ಭಾರತವು ಒಂದು ಭಾಷಾ ನಾಗರಿಕತೆಯಾಗಿದೆ ಎಂದಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಭಾಷೆಯ ಕುರಿತು ನಡೆದಿದ್ದ ಸುದೀರ್ಘ ಚರ್ಚೆಗಳನ್ನು ಉಲ್ಲೇಖಿಸಿದ ಅವರು, ದೇಶ ವಿಭಜನೆಯಾಗದಿದ್ದರೆ ಹಿಂದಿ ಮತ್ತು ಉರ್ದು ಭಾಷೆಗಳ ಮಿಶ್ರಣವಾದ ‘ಹಿಂದೂಸ್ತಾನಿ’ ನಮ್ಮ ಭಾಷೆಯಾಗುತ್ತಿತ್ತು
ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ವಿಶ್ವವಿದ್ಯಾಲಯಗಳ ಮೂಲಭೂತ ಲಕ್ಷಣವಾಗಿದ್ದು, ವಿದ್ಯಾರ್ಥಿಗಳ ಈ ದನಿಯನ್ನು ಹತ್ತಿಕ್ಕಿದರೆ ವಿಶ್ವವಿದ್ಯಾಲಯಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ವಿದ್ಯಾರ್ಥಿಗಳ ಹಕ್ಕುಗಳು, ಹಿಜಾಬ್ ವಿವಾದ, ಭಾಷಾ ವೈವಿಧ್ಯತೆ, ಮರಣದಂಡನೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಮಾಧ್ಯಮಗಳ ನಿಗಾ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ತಮ್ಮ ಒಳನೋಟಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ವ್ಯವಸ್ಥೆಯನ್ನು ಪ್ರಶ್ನಿಸುವ ವಿದ್ಯಾರ್ಥಿಗಳ ಮೇಲೆ ದಂಡನಾತ್ಮಕ ಕ್ರಮ ಕೈಗೊಳ್ಳುವುದು ಅಸಾಂವಿಧಾನಿಕ ಎಂದು ಇತ್ತೀಚೆಗಷ್ಟೇ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದರು. ಇದನ್ನು ಶೇ 100ರಷ್ಟು ಒಪ್ಪಿರುವ ಧುಲಿಯಾ, ಶಾಲಾ ಜೀವನಕ್ಕೂ ಹಾಗೂ ವಿಶ್ವವಿದ್ಯಾಲಯದ ಮುಕ್ತ ವಾತಾವರಣಕ್ಕೂ ಇರುವ ಅತಿದೊಡ್ಡ ವ್ಯತ್ಯಾಸವೇ ‘ವಿಮರ್ಶಾತ್ಮಕ ಚಿಂತನೆ’ (ಕ್ರಿಟಿಕಲ್ ಥಿಂಕಿಂಗ್) ಎಂದಿದ್ದಾರೆ. ತರಗತಿಗಳ ಜೊತೆಗೆ ಕ್ಯಾಂಟೀನ್, ಕಾರಿಡಾರ್ ಹಾಗೂ ಗ್ರಂಥಾಲಯಗಳ ನಿರಂತರ ಚರ್ಚೆಗಳಿಂದ ಇದು ವಿಕಸನಗೊಳ್ಳುತ್ತದೆ. ದಬ್ಬಾಳಿಕೆಯ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಿದರೆ ಅದು ಜಾಗೃತಿಯ ಸಂಕೇತ. ಆದರೆ, ಪ್ರಜಾಸತ್ತಾತ್ಮಕ ಭಿನ್ನಮತ ಮತ್ತು ಸಾರ್ವಜನಿಕ ಗಲಭೆಗಳ ನಡುವೆ ಒಂದು ಸ್ಪಷ್ಟವಾದ ಗೆರೆ ಇರಬೇಕು, ವಿರೋಧವು ಹಿಂಸಾಚಾರಕ್ಕೆ ತಿರುಗಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಭಿನ್ನಮತದ ಹಕ್ಕನ್ನು ಪ್ರತಿಪಾದಿಸುವ ಜೊತೆಗೆ, ವಸಾಹತುಶಾಹಿ ಕಾಲದ ಹಳೆಯ ಕಾನೂನುಗಳನ್ನು ಕೈಬಿಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮ್ಮ ಅಜ್ಜ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪತ್ರಕರ್ತರಾಗಿದ್ದರ ಬಗ್ಗೆ ಪ್ರಸ್ತಾಪಿಸಿದ ಅವರು, ಬ್ರಿಟಿಷ್ ಸರ್ಕಾರ ಅವರ ಮೇಲೂ ದೇಶದ್ರೋಹದ ಆರೋಪ ಹೊರಿಸಲಾಗಿತ್ತು ಎಂಬುದನ್ನು ಸ್ಮರಿಸಿದರು. ದೇಶದ್ರೋಹದಂತಹ ದಬ್ಬಾಳಿಕೆಯ ಹಾಗೂ ಹಳೆಯ ಕಾಲದ ಕಾನೂನುಗಳು ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಗತ್ಯವಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡಿದ ಅವರು, 1986ರ ಬಿಜೋಯ್ ಇಮ್ಯಾನುಯೆಲ್ ಪ್ರಕರಣದಲ್ಲಿ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಅವರು ಎತ್ತಿಹಿಡಿದಿದ್ದ ‘ಸಹಿಷ್ಣುತೆ’ಯ ಮೌಲ್ಯವನ್ನು ಸ್ಮರಿಸಿದರು. ಹಿಜಾಬ್ ವಿವಾದದಲ್ಲಿ ತಾವು ನೀಡಿದ್ದ ತೀರ್ಪು ಇದೇ ಸಹಿಷ್ಣುತೆಯ ತಳಹದಿಯ ಮೇಲಿತ್ತು ಎಂದಿದ್ದಾರೆ. ತಮಗೆ ವೈಯಕ್ತಿಕವಾಗಿ ಹಿಜಾಬ್ ಇಷ್ಟವಿಲ್ಲದಿದ್ದರೂ, ಅದನ್ನು ಧರಿಸುವುದು ಅಥವಾ ಬಿಡುವುದು ಮಹಿಳೆಯರ ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಚಾರ. ಆ ಆಯ್ಕೆಯನ್ನು ರಕ್ಷಿಸುವುದು ಸಂವಿಧಾನದ ಆಶಯವಾಗಿದೆ. ಹೀಗಾಗಿ, ಈ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಉರ್ದು ನಾಮಫಲಕ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತವು ಒಂದು ಭಾಷಾ ನಾಗರಿಕತೆಯಾಗಿದೆ ಎಂದಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಭಾಷೆಯ ಕುರಿತು ನಡೆದಿದ್ದ ಸುದೀರ್ಘ ಚರ್ಚೆಗಳನ್ನು ಉಲ್ಲೇಖಿಸಿದ ಅವರು, ದೇಶ ವಿಭಜನೆಯಾಗದಿದ್ದರೆ ಹಿಂದಿ ಮತ್ತು ಉರ್ದು ಭಾಷೆಗಳ ಮಿಶ್ರಣವಾದ ‘ಹಿಂದೂಸ್ತಾನಿ’ ನಮ್ಮ ಭಾಷೆಯಾಗುತ್ತಿತ್ತು ಎಂದಿದ್ದಾರೆ. ಎಲ್ಲ ಭಾಷೆಗಳನ್ನೂ ನಾವು ಪ್ರೀತಿಸಬೇಕು. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಯಾವುದೇ ಭಾಷೆಯನ್ನು ಬಳಸುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಮರಾಠಿ ಮತ್ತು ಉರ್ದು ಭಾಷಾ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮರಣದಂಡನೆ ಶಿಕ್ಷೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಜಗತ್ತಿನ ಕೇವಲ 50 ದೇಶಗಳಲ್ಲಿ ಮಾತ್ರ ಈ ಶಿಕ್ಷೆ ಅಸ್ತಿತ್ವದಲ್ಲಿದೆ ಎಂದರು. ಕ್ರಿಮಿನಲ್ ಪ್ರಕರಣಗಳಲ್ಲಿ ‘ದೋಷಿ ಎಂದು ತೀರ್ಮಾನಿಸುವುದು’ ಮತ್ತು ‘ಶಿಕ್ಷೆ ಪ್ರಕಟಿಸುವುದು’ ಎರಡು ಪ್ರತ್ಯೇಕ ಹಂತಗಳಾಗಿವೆ. ಅಪರಾಧಿಯನ್ನು ದೋಷಿ ಎಂದು ಘೋಷಿಸಿದ ಕೂಡಲೇ ಶಿಕ್ಷೆ ಪ್ರಕಟಿಸುವ ಬದಲು, ಆತನ ಹಿನ್ನೆಲೆ ಹಾಗೂ ಪರಿಸ್ಥಿತಿಗಳನ್ನು ಆಧರಿಸಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಪ್ರತ್ಯೇಕ ವಿಚಾರಣೆ ನಡೆಯಬೇಕು. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಇಚ್ಛೆಯಂತೆ ತೀರ್ಪು ನೀಡುವುದಿಲ್ಲ, ಬದಲಾಗಿ ಕಾನೂನಿನ ಚೌಕಟ್ಟಿನಲ್ಲೇ ನಿರ್ಣಯ ಕೈಗೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡರು.
ನ್ಯಾಯಾಲಯಗಳ ಕಲಾಪಗಳ ನೇರಪ್ರಸಾರ (ಲೈವ್ ಸ್ಟ್ರೀಮಿಂಗ್) ಮತ್ತು ಮಾಧ್ಯಮಗಳ ವರದಿಗಾರಿಕೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಬೆಳವಣಿಗೆಯನ್ನು ತಡೆಯಲಾಗದಿದ್ದರೂ, ನ್ಯಾಯಾಲಯದೊಳಗೆ ನ್ಯಾಯಮೂರ್ತಿಗಳು ಹಾಗೂ ವಕೀಲರ ನಡುವೆ ನಡೆಯುವ ಸಾಮಾನ್ಯ ಚರ್ಚೆಗಳನ್ನೂ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿ ವಿವಾದ ಸೃಷ್ಟಿಸುತ್ತಿವೆ. ನ್ಯಾಯಮೂರ್ತಿಗಳು ಕೂಡ ಮನುಷ್ಯರು, ಅವರು ಸಾರ್ವಜನಿಕ ವೇದಿಕೆಯಲ್ಲಿ ಕಠಿಣ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇಂತಹ ಪ್ರಬುದ್ಧವಲ್ಲದ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೆಲವು ಬದಲಾವಣೆಗಳ ಅಗತ್ಯವಿದೆ ಎಂದಿದ್ದಾರೆ. ಆದರೆ, ಕೊಲಿಜಿಯಂ ಒಮ್ಮೆ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದರೆ, ಬಲವಾದ ಕಾರಣಗಳಿಲ್ಲದೆ ಸರ್ಕಾರ ಆ ನೇಮಕಾತಿಗಳನ್ನು ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಯುವ ವಕೀಲರು ಕೇವಲ ತಂತ್ರಜ್ಞಾನದ ಮೊರೆ ಹೋಗುವ ಬದಲು ಜವಾಹರಲಾಲ್ ನೆಹರೂ, ರಾಮಚಂದ್ರ ಗುಹಾ ಅವರಂತಹ ಲೇಖಕರ ಪುಸ್ತಕಗಳನ್ನು ಓದಬೇಕು, ಹಿರಿಯ ವಕೀಲರ ವಾದ ಮಂಡನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.




