ಕರ್ನಾಟಕ ಲೋಕಸೇವಾ ಆಯೋಗದ (KPSC) ಗಂಭೀರ ಅಕ್ರಮ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣ ಮತ್ತು ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಕರ್ನಾಟಕ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ಅಲೋಕ್ ಕುಮಾರ್ ಮತ್ತು ಡಿಐಜಿ ದಿವ್ಯಾ ಗೋಪಿನಾಥ್ ಅವರ ನೇತೃತ್ವದ ತನಿಖಾ ತಂಡವನ್ನು ಬದಲಾಯಿಸಲು ಸುಪ್ರೀಂ ಕೋರ್ಟ್ ಈಗ ಒಪ್ಪಿಗೆ ಸೂಚಿಸಿದೆ.
ಈ ಪ್ರಕರಣದ ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿದಾರರ ಪರವಾಗಿ ಅತ್ಯಂತ ಪ್ರಭಾವಿ ವಾದ ಮಂಡಿಸಿದರು. ಹಾಲಿ SIT ಮುಖ್ಯಸ್ಥರಾಗಿರುವ ಅಲೋಕ್ ಕುಮಾರ್ ಅವರ ವಿರುದ್ಧ ಹಿಂದೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಗಂಭೀರ ಆರೋಪಗಳಿದ್ದು, ಈ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಅವರು ಸೂಕ್ತ ವ್ಯಕ್ತಿಯಲ್ಲ ಎಂದು ಸಿಬಲ್ ಪೀಠದ ಗಮನಕ್ಕೆ ತಂದರು.
ಅಲ್ಲದೆ, ಈ ಹಿಂದೆ ರಾಜ್ಯದಲ್ಲಿ ನಡೆದ ರಾಜಕೀಯ ತಲ್ಲಣಗಳ ಸಂದರ್ಭದಲ್ಲಿ ಕೇಳಿಬಂದಿದ್ದ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಅಲೋಕ್ ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದನ್ನು ಉಲ್ಲೇಖಿಸಿದ ಕಪಿಲ್ ಸಿಬಲ್, ಇಂತಹ ಸೂಕ್ಷ್ಮ, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ನಿರ್ಧರಿಸುವ KPSC ಹಗರಣದ ತನಿಖೆಯನ್ನು ಅವರ ನೇತೃತ್ವದಲ್ಲೇ ನಡೆಸಿದರೆ ಸಾರ್ವಜನಿಕರಲ್ಲಿ ತನಿಖೆಯ ಪಾರದರ್ಶಕತೆ ಬಗ್ಗೆ ಅನುಮಾನಗಳು ಉಳಿಯುತ್ತವೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಬಿಆರ್ಎಸ್ ‘ಫೋನ್ ಟ್ಯಾಪಿಂಗ್’ ಮೂಲಕ ಕೋಟಿಗಟ್ಟಲೆ ಸುಲಿಗೆ ಮಾಡಿದೆ: ತೆಲಂಗಾಣ ಸಿಎಂ ಆರೋಪ
ಕಪಿಲ್ ಸಿಬಲ್ ಅವರ ವಾದವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಪೀಠವು, ತನಿಖೆಯ ಪಾರದರ್ಶಕತೆ ಮತ್ತು ನಂಬಿಕೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ SITಯ ಪ್ರಸ್ತುತ ಮುಖ್ಯಸ್ಥರಾದ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಅವರನ್ನು ಬದಲಾಯಿಸಲು ಸಮ್ಮತಿಸಿದೆ.
ಇದರ ಜತೆಗೆ, ತನಿಖೆಯ ಗಂಭೀರತೆಯನ್ನು ಕಾಯ್ದುಕೊಳ್ಳಲು ಎಡಿಜಿಪಿ (Additional Director General of Police) ದರ್ಜೆಯ ದಕ್ಷ, ಕಳಂಕವಿಲ್ಲದ ಅಧಿಕಾರಿಯ ಹೆಸರನ್ನು ಶಿಫಾರಸು ಮಾಡುವಂತೆ ಸೂಚಿಸಲಾಗಿದೆ. ಹೊಸ ತನಿಖಾಧಿಕಾರಿಯ ನೇಮಕ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಸುಪ್ರೀಂ ಕೋರ್ಟ್ನ ಈ ನಿರ್ದೇಶನವು KPSC ಅಕ್ರಮದ ಸಂಕಷ್ಟದಲ್ಲಿದ್ದ ಹಲವು ಪ್ರಭಾವಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ನಡುಕ ಹುಟ್ಟಿಸಿದೆ. SIT ಮುಖ್ಯಸ್ಥರ ಬದಲಾವಣೆಯಿಂದಾಗಿ ತನಿಖೆಯ ವೇಗಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲು ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೊಸ ADGP ದರ್ಜೆಯ ಅಧಿಕಾರಿ ಅಧಿಕಾರ ವಹಿಸಿಕೊಂಡ ತಕ್ಷಣವೇ ತನಿಖೆಯ ಎಲ್ಲಾ ಕಡತಗಳನ್ನು ಹಸ್ತಾಂತರಿಸಲಾಗುವುದು. ಈ ಇಡೀ ಬೆಳವಣಿಗೆಯು KPSCಯಲ್ಲಿನ ಅಕ್ರಮಗಳ ವಿರುದ್ಧ ಸುದೀರ್ಘ ಹೋರಾಟ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ತನಿಖೆ ಸಂಪೂರ್ಣ ಉನ್ನತ ಮಟ್ಟದ ನಿಷ್ಪಕ್ಷಪಾತತೆಯಿಂದ ನಡೆಯಲಿದೆ ಎಂಬ ಹೊಸ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಯಂತ್ರಗಳು ಕರ್ನಾಟಕಕ್ಕೆ ಎಷ್ಟು ಬಂದಿವೆ ಎಂಬುದು ತನಿಖೆಯಾಗಲಿ: ಆರ್.ಅಶೋಕ್
ಏನಿದು ಫೋನ್ ಟ್ಯಾಪಿಂಗ್ ಆರೋಪ?
ಅಲೋಕ್ ಕುಮಾರ್ ಅವರ ವಿರುದ್ಧ 2019ರಲ್ಲಿ ರಾಜಕೀಯ ನಾಯಕರು, ಅವರ ಆಪ್ತರು ಮತ್ತು ಇತರೆ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಮಾಡಿ ಕಾನೂನುಬಾಹಿರವಾಗಿ ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪವಿತ್ತು. ಈ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದಾಗ, ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಅಧಿಕಾರಾವಧಿಯಲ್ಲಿ ಈ ಕದ್ದಾಲಿಕೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರ ಅಧಿಕೃತ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಿದ್ದರು. ಫೋನ್ ಸಂಭಾಷಣೆಗಳ ರೆಕಾರ್ಡಿಂಗ್ಗಳನ್ನು ಲ್ಯಾಪ್ಟಾಪ್ ಮತ್ತು ಪೆನ್ ಡ್ರೈವ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಲಾಗಿದೆ ಎನ್ನಲಾದ ಅಂಶಗಳು ಸಿಬಿಐ ತನಿಖೆಯಲ್ಲಿ ಮುನ್ನೆಲೆಗೆ ಬಂದಿದ್ದವು. ಇದೇ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರ ಹೆಸರಿನ ಸುತ್ತ ವಿವಾದದ ಕಳಂಕ ಅಂಟಿಕೊಂಡಿತ್ತು.




