ಕರ್ನಾಟಕ ಸಾಂಸ್ಕೃತಿಕ ನಾಯಕ “ವಿಶ್ವಗುರು” ಬಸವಣ್ಣನವರನ್ನು ಅವಹೇಳನ ಮಾಡಿದ ಇಂಗ್ಲಿಷ್ ಲೇಖಕ ಮತ್ತು ಅಂಕಣಕಾರ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ರಾಷ್ಟ್ರೀಯ ಬಸವ ದಳ, ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್ ಮತ್ತು ಎಲ್ಲಾ ಬಸವಪರ ಸಂಘಟನೆಗಳು ಆಗ್ರಹಿಸಿದೆ. ಹಾಗೆಯೇ ಇದೇ ಸಂದರ್ಭದಲ್ಲಿ ಬಸವಣ್ಣನವರನ್ನು 2024ರ ಜನವರಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದಸಿದೆ.
ಅನಿವಾಸಿ ಭಾರತೀಯನಾದ ರವಿ ಹಂಜ್ (ರವಿ ಹಂಜಗಿಮಠ) ಎಂಬ ವ್ಯಕ್ತಿಯು ಇತ್ತೀಚೆಗೆ ‘ವಿಶ್ವವಾಣಿ’ (TV, YOU TUBE) ಯ್ಯುಟ್ಯೂಬ್ ವಾಹಿನಿಯ ಮೂಲಕ ಸಂದರ್ಶನವನ್ನು ನೀಡಿ ಬಸವಣ್ಣನವರ ಬಗ್ಗೆ ಅತ್ಯಂತ ಕೀಳು ಭಾಷೆಯನ್ನು ಬಳಸಿ ಕಳ್ಳ, ಸುಳ್ಳ, ಕೊಲೆಗಾರ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಸಮಸ್ತ ಲಿಂಗಾಯತರನ್ನು ‘ಲಿಂಗಾ ಹತರು’ ಎಂದು ಜರೆದಿದ್ದಾರೆ. 12ನೇ ಶತಮಾನದ ಎಲ್ಲ ಶರಣರು ಬರೆದ ವಚನಗಳ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಬಸವಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬಸವಣ್ಣ ಅವಹೇಳನ ಕೇಸ್: ದೇಶ ಬಿಟ್ಟು ಪರಾರಿಯಾಗಲು ಯತ್ನ; ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಬಂಧನ
‘ಬಸವ ಮಂಟಪ’ ಎಂಬ ಪುಸ್ತಕವನ್ನು ಮುದ್ರಿಸಿ ಅಲ್ಲಿಯೂ ಬಸವಾದಿ ಶರಣರ ಬಗ್ಗೆ ವಚನ ಸಾಹಿತ್ಯದ ಬಗ್ಗೆ ಲಿಂಗಾಯತರ ಬಗ್ಗೆ ಆಧಾರ ರಹಿತವಾಗಿ ಅವಹೇಳನ ಮಾಡಿದ್ದಾರೆ. ನವೆಂಬರ್ 13ರಂದು ವಿಶ್ವವಾಣಿ ಟಿವಿ ಯೂಟ್ಯೂಬ್ ವಾಹಿನಿಯಲ್ಲಿ ಸಂಪಾದಕನಾದ ವಿಶ್ವೇಶ್ವರ ಭಟ್ ಅವರು ರವಿ ಹಂಜ್ ಮಾಡಿರುವ ಆಧಾರ ರಹಿತ ಅವಹೇಳನಕಾರಿ ಸಂದರ್ಶನವನ್ನು ಪ್ರಚಾರ, ಪ್ರಸಾರ ಮಾಡಿ ಈ ಕುಕೃತ್ಯಕ್ಕೆ ಕೈ ಜೋಡಿಸಿದ್ದಾರೆ. ಇದು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಮಾಡಿರುವ ಘೋರ ಅಪಮಾನವಾಗಿದೆ. ಈ ಮೂಲಕ ನಾಡಿನ ಅಸ್ಮಿತೆಯನ್ನು ಕೆಣಕಿದ್ದಾರೆ ಎಂದು ದೂರಿದೆ.

ಇದರಿಂದ ಮನನೊಂದ ಸಮಸ್ತ ಬಸವಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ “ಬಸವ ಮಂಟಪ” ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಿಶ್ವವಾಣಿ ಪತ್ರಿಕೆಯ ಬಸವಮಂಟಪ ಅಂಕಣದ Digital content ಅನ್ನು ಶಾಶ್ವತವಾಗಿ ತೆಗೆಯಬೇಕು ಎಂದು ಆಗ್ರಹ ಪೂರ್ವಕವಾಗಿ ವಿನಂತಿಸುವುದಾಗಿ ಸಂಘಟನೆಗಳು ಹೇಳಿವೆ.
ಹಾಗೆಯೇ ರವಿ ಹಂಜ್ ಮತ್ತು ಈ ಸಂದರ್ಶನವನ್ನು ಪ್ರಚಾರ, ಪ್ರಸಾರ ಮಾಡಿದ ವಿಶ್ವವಾಣಿ ಟಿ ವಿ ಸಂಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದ ಕಾರಣ, ನಮ್ಮ ಮನವಿಗೆ ಸ್ಪಂದಿಸಿ ‘ಬಸವ ಮಂಟಪ’ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಇವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ನಿರ್ಣಯ ಕೈಕೊಂಡಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ಬಸವಪರ ಸಂಘಟನೆಗಳು ಅಭಿನಂದಿಸಿವೆ.
ಇದನ್ನೂ ಓದಿ: ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ಸರ್ಕಾರ ನಿರ್ಧಾರ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಎಫ್‌ಐಆರ್
ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಶ್ವವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ವಿಶ್ವಗುರು ಬಸವಣ್ಣನವರನ್ನು ಶಿವಶರಣರನ್ನು ಲಿಂಗಾಯತ ಮಠಾಧೀಶರನ್ನು, ಲಿಂಗಾಯತ ಮುಖಂಡರನ್ನು, ಲಿಂಗಾಯತ ಹೋರಾಟಗಾರರನ್ನು ನಿರಂತರವಾಗಿ ಟೀಕಿಸುತ್ತಾ ಅವರ ತೆಜೋವಧೆ ಮಾಡುತ್ತಿದ್ದಾರೆ. ಇವರ ಹಿಂದೆ ಕೆಲವು ಕಾಣದ ಶಕ್ತಿಗಳು ಲಿಂಗಾಯತರ ವಿರುದ್ಧ ಷಡ್ಯಂತ್ರ ಮಾಡಿ ಅಸ್ಮಿತೆಗೆ ಕೈಹಾಕಿವೆ. ಈ ವ್ಯವಸ್ಥಿತ ಹುನ್ನಾರವನ್ನು ಈ ಕೂಡಲೇ ನಿಲ್ಲಿಸಬೇಕು ಹಾಗೂ ಕ್ಷಮೆ ಕೇಳಬೇಕು ಎಂದು ರಾಷ್ಟ್ರೀಯ ಬಸವ ದಳ, ಸಿದ್ಧಗಂಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಎಲ್ಲಾ ಬಸವಪರ ಸಂಘಟನೆಗಳು ಆಗ್ರಹಿಸಿವೆ.
ಈ ಪ್ರತಿಭಟನೆಯಲ್ಲಿ ಜ್ಞಾನೇಶ್ವರಿ ಮಾತಾಜಿ, ಅನಿಮಿಷಾನಂದ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಅಕ್ಕ ನಾಗಲಾಂಬಿಕ ಮಾತಾಜಿ, ಬಸವಪ್ರಕಾಶ, ಶರಣ ಶ್ರೀ ಚಂದ್ರಮೌಳಿ ಎನ್ ಲಿಂಗಾಯತ, ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿ, ಶರಣ ಶ್ರೀ ಚಂದ್ರಶೇಖರ ಟಿ ಎಮ್, ಸಿದ್ಧಗಂಗಾ ಚಾರಿಟಬಲ್ ಟ್ರಸ್ಟ್ ಭಾಗಿಯಾಗಿದ್ದರು.




