರೆ ಮಧ್ಯಮಾವಧಿ ತಳಿಗಳನ್ನು ಮತ್ತು ಜುಲೈ ಕೊನೆಯ ಭಾಗ ಹಾಗೂ ಆಗಸ್ಟ್ ತಿಂಗಳಾದರೆ ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡಿಕೊಳ್ಳಬೇಕು. ರಾಗಿ, ತೊಗರಿ, ಅವರೆ, ಸೋಯಾ ಅವರೆ, ನೆಲಗಡಲೆ, ಜೋಳ, ಹುಚ್ಚೆಳ್ಳು, ಅಲಸಂದೆ, ಸೂರ್ಯಕಾಂತಿ, ಎಳ್ಳು, ಹುರುಳಿ, ಮುಸುಕಿನ ಜೋಳ ಮುಂತಾದ ಬೆಳೆಗಳ ಪೈಕಿ ಅಗತ್ಯಕ್ಕೆ ತಕ್ಕಂತೆ ಕೆಲವನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೈನುಗಾರಿಕೆ
ಮೂರು ಹಸುಗಳಿದ್ದರೆ ಅದರಲ್ಲಿ ಸದಾ ಎರಡು ಹಸುಗಳು ದಿನಕ್ಕೆ 30ರಿಂದ 40 ಲೀಟರ್ ಹಾಲು ಕೊಡುವಂತಿರಬೇಕು. ಅದರಿಂದ ನಿತ್ಯ ಆದಾಯ ಬರುತ್ತದೆ. ಬೆಳೆಯುಳಿಕೆಗಳು ಹಾಗೂ ತೋಟದ ಕಳೆಹುಲ್ಲು ದನಗಳಿಗೆ ಮೇವಾಗುತ್ತದೆ. ವರ್ಷಕ್ಕೆ 20ರಿಂದ 22 ಟನ್ ಫಲವತ್ತಾದ ಕೊಟ್ಟಿಗೆ ಗೊಬ್ಬರ ಸಿಗುತ್ತದೆ.
ಮೇವಿನ ಬೆಳೆಗಳು
ಸಮಗ್ರ ಕೃಷಿಯಲ್ಲಿ ಕನಿಷ್ಠ ಮೂರು ಹಸುಗಳು, ಒಂದÀಷ್ಟು ಕುರಿ, ಮೇಕೆಯಂತಹ ಜಾನುವಾರು ಇರಬೇಕು. ಅವುಗಳಿಗೆ ಏಕದಳ ಮತ್ತು ದ್ವಿದಳ ಧಾನ್ಯಗಳ ಮೇವು ಬೆಳೆದುಕೊಳ್ಳಬೇಕು. ಏಕದಳ ಮೇವುಗಳಾದ ಸೂಪರ್ ನೇಪಿಯರ್, ಸಿಒ-4, ಗಿನಿ ಹುಲ್ಲು, ಕಾಂಗೋ ಸಿಗ್ನಲ್ ಹುಲ್ಲು, ಗ್ರೀನ್ ಪ್ಯಾನಿಕ್ ಹುಲ್ಲು, ರೋಡ್ಸ್ ಹುಲ್ಲು, ಪ್ಯಾರಾ ಹುಲ್ಲು ಹಾಗೂ ದ್ವಿದಳ ಮೇವುಗಳಾದ ಕುದುರೆ ಮಸಾಲೆ, ಅಲಸಂದೆ, ಸ್ಟೈಲೋಸ್, ಸಿರಾಟ್ರ, ಅಗಸೆ, ಕ್ಯಾಲಿಯಾಂಡ್ರಾ, ನುಗ್ಗೆ, ಮುಂತಾದುವುಗಳನ್ನು ಆಯ್ಕೆಗೆ ತಕ್ಕಂತೆ ಬೆಳೆಸಿಕೊಳ್ಳಬಹುದು.
ಹಣ್ಣಿನ ಮರಗಳು
ಸುಮಾರು 20 ಗುಂಟೆಯಲ್ಲಿ ಮಾವು, ಸಪೋಟಾ, ಗ್ವಾವಾ, ನೇರಳೆ ಮತ್ತಿತರ ಹಣ್ಣಿನ ಮರಗಳನ್ನು ಬೆಳೆಸಬೇಕು. ಮೊದಲ ನಾಲ್ಕು ವರ್ಷಗಳ ಕಾಲ ಹಣ್ಣಿನ ಮರಗಳ ಸಾಲುಗಳ ಮಧ್ಯೆ ಜಾನುವಾರುಗಳ ಮೇವಿಗಾಗಿ ಹುಲ್ಲು ಬೆಳೆಯಬಹುದು. ಕೃಷಿ ಬೆಳೆಗಳನ್ನೂ ಬೆಳೆಯಬಹುದು.
ಎಲ್ಲವನ್ನೂ ವೈಜ್ಞಾನಿಕವಾಗಿ ಬೆಳೆದರೆ ಮೊದಲ 5 ವರ್ಷದಲ್ಲಿ ಕೊನೆಯ 3 ವರ್ಷಗಳು ಲಾಭದಾಯಕವಾಗಿರುತ್ತವೆ. ಬರ ಬಂದು ಮಳೆ ಕೈಕೊಟ್ಟರೆ ಕಡೇ ಪಕ್ಷ ಮನೆಗಾಗುವಷ್ಟು ಹಣ್ಣು ಹಾಗೂ ಇತರೆ ಕೆಲವು ಬೆಳೆಗಳು ಲಭ್ಯವಾಗುತ್ತವೆ.

ಕೃಷಿ ಅರಣ್ಯ
ದೇಶದಲ್ಲಿ ಶೇ. 23.7ರಷ್ಟು ಅರಣ್ಯ ಭೂಮಿಯಿದ್ದರೆ, ಕರ್ನಾಟಕದಲ್ಲಿ ಶೇ. 19.3ರಷ್ಟು ಮಾತ್ರ ಅರಣ್ಯ ಭೂಮಿಯಿದೆ. ಮಲೆನಾಡಿನಲ್ಲಿ ಶೇ. 33ರಷ್ಟು ಅರಣ್ಯ ಭೂಮಿಯಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಂತೂ ಅರಣ್ಯ ಭೂಮಿಯ ಪ್ರಮಾಣ ಶೇ. 13ಕ್ಕಿಂತ ಕಡಿಮೆ. ಮಳೆ ಬೆಳೆ ಉತ್ತಮವಾಗಿರಲು, ವಾತಾವರಣವು ಹಿತಕರವಾಗಿರಲು ಅರಣ್ಯ ಭೂಮಿಯ ಹಿಗ್ಗುವಿಕೆಯು ಅನಿವಾರ್ಯವಾಗಿದೆ. ಹೆಬ್ಬೇವು, ತೇಗ, ಮಹಾಗನಿ, ಶ್ರೀಗಂಧ, ಸರ್ವೆ, ಸಿಲ್ವರ್ ಓಕ್, ಅಗಸೆ, ಸುಬಾಬುಲ್, ಬೇವು, ಹೊಂಗೆ, ಸಿಮರೂಬಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ಬೆಳೆಸಬಹುದು. ಹಸಿರೆಲೆಗಳು ದನಗಳಿಗೆ ಮೇವಾಗುತ್ತವೆ. ಹಸಿರೆಲೆ ಗೊಬ್ಬರ ಮತ್ತು ತಿಪ್ಪೆಗೆ ಸೇರಿಸಲು ಹಸಿರೆಲೆಗಳನ್ನು ಬಳಸಬಹುದು. ಕೃಷಿ ಅರಣ್ಯ ಪದ್ದತಿಯಲ್ಲಿ ಒಂದು ಪುಟ್ಟ ನೆಡುತೋಪನ್ನು ಸೃಷ್ಟಿಸಬಹುದು. ಸಾಲುಗಳು 5ರಿಂದ 8 ಮೀಟರ್ ಅಂತರದಲ್ಲಿರಲಿ. ಸಾಲುಗಳ ನಡುವೆ ಅಂತರ ಬೆಳೆಗಳಾಗಿ ರಾಗಿ, ಮುಸುಕಿನ ಜೋಳ, ಕಡಲೆ ಕಾಯಿ, ಹುರುಳಿ, ಅಲಸಂದೆ, ಸೋಯಾ ಅವರೆ, ಜೋಳ, ತೊಗರಿ ಇತ್ಯಾದಿ ಬೆಳೆಯಬಹುದು.
ಜೊತೆಗೆ, ಸಮಗ್ರ ಕೃಷಿ ಪದ್ದತಿಯಲ್ಲಿ ಬದುಗಳ ಮೇಲೆ ಬಹುಪಯೋಗಿ ಗಿಡ ಮರಗಳನ್ನು ಬೆಳೆಸಬೇಕು. ಮೇವು ಮರಗಳನ್ನು ಸವರುತ್ತಾ ಹೋಗಿ 15 ಅಡಿ ಎತ್ತರ ಇರುವ ಹಾಗೇ ನೋಡಿಕೊಳ್ಳಬೇಕು.
ಸಮಗ್ರ ಕೃಷಿಯಲ್ಲಿ ನೀರು ಸಂರಕ್ಷಣೆ
ಜಮೀನನ್ನು ವಿಭಾಗಿಸಿಕೊಳ್ಳಲು ಹಾಕಿರುವ ಬದುಗಳ ಪಕ್ಕದಲ್ಲಿ ಒಂದು ಟ್ರೆಂಚ್ ಅನ್ನು ಹೊಡೆದು ನೀರು ಸರಾಗವಾಗಿ ಹರಿದು ಕೃಷಿ ಹೊಂಡವನ್ನು ತಲುಪುವಂತೆ ಮಾಡಬೇಕು. ಕೃಷಿ ಹೊಂಡದ ನೀರನ್ನು ತೋಟಗಾರಿಕಾ ಬೆಳೆಗಳಿಗೆ ಬಳಸಬಹುದು.
ನೀರು ಮತ್ತು ಪೋಷಕಾಂಶಗಳ ನಿರ್ವಹಣೆ
ನೀರಾವರಿ ಬೆಳೆಗಳಲ್ಲಿ ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಬೇಕಾಗುತ್ತದೆ. ಹನಿ ನೀರಾವರಿ, ಒಳಮೈ ಹನಿ ನೀರಾವರಿ, ಸಿಂಚನ ನೀರಾವರಿ, ಲೇಸರ್ ಸಿಂಪರಣೆಯಂತಹ ಕ್ರಮಗಳನ್ನು ಅಳವಡಿಸಿಕೊಂಡು ಶೇ. 60ರಿಂದ 70ರಷ್ಟು ನೀರಿನ ಉಳಿತಾಯ ಮಾಡಬಹುದು. ನಿಖರವಾಗಿ ಬೆಳೆಗೆ ಅಗತ್ಯವಿರುವಷ್ಟು ಮಾತ್ರ ನೀರನ್ನು ಉಣಿಸಬಹುದು. ಸೆನ್ಸಾರ್ ಇರಿಗೇಷನ್ ಎಂಬ ಸಂವೇದಕ ಆಧಾರಿತ ನೀರು ನಿರ್ವಹಣೆ ಮತ್ತು ಸ್ವಯಂಚಾಲಿತ ನೀರಾವರಿ ಎಂಬ ಆಧುನಿಕ ತಂತ್ರಜ್ಞಾನಗಳಿವೆ. ಅವನ್ನು ಪ್ರಾತ್ಯಕ್ಷಿಕೆಗಳನ್ನು ನೋಡಿ ಇಲ್ಲವೇ ತರಬೇತಿಯ ಮೂಲಕ ಕಲಿಯಬೇಕು.
ಐದಾರು ದಶಕಗಳ ಹಿಂದೆ ಹಸಿರು ಕ್ರಾಂತಿಯಾದಾಗ ಯೂರಿಯಾ, ಡಿಎಪಿ ಮತ್ತಿತರ ರಾಸಾಯನಿಕ ಗೊಬ್ಬರಗಳನ್ನು ಯಥೇಚ್ಛವಾಗಿ ಬಳಸಲಾಗಿದೆ. ಇದೀಗ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕೆನ್ನುವ ಸಂಶೋಧನೆಗಳಾಗಿವೆ. ನೈಟ್ರೋಜನ್, ಪಾಸ್ಪರಸ್ ಮತ್ತು ಪೊಟಾಶ್ ಅನ್ನು ಏಕದಳ ಬೆಳೆಗಳಾದರೆ 4 : 2 : 1 ಪ್ರಮಾಣದಲ್ಲಿ ಹಾಗೂ ದ್ವಿದಳ ಧಾನ್ಯದ ಬೆಳೆಗಳಾದರೆ 1 : 2 : 1 ಪ್ರಮಾಣದಲ್ಲಿ ನಾಲ್ಕರಿಂದ ಆರು ಸಾರಿ ಆಗಾಗ ವಿಭಜಿತ ಪ್ರಮಾಣದಲ್ಲಿ ನೀಡಬೇಕಾಗುತ್ತದೆ. ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ಮೀನುಗಾರಿಕೆ
ಒಂದು ಹೆಕ್ಟೇರ್ ಜಮೀನಿನಲ್ಲಿ ನೀರು ಬಸಿದು ಸೇರುವ ಇಳಿಜಾರಿನ ಕಡೆ ಒಂದು ಕೃಷಿ ಹೊಂಡವಿರಲಿ. ಅದರಲ್ಲಿ ಮೀನು ಸಾಕಣೆ ಮಾಡಬಹುದು. ಕೃಷಿ ಹೊಂಡದಲ್ಲಿ ಕನಿಷ್ಠ ಮೂರು ತಿಂಗಳು ನೀರಿದ್ದರೆ ಕಾಟ್ಲಾ, ಬೆಳ್ಳಿ ಗೆಂಡೆ, ಹುಲ್ಲು ಗೆಂಡೆ, ರೋಹು, ಸಾಮಾನ್ಯ ಗೆಂಡೆ, ಮೃಗಾಲ್ ಜಾತಿಯ ಮೀನು ಮರಿಗಳನ್ನು ಸಾಕಬಹುದು. ಸಾಧ್ಯವಾದರೆ, ಕೃಷಿ ಹೊಂಡದ ಒಂದು ಅಂಚಿನಲ್ಲಿ ಅದರ ಮೇಲೆ ಒಂದು ಪುಟ್ಟ ಕೋಳಿ ಗೃಹವನ್ನು ಕಬ್ಬಿಣದ ಕಂಬಿಗಳಿಂದ ನಿರ್ಮಿಸಬಹುದು. ಅದರಲ್ಲಿ ಹತ್ತಾರು ಕೋಳಿಗಳನ್ನು ಸಾಕಿದರೆ ಅದರ ಹಿಕ್ಕೆಯು ನೇರವಾಗಿ ನೀರಿಗೆ ಬೀಳುತ್ತದೆ. ಕೋಳಿ ಹಿಕ್ಕೆಯು ಮೀನಿಗೆ ಆಹಾರವಾಗುತ್ತದೆ. ದೇಶ ವಿದೇಶಗಳಲ್ಲಿ ಕೋಳಿ – ಮೀನು ಮಿಶ್ರ ಸಾಕಣೆಯು ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಇಂತಹ ಸಂಯೋಜಿತ ಕೋಳಿ ಮತ್ತು ಮೀನು ಸಾಕಣೆಗೆ ಭಿನ್ನ ಅಭಿಪ್ರಾಯಗಳಿವೆ.

ಆರ್ಥಿಕತೆ ಮತ್ತು ಲಾಭ
ಕೃಷಿ ಬೆಳೆಗಳಲ್ಲಿ ಪ್ರತಿ 1 ರೂ. ಹೂಡಿಕೆಗೆ ರೂ. 1.25ರಿಂದ 1.50 ರೂ ಲಾಭ, ಪಶುಸಂಗೋಪನೆಯಲ್ಲಿ ಪ್ರತಿ 1 ರೂ. ಹೂಡಿಕೆಗೆ ರೂ. 2 ಲಾಭ, ರೇಷ್ಮೆ ಕೃಷಿಯಲ್ಲಿ ಪ್ರತಿ 1 ರೂ. ಹೂಡಿಕೆಗೆ ರೂ. 2.75ರಿಂದ 3.50 ಲಾಭ, ತೋಟಗಾರಿಕೆ ಬೆಳೆಗಳಲ್ಲಿ ಪ್ರತಿ 1 ರೂ. ಹೂಡಿಕೆಗೆ ರೂ. 2 ಲಾಭವನ್ನು ನಿರೀಕ್ಷಿಸಬಹುದು. ನೀರಾವರಿ ಸೌಲಭ್ಯವಿದ್ದರೆ ಒಂದು ಹೆಕ್ಟೇರಿನಲ್ಲಿ ಪ್ರತಿ ರೂ. 2ರಿಂದ 2.5 ಲಕ್ಷಗಳ ಹೂಡಿಕೆ ಮಾಡಿ ರೂ. 7ರಿಂದ 8 ಲಕ್ಷ ಆದಾಯ ಪಡೆಯಬಹುದು.
ಮುಂದುವರೆದ ಹಾಗೂ ಮುಂದುವರೆಯುತ್ತಿರುವ ಹಲವು ದೇಶಗಳಲ್ಲಿ ಸಮಗ್ರ ಕೃಷಿಯನ್ನು ಕೈಗೊಳ್ಳಲಾಗುತ್ತಿದೆ. ಚೀನಾ, ಅಮೆರಿಕಾ, ಬ್ರೆಜಿಲ್, ಅರ್ಜೆಂಟೈನಾ, ಜರ್ಮನಿ, ಸ್ವಿಟ್ಸರ್‍ಲ್ಯಾಂಡ್, ಫ್ರಾನ್ಸ್, ನೆದರ್‍ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಂಡೋನೇಶಿಯಾ ಮತ್ತಿತರ ದೇಶಗಳಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಗ್ರ ಕೃಷಿ ಪದ್ದತಿಯ ಒಂದು ಪ್ರಾತ್ಯಕ್ಷಿಕೆಯಿದೆ. ಆಸಕ್ತರು ಖುದ್ದು ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಹನುಮಂತಪ್ಪ, ಡಿ. ಸಿ., ಪ್ರಾಧ್ಯಾಪಕರು (ಬೇಸಾಯಶಾಸ್ತ್ರ), ಮೊ: 9880019697, ಮಿಂಚಂಚೆ: [email protected]
ಕೊನೆಯ ಮಾತು : ಸಮಗ್ರ ಕೃಷಿಗೆ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಅಗತ್ಯತೆ
ಯಶಸ್ವಿಯಾಗಿ ಸಮಗ್ರ ಕೃಷಿ ಕೈಗೊಳ್ಳಲು ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಮೀನುಗಾರಿಕೆ, ಕೋಳಿ ಸಾಕಣೆ ಕುರಿತಂತೆ ತಜ್ಞರಿಂದ ರೈತರಿಗೆ ನಿರಂತರವಾಗಿ ಮಾಹಿತಿ ಮತ್ತು ತರಬೇತಿ ನೀಡಬೇಕಾಗುತ್ತದೆ. ವಿಶ್ವವಿದ್ಯಾಲಯಗಳ ಸಾವಿರಾರು ಅಥವಾ ನೂರಾರು ಎಕರೆಗಳ ಕ್ಯಾಂಪಸ್‍ಗಳಲ್ಲಿ ಸಮಗ್ರ ಕೃಷಿಯ ಪ್ರಾತ್ಯಕ್ಷಿಕೆಗಳನ್ನು ಸ್ಥಾಪಿಸಿ ರೈತರನ್ನು ಆಕರ್ಷಿಸಿ ಪ್ರೇರಣೆ ನೀಡಬೇಕಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಕೃಷಿಗೆ ಕೆಲವು, ಪಶುಗಳಿಗೊಂದು, ತೋಟಗಾರಿಕೆಗೊಂದು ಎಂಬಂತೆ ಪ್ರತ್ಯೇಕವಾಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಇಂತಹ ಪ್ರತ್ಯೇಕತೆಯಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ವಿದ್ಯಾರ್ಥಿಗಳ ಅಂತರಶಿಸ್ತೀಯ ಅಧ್ಯಯನಕ್ಕೂ, ಸಂಪೂರ್ಣ ಜ್ಞಾನಕ್ಕೂ ತೊಡಕಾಗಿದೆ. ವಿವಿಧ ವಿಷಯ ತಜ್ಞರ ಮಧ್ಯೆ ಮಾಹಿತಿ ವಿನಿಮಯವು ಸುಗಮವಾಗಿ ನಡೆಯುತ್ತಿಲ್ಲ. ಕೃಷಿ ವಿಜ್ಞಾನಗಳ ಅಧ್ಯಯನವು ಒಂದಕ್ಕೊಂದು ಪೂರಕವಾಗಿವೆ. ಇದನ್ನೆಲ್ಲಾ ಮನಗಂಡ ರಾಜ್ಯ ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಟಿ. ಎಂ. ವಿಜಯಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಜುಲೈ 2025ರಲ್ಲಿ ವರದಿ ಸಲ್ಲಿಸಿದೆ. ಸಮಿತಿಯ ಶಿಫಾರಸ್ಸಿನಂತೆ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಷಯಗಳ ಕಾಲೇಜುಗಳನ್ನು ಕೃಷಿ ವಿಶ್ವವಿದ್ಯಾಲಯವೆಂಬ ಒಂದೇ ಸೂರಿನಡಿ ತಂದು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಬೇಕಿದೆ. ಆಗ ಸಮಗ್ರ ಕೃಷಿಗೊಂದು ವೇಗ ಸಿಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅನುಕೂಲಸ್ಥ ರೈತರು ಸಮಗ್ರ ಕೃಷಿಯನ್ನು ಕೈಗೊಳ್ಳಬಹುದು.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



