ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡ್ಯ ಜಿಲ್ಲೆಯ 14 ಮಂದಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಹೆಚ್ಚಿನ ರಾಜಕೀಯ ಅವಕಾಶ ಕಲ್ಪಿಸಲಾಗಿದೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಕೈಬಿಡುವುದಿಲ್ಲ ಎಂಬ ಭರವಸೆಯನ್ನು ಈ ನೇಮಕಾತಿಗಳು ಮೂಡಿಸಿವೆ. ಆದರೂ, ಪಟ್ಟಿಯಲ್ಲಿರುವ ಕೆಲವು ಹೆಸರುಗಳು ಇದೀಗ ಸ್ವಪಕ್ಷೀಯರಲ್ಲೇ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ.
ಮಂಡ್ಯ ಜಿಲ್ಲೆಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಮದ್ದೂರು ತಾಲೂಕು ಮೆಲ್ಲಹಳ್ಳಿಯ ಮಹೇಶ್ ಹಾಗೂ ಮಂಡ್ಯ ತಾಲೂಕು ಹಾಡ್ಯ ಗ್ರಾಮದ ಸಂದೀಪ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಮಂಡ್ಯ ತಾಲೂಕು ಮಾಯಪ್ಪನಹಳ್ಳಿಯ ಡಿ. ರಮೇಶ್, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಡ್ಯ ತಾಲೂಕು ಚಿಕ್ಕಬಳ್ಳಿ ಗ್ರಾಮದ ಎಚ್. ಶಾಂಭವಿ, ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಿ.ಎಸ್. ಅಂಜನಾ ಶ್ರೀಕಾಂತ್, ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಮದ್ದೂರು ತಾಲೂಕು ಅಣ್ಣೂರಿನ ಸಿದ್ದಪ್ಪ ಹಾಗೂ ಹಟ್ಟಿ ಚಿನ್ನದ ಗಣಿ ಪ್ರಾಧಿಕಾರಕ್ಕೆ ಸೋಮನಹಳ್ಳಿಯ ಟಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಕಾವೇರಿ ಕೊಳ್ಳದ ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕಾಡಾ) ಮಳವಳ್ಳಿ ತಾಲೂಕು ಕುಂದೂರು ಗ್ರಾಮದ ಕೆ.ಎಸ್. ಪ್ರಕಾಶ್, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಮಳವಳ್ಳಿ ತಾಲೂಕು ಲಕ್ಕಿದಾಸಿನಕೆರೆ ಗ್ರಾಮದ ಶಿವರಾಜು, ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಮಳವಳ್ಳಿ ತಾಲೂಕು ಕಲ್ಕುಣಿ ಗ್ರಾಮದ ಕೆ.ಐ. ದೇವರಾಜು ಹಾಗೂ ಮಂಡ್ಯ ತಾಲೂಕು ಪಣಕನಹಳ್ಳಿ ಗ್ರಾಮದ ಸಿದ್ದೇಗೌಡ ಅವರನ್ನು ನೇಮಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ನಿಗಮಕ್ಕೆ ಕೆ.ಆರ್. ಪೇಟೆ ಟೌನ್ ನಿವಾಸಿ ರವೀಂದ್ರಬಾಬು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಗೆ ಕೆ.ಆರ್. ಪೇಟೆ ತಾಲೂಕು ದೊಡ್ಡಗಾಡಿಗನಹಳ್ಳಿ ಗ್ರಾಮದ ರಂಗರಾಜು ಮತ್ತು ಬೆಂಗಳೂರಿನ ಜವಾಹರ್ ಬಾಲಭವನ ಸೊಸೈಟಿಗೆ ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ನಿವಾಸಿ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್. ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಆಯ್ಕೆಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ. ಕಾಂಗ್ರೆಸ್ ಪಕ್ಷ ನಿಷ್ಟಾವಂತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಎಂದಿಗೂ ಕೈಬಿಡಲ್ಲ, ಅವರಿಗೆ ನಿಗಮ-ಮಂಡಳಿಗಳಲ್ಲಿ ಅಧಿಕಾರ ಕೊಟ್ಟೇ ಕೊಡುತ್ತದೆ ಎಂಬ ನಂಬಿಕೆಯನ್ನು ಉಳಿಸಿಕೊಂಡಿದೆ.
ಅಂತೆಯೇ, ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿದ ನಿಷ್ಠಾವಂತರಿಗೆ ಅಧಿಕಾರ ನೀಡಿದರೆ ಅವರು ಮತ್ತಷ್ಟು ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದು ರಾಜ್ಯ ನಾಯಕರ ಉದ್ದೇಶವಾಗಿತ್ತು.
ಆದರೂ, ಕೆಲವೆಡೆ ನಡೆದಿರುವ ನೇಮಕಗಳು ಪಕ್ಷದೊಳಗೆ ಅಸಮಾಧಾನಕ್ಕೂ ಕಾರಣವಾಗಿವೆ. ರಾಜ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಂಘ ಪರಿವಾರದ ಒಲವುಳ್ಳವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪ ರಾಜ್ಯಾದ್ಯಂತ ಕೇಳಿಬರುತ್ತಿದೆ. ಅದೇ ರೀತಿ, ಮದ್ದೂರಿನ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಟಿ. ಶ್ರೀನಿವಾಸ್ (ಸಿಪಾಯಿ ಶ್ರೀನಿವಾಸ್) ಎಂಬ ಆರ್‌ಎಸ್‌ಎಸ್ ಮತ್ತು ಮೋದಿ ಅಭಿಮಾನಿಗೆ ಹಟ್ಟಿ ಚಿನ್ನದ ಗಣಿ ನಿರ್ದೇಶಕ ಸ್ಥಾನ ನೀಡಿರುವುದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಲೇಖನ ಓದಿದ್ದೀರಾ?: ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!
ಕಳೆದ ವರ್ಷ (2025) ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಹಾಕಿದ್ದ ಫೇಸ್‌ಬುಕ್ ಪೋಸ್ಟ್ ಅವರ ಸೈದ್ಧಾಂತಿಕ ಒಲವನ್ನು ಸ್ಪಷ್ಟಪಡಿಸುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ. “ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಗೆ 100 ವರ್ಷದ ಸಂಭ್ರಮ. ಪಥಸಂಚಲನದಲ್ಲಿ ಭಾಗಿಯಾಗುವ ಮುಂಚೆ, ಮುಂದಿನ ದಿನಗಳಲ್ಲಿ ನಮ್ಮ ಭಾಗದ ಎಲ್ಲ ದೇಶಪ್ರೇಮಿ, ರಾಷ್ಟ್ರಪ್ರೇಮಿ ಯುವಕ ಮಿತ್ರರು ದೇಶ ಸೇವೆ ಮಾಡುವಂತಹ ಈ ಸಂಘಟನೆಯ ಜೊತೆ ಸೇರಿಕೊಳ್ಳುತ್ತಾರೆ ಎಂದು ನಂಬಿರುತ್ತೇನೆ, ಧನ್ಯವಾದಗಳು” ಎಂದು ಶ್ರೀನಿವಾಸ್ ಬರೆದುಕೊಂಡಿದ್ದರು.

ಶಾಸಕ ಕದಲೂರು ಉದಯ್ ಅವರ ಜೊತೆಗಿದ್ದಾಗಲೇ ಶ್ರೀನಿವಾಸ್ ಈ ಪೋಸ್ಟ್ ಹಾಕಿದ್ದರು. ಅಷ್ಟೇ ಅಲ್ಲದೆ, ಅವರು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ ನಿಂತಿರುವ ಫೋಟೋ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಬಾರಿ ಮಂಡ್ಯಕ್ಕೆ ಬಂದಾಗ ಅವರಿಗೆ ಶುಭ ಕೋರಿದ್ದ ಫೋಟೋಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿ ನಿರ್ದೇಶಕ ಸ್ಥಾನ ಸಿಕ್ಕ ಕೂಡಲೇ ಶ್ರೀನಿವಾಸ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿದ್ದ ಹಲವು ಹಳೆಯ ಬರಹಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ದೂರಿದ್ದಾರೆ.

“ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ನೀಡದೆ ಆರ್‌ಎಸ್‌ಎಸ್ ಪರ ಒಲವುಳ್ಳವರಿಗೆ ಹುದ್ದೆ ನೀಡಿರುವುದು ಎಷ್ಟು ಸರಿ? ಹೀಗಾದರೆ ನಾವು ಎಲ್ಲಿಗೆ ಹೋಗಬೇಕು? ಕಾಂಗ್ರೆಸ್‌ನಲ್ಲಿರುವ ನೂರಾರು ನಿಷ್ಠಾವಂತ ಕಾರ್ಯಕರ್ತರು ಶಾಸಕ ಕದಲೂರು ಉದಯ್ ಅವರ ಕಣ್ಣಿಗೆ ಬೀಳಲಿಲ್ಲವೇ?” ಎಂದು ಸ್ಥಳೀಯ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಆರ್‌ಎಸ್‌ಎಸ್ ಸಂಘಟನೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶ ಮಾಡುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರ ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ” ಎಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿರುವ ಸಂದರ್ಭದಲ್ಲಿ, ಪಕ್ಷದ ವರಿಷ್ಠರು ಮತ್ತು ಶಾಸಕರು ಸಂಘ ಪರಿವಾರದ ಹಿನ್ನೆಲೆಯುಳ್ಳವರಿಗೆ ನಿಗಮ-ಮಂಡಳಿ ಹುದ್ದೆ ನೀಡಿರುವುದು ಖಂಡನೀಯ ಎಂಬ ಮಾತುಗಳು ಕೇಳಿಬಂದಿವೆ.
ರಾಜ್ಯದ ಹಲವೆಡೆ ಇದೇ ರೀತಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪರ ಒಲವು ಹೊಂದಿರುವವರನ್ನು ನಿಗಮ-ಮಂಡಳಿಗಳಿಗೆ ಆಯ್ಕೆ ಮಾಡಿರುವುದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, “ಆರ್‌ಎಸ್‌ಎಸ್ ಬಗ್ಗೆ ಒಲವು ಮತ್ತು ನಿಲುವು ಹೊಂದಿರುವವರಿಗೆ ಸ್ವಾಭಿಮಾನ ಇದ್ದರೆ, ಈ ಕೂಡಲೇ ತಾವು ಆಯ್ಕೆಯಾಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆಯಬೇಕು” ಎಂದು ಖಡಕ್ ಸೂಚನೆ ನೀಡಿದ್ದಾರೆ.
ಈ ಎಚ್ಚರಿಕೆಯ ಬೆನ್ನಲ್ಲೇ, ಸಿಪಾಯಿ ಶ್ರೀನಿವಾಸ್ ಅವರಂತಹವರು ತಾವಾಗಿಯೇ ಹುದ್ದೆ ಬಿಟ್ಟು ಹೋಗುತ್ತಾರೋ ಅಥವಾ ರಾಜ್ಯಾಧ್ಯಕ್ಷರೇ ಅವರನ್ನು ವಜಾಗೊಳಿಸಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.


