ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಕಾರ್ಮಿಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಕನಿಷ್ಠ ವೇತನವನ್ನು ಬರೋಬ್ಬರಿ ಶೇಕಡ 60ರಷ್ಟು ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹೊಸ ಆದೇಶದ ಅನ್ವಯ, ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಕೌಶಲರಹಿತ ಕೆಲಸಗಾರನಿಗೆ (Unskilled worker) ಇನ್ನುಮುಂದೆ ಪ್ರತಿ ತಿಂಗಳು ಕನಿಷ್ಠ 23,376 ರೂ. ವೇತನ ಪಾವತಿಸುವುದು ಕಡ್ಡಾಯವಾಗಿದೆ.
ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ (1991ರ ರೆಪ್ಟಾಕೋಸ್ ಬ್ರೆಟ್ ಪ್ರಕರಣ) ಆಧಾರದ ಮೇಲೆ ಕಾರ್ಮಿಕರ ಕುಟುಂಬದ ಜೀವನ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ ಈ ಮಹತ್ವದ ಪರಿಷ್ಕರಣೆ ಮಾಡಲಾಗಿದೆ. 2016-2017ರ ಬಳಿಕ, ಅಂದರೆ ಸುಮಾರು ಒಂದು ದಶಕದ ನಂತರ ಕನಿಷ್ಠ ವೇತನದಲ್ಲಿ ಈ ಮಟ್ಟದ ಏರಿಕೆಯಾಗಿದೆ.
ಕನಿಷ್ಠ ವೇತನದ ನಿಖರ ಲೆಕ್ಕಾಚಾರಕ್ಕಾಗಿ ರಾಜ್ಯ ಸರ್ಕಾರವು ಭೌಗೋಳಿಕ ಪ್ರದೇಶಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದೆ:
ವಲಯ 1: ಬೃಹತ್ ಬೆಂಗಳೂರು ಪ್ರದೇಶ
ವಲಯ 2: ಇತರ ಎಲ್ಲ ಜಿಲ್ಲಾ ಕೇಂದ್ರಗಳು
ವಲಯ 3: ರಾಜ್ಯದ ಉಳಿದ ಪ್ರದೇಶಗಳು
ಹೊಸ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಕನಿಷ್ಠ ವೇತನವು 19,300 ರೂ. (ವಲಯ 3ರ ಕೌಶಲರಹಿತ ಕಾರ್ಮಿಕರಿಗೆ) ರಿಂದ ಆರಂಭವಾಗಿ 31,100 ರೂ. ರವರೆಗೆ (ವಲಯ 1ರ ಅತಿ-ಕೌಶಲ ಹೊಂದಿದ ಅಥವಾ ಅತ್ಯುನ್ನತ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ) ನಿಗದಿಯಾಗಿದೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ ಕನಿಷ್ಠ ವೇತನಕ್ಕಿಂತ ಸರಾಸರಿ ಶೇಕಡ 60ರಷ್ಟು ಹೆಚ್ಚಾಗಿದೆ. ಕಳೆದ ವರ್ಷ (ಏಪ್ರಿಲ್ 2025) ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಇದೀಗ ಬಿಡುಗಡೆಯಾಗಿರುವ ಅಂತಿಮ ಆದೇಶದಲ್ಲಿ ಎರಡು ವರ್ಷಗಳ ತುಟ್ಟಿಭತ್ಯೆಯ (1,030ರೂ.) ಮೊತ್ತವನ್ನೂ ಮೂಲ ವೇತನದಲ್ಲಿಯೇ ವಿಲೀನಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಕಾರ್ಮಿಕರ ಹಿತದೃಷ್ಟಿಯಿಂದ ಅತ್ಯಗತ್ಯ ಹೆಜ್ಜೆ
ಈ ಪರಿಷ್ಕರಣೆಯ ಕುರಿತು ಮಾಹಿತಿ ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, “ರಾಜ್ಯದ ಬೃಹತ್ ಕಾರ್ಮಿಕ ವರ್ಗಕ್ಕೆ ಈ ನಿರ್ಧಾರದಿಂದ ಬಹುದೊಡ್ಡ ರಿಲೀಫ್ ಸಿಗಲಿದೆ. ಹಳೆಯ ವೇತನ ರಚನೆಯಲ್ಲಿ ಪಿಎಫ್ ಮತ್ತು ಇಎಸ್ಐ ಕಡಿತದ ಬಳಿಕ ಕಾರ್ಮಿಕರ ಕೈಸೇರುತ್ತಿದ್ದ ಮೊತ್ತ ತೀರಾ ಕಡಿಮೆಯಿತ್ತು. ಜೊತೆಗೆ ಅವರು ಬಿಪಿಎಲ್ ಸೌಲಭ್ಯಗಳಿಂದಲೂ ವಂಚಿತರಾಗಿದ್ದರು. ಹೀಗಾಗಿ ಅವರ ಜೀವನ ನಿರ್ವಹಣೆಗೆ ಈ ಪರಿಷ್ಕರಣೆ ಅನಿವಾರ್ಯವಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
81 ವಿವಿಧ ಉದ್ಯೋಗ ವಲಯಗಳ ಸುಮಾರು ಒಂದು ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಈ ಅಧಿಸೂಚನೆ ಅನ್ವಯವಾಗಲಿದೆ. ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು (ಅಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು). ಆ ನಂತರ ವೇತನ ಹೆಚ್ಚಳ ಮಾಡಿದ ದೇಶದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.




