ಕೋಳಿ ಸಾಕಾಣಿಕೆಯ ಕನಿಷ್ಠ ದರವಾಗಿ ಕೆ.ಜಿ.ಗೆ 10 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಮಧ್ಯಂತರ ಆದೇಶ ಹೊರಡಿಸಿದೆ. ಮಧ್ಯಂತರ ದರವಾಗಿ 10 ರೂ. ನಿಗದಿ ಪಡಿಸಲು ಪಶುಸಂಗೋಪನಾ ಇಲಾಖೆಯ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಕಳೆದ ಎಂಟು ತಿಂಗಳಿಂದ ‘ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ’ದ ನೇತೃತ್ವದಲ್ಲಿ ಕೋಳಿ ಸಾಕಾಣಿಕೆ ರೈತರು ಕನಿಷ್ಠ ದರವಾಗಿ 20 ರೂ. ನಿಗದಿ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರು. ಅವರ ಹೋರಾಟಕ್ಕೆ ಜಯ ಸಂದಿದೆ.
ಸರ್ಕಾರದ ಆದೇಶಕ್ಕೆ ಸಂಘದ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. “ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಸಾಕಾಣಿಕೆ ವೆಚ್ಚವು ಪ್ರಮುಖ ಸವಾಲಾಗಿತ್ತು. ಆದ್ದರಿಂದ, ‘ರೈತರಿಗೆ ಕಂಪನಿಗಳಿಂದ ಸಾಕಾಣಿಕ ವೆಚ್ಚವನ್ನು ಭರಿಸಲು, ‘ಕನಿಷ್ಠ ಸಾಕಾಣಿಕ ವೆಚ್ಚ’ವಾಗಿ 20 ರೂ.ಗೆ ನಿಗದಿ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದೆವು. ಜೊತೆಗೆ, ಕೋಳಿ ಸಾಕಾಣಿಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಸಹಾಯಧನ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ್ದೆವು. ವಿಧಾನಸಭೆ ಅಧಿವೇಶನದಲ್ಲಿ ಕೆಜಿಎಫ್ ಶಾಸಕರು ಡಾ. ರೂಪಕಲಾ ಶಶಿಧರ್ ಕೂಡ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಅಂತಿಮವಾಗಿ, ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ” ಎಂದು ಹೇಳಿದ್ದಾರೆ.
“ಕೋಳಿ ಸಾಕಾಣಿಕ ರೈತರಿಗೆ ಆಗುತ್ತಿರುವ ನಷ್ಟವನ್ನು ಪರಿಗಣಿಸಿ ಮತ್ತು ಆರ್ಥಿಕ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕ್ರಮವಾಗಿ ಸರ್ಕಾರವು ಮಧ್ಯಂತರ ಆದೇಶ ಹೊರಡಿಸಿದೆ. ಕನಿಷ್ಠ ಸಾಕಾಣಿಕ ವೆಚ್ಚ 10 ರೂ. ನಿಗದಿ ಮಾಡಿ ಸರ್ಕಾರ ಆದೇಶಿದೆ” ಎಂದು ತಿಳಿಸಿದ್ದಾರೆ.
“ಸರ್ಕಾರವು ಶೀಘ್ರವೇ, ವೈಜ್ಞಾನಿಕ ರೀತಿಯಲ್ಲಿ ಸ್ವಾಮಿನಾಥನ್ ಆಯೋಗದ ಪ್ರಕಾರ c+2 50% ಲಾಭಾಂಶ ಸೇರಿಸಿ ಬೆಲೆ ನಿಗದಿ ಮಾಡಬೇಕು. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು” ಎಂದು ಸಂಘದ ಗೌರವಾಧ್ಯಕ್ಷ ಯಶವಂತ ಟಿ, ರಾಜ್ಯಾಧ್ಯಕ್ಷ ವೆಂಕಟರೆಡ್ಡಿ, ರಾಜ್ಯ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀದರ್ ರೆಡ್ಡಿ ಆಗ್ರಹಿಸಿದ್ದಾರೆ.



