RSS ಅಂಗಸಂಸ್ಥೆಗಳಿಗೆ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಂದ ನೂರಾರು ಕೋಟಿ ಹಣ ಹರಿದುಬರುತ್ತಿದೆ, ಆದರೆ ಸಂಘಪರಿವಾರ ಮಾತ್ರ ತಾನು ಸರ್ಕಾರಿ ಹಣ ಪಡೆದುಕೊಳ್ಳುವುದಿಲ್ಲ ಎಂದು ಹೇಳಿಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ಸ್ವಾಮ್ಯದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಿಂದ ರೂ. 668 ಕೋಟಿಗೂ ಅಧಿಕ ಹಣ ಆರ್‌ಎಸ್‌ಎಸ್ (RSS) ನಂಟು ಹೊಂದಿರುವ 20 ಸಂಸ್ಥೆಗಳಿಗೆ ಹರಿದುಬಂದಿದೆ ಎಂಬ ಗಂಭೀರ ವಿಚಾರ ನಿನ್ನೆಯಷ್ಟೇ ತನಿಖಾ ವರದಿಯೊಂದರಿಂದ ಬಯಲಾಗಿತ್ತು. TNM ನ ಈ ವರದಿ ಉಲ್ಲೇಖಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಂಘ ಪರಿವಾರದ ಹಣಕಾಸು ಮೂಲಗಳು ಹಾಗೂ ಪಾರದರ್ಶಕತೆಯ ಬಗ್ಗೆ ತೀವ್ರವಾಗಿ ಪ್ರಶ್ನಿಸಿದ್ದಾರೆ.
ದೇವಸ್ಥಾನಗಳ ಕಾಣಿಕೆಗಳು ಮತ್ತು ವಿಪತ್ತು ಪರಿಹಾರ ನಿಧಿಯಿಂದ ಹಿಡಿದು, ಕೋವಿಡ್ ಪರಿಹಾರ, ಸಾರ್ವಜನಿಕ ಭೂಮಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿಗಳವರೆಗೆ ಸಾರ್ವಜನಿಕ ಹಣವನ್ನು ಸಂಘಕ್ಕೆ ಧಾರೆಯೆರೆಯಲಾಗುತ್ತಿದೆ. ತಾವು ಯಾವುದೇ ಸರ್ಕಾರಿ ಧನಸಹಾಯವನ್ನು ಪಡೆಯುವುದಿಲ್ಲ ಎಂದು @RSSorg ಸದಾ ಹೇಳಿಕೊಳ್ಳುತ್ತದೆ. ಆದರೆ, ತೆರಿಗೆದಾರರ ಬೆಂಬಲಿತ ಸಾರ್ವಜನಿಕ ಸಂಸ್ಥೆಗಳು ನಿಮ್ಮ ಅಂಗಸಂಸ್ಥೆಗಳಿಗೆ ಮುಕ್ತವಾಗಿ ಹಣಕಾಸಿನ ನೆರವು ನೀಡುತ್ತಿರುವಾಗ, ಆರ್‌ಎಸ್‌ಎಸ್ ಸರ್ಕಾರಿ ಹಣದಿಂದ ಸ್ವತಂತ್ರವಾಗಿದೆ ಎಂದು ಯಾವ ನೈತಿಕತೆಯಲ್ಲಿ ಹೇಳಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಹಣ ಮುಟ್ಟಲ್ಲ ಎನ್ನುವ ಆರ್‌ಎಸ್‌ಎಸ್ ಅಂಗಸಂಸ್ಥೆಗಳಿಗೆ ಒಎನ್‌ಜಿಸಿಯಿಂದಲೇ ₹668 ಕೋಟಿ ದೇಣಿಗೆ
ಸಮುದ್ರದಷ್ಟು ಸಾರ್ವಜನಿಕ ಹಣವನ್ನು ಪಡೆಯುತ್ತಿರುವ ಆರ್‌ಎಸ್‌ಎಸ್ ಎಂಬ ಕನಿಷ್ಠ ನೋಂದಾವಣಿ ಇಲ್ಲದ ಸಂಘಟನೆ, ತನ್ನ ನಿಧಿಯ ಮೂಲಗಳ ಬಗ್ಗೆ ಯಾವುದೇ ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿದೆ. ಇದು ಕೇವಲ ನೋಂದಣಿಯದ್ದಷ್ಟೇ ಅಲ್ಲದೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರತಿಯೊಬ್ಬ ನಾಗರಿಕನ ಹಕ್ಕಿನ ಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




