ಮಾರ್ಚ್ 28ರಿಂದ ಆರಂಭವಾಗಲಿರುವ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ತಂಡದ ‘ಅಧಿಕೃತ ಡೈರಿ ಪಾಲುದಾರ’ನಾಗಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ‘ನಂದಿನಿ’ ಬ್ರ್ಯಾಂಡ್ ಒಪ್ಪಂದ ಮಾಡಿಕೊಂಡಿದೆ ಎಂದು ಒಕ್ಕೂಟವು ತಿಳಿಸಿದೆ.
ರಾಜ್ಯದ ಹೆಮ್ಮೆಯ ಹಾಗೂ ದೇಶದ ಎರಡನೇ ಅತಿದೊಡ್ಡ ಡೈರಿ ಸಹಕಾರ ಸಂಸ್ಥೆಯಾಗಿರುವ ಕೆಎಂಎಫ್, ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡದೊಂದಿಗೆ ಕೈಜೋಡಿಸಿದೆ. “ಕ್ರೀಡೆಗೆ ನಮ್ಮ ನಿರಂತರ ಬೆಂಬಲವನ್ನು ಈ ಪಾಲುದಾರಿಕೆ ಮತ್ತೊಮ್ಮೆ ದೃಢಪಡಿಸಿದೆ” ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಒಪ್ಪಂದದ ಕುರಿತು ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, “ಕರ್ನಾಟಕದಲ್ಲಿ ಬೇರುಬಿಟ್ಟಿರುವ ಎರಡು ಶ್ರೇಷ್ಠ ರಾಷ್ಟ್ರೀಯ ಬ್ರ್ಯಾಂಡ್‌ಗಳ ಸಮಾಗಮ ಇದಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿಯ ಉತ್ಸಾಹಿ ಅಭಿಮಾನಿಗಳೊಂದಿಗೆ ಬೆರೆಯಲು ನಾವು ಕಾತುರರಾಗಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದ ಭಾಗವಾಗಿ ನಂದಿನಿ ಬ್ರ್ಯಾಂಡ್ ಟೂರ್ನಿಯುದ್ದಕ್ಕೂ ಹಲವು ಪ್ರಚಾರ ಹಾಗೂ ಉತ್ತೇಜನಾ ಕಾರ್ಯಕ್ರಮಗಳನ್ನು ನಡೆಸಲಿದೆ.
ಇದನ್ನು ಓದಿದ್ದೀರಾ? ‘ಮುಂದಿನ ದಿನಗಳಲ್ಲಿ ಸವಾಲು ಇನ್ನಷ್ಟು ಕಠಿಣವಾಗಲಿದೆ’: ವಿರಾಟ್ ಕೊಹ್ಲಿ ಸಂದೇಶ ಯಾರಿಗೆ?
ಆರ್‌ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ರಾಜೇಶ್ ಮೆನನ್ ಪ್ರತಿಕ್ರಿಯಿಸಿ, “ಈ ಋತುವಿನಲ್ಲಿ ಕೆಎಂಎಫ್ (ನಂದಿನಿ) ಜೊತೆ ಪಾಲುದಾರಿಕೆ ಹೊಂದಲು ನಮಗೆ ಅತೀವ ಸಂತೋಷವಾಗಿದೆ. ಶ್ರೇಷ್ಠತೆ, ವಿಶ್ವಾಸ ಮತ್ತು ಸಮುದಾಯದೊಂದಿಗಿನ ಆಳವಾದ ಸಂಪರ್ಕದ ಹಂಚಿಕೆಯ ಮೌಲ್ಯಗಳ ಮೇಲೆ ಈ ಬಾಂಧವ್ಯ ನಿರ್ಮಾಣವಾಗಿದೆ. ರಾಜ್ಯದಾದ್ಯಂತ ಮನೆಮಾತಾಗಿರುವ ನಂದಿನಿಯ ಇತಿಹಾಸವು ಈ ಒಪ್ಪಂದವನ್ನು ಮತ್ತಷ್ಟು ವಿಶೇಷವಾಗಿಸಿದೆ. ಅಭಿಮಾನಿಗಳಿಗಾಗಿ ಟೂರ್ನಿಯುದ್ದಕ್ಕೂ ಅರ್ಥಪೂರ್ಣ ಕ್ಷಣಗಳನ್ನು ಸೃಷ್ಟಿಸಲು ನಾವು ಎದುರುನೋಡುತ್ತಿದ್ದೇವೆ” ಎಂದರು.
ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
ಕಳೆದ ಐಪಿಎಲ್ ಋತುವಿನ ಚಾಂಪಿಯನ್ ತಂಡವಾದ ಆರ್‌ಸಿಬಿಗೆ ಕರ್ನಾಟಕದ ಹೆಮ್ಮೆಯ ‘ನಂದಿನಿ’ ಬ್ರ್ಯಾಂಡ್ ಅಧಿಕೃತ ಡೈರಿ ಪಾಲುದಾರನಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.




