2002ರ ಗುಜರಾತ್ ಗಲಭೆಯ ವೇಳೆ ನಡೆದಿದ್ದ ಭೀಕರ ‘ಬಿಲ್ಕಿಸ್ ಬಾನೊ’ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ 14 ಕುಟುಂಬಸ್ಥರ ಹತ್ಯೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ನೀಡಿದೆ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳ ಪೈಕಿ ಇಬ್ಬರ ಶಿಕ್ಷೆಯನ್ನು ಪ್ರಸ್ತುತ ಅಮಾನತುಗೊಳಿಸಿರುವ ಸರ್ವೋಚ್ಚ ನ್ಯಾಯಾಲಯ, ಅವರಿಬ್ಬರಿಗೂ ಜಾಮೀನು ಮಂಜೂರು ಮಾಡಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
”ಅಪರಾಧಿಗಳು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಜೈಲುವಾಸ ಅನುಭವಿಸಿದ್ದಾರೆ. ಅಲ್ಲದೆ, ಇವರಲ್ಲಿ ಒಬ್ಬರು ತೀವ್ರ ಸ್ವರೂಪದ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಮೇಲ್ಮನವಿಯಲ್ಲಿ ಇನ್ನೂ ವಾಸ್ತವಿಕ ಮತ್ತು ಕಾನೂನಾತ್ಮಕ ಅಂಶಗಳ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕಿರುವುದರಿಂದ, ಸದ್ಯಕ್ಕೆ ಇವರಿಗೆ ಜಾಮೀನು ನೀಡಲಾಗುತ್ತಿದೆ” ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
2002ರ ಫೆಬ್ರವರಿಯಲ್ಲಿ ನಡೆದ ಗೋಧ್ರಾ ರೈಲು ದಹನ ಘಟನೆಯ ನಂತರ ಗುಜರಾತ್‌ನಾದ್ಯಂತ ಭೀಕರ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಈ ವೇಳೆ, ಮಾರ್ಚ್ 3ರಂದು ದಾಹೋದ್ ಜಿಲ್ಲೆಯ ರಂಧಿಕ್‌ಪುರ ಗ್ರಾಮದಲ್ಲಿ 21 ವರ್ಷದ, ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ಈ 11 ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ, ಬಿಲ್ಕಿಸ್ ಕಣ್ಣೆದುರಲ್ಲೇ ಆಕೆಯ ಮೂರು ವರ್ಷದ ಪುತ್ರಿ ಸೇರಿ ಕುಟುಂಬದ 14 ಜನರನ್ನು ಅತ್ಯಂತ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಘೋರ ಅಪರಾಧದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ನ್ಯಾಯಸಮ್ಮತ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು. 2008ರಲ್ಲಿ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು 11 ಆರೋಪಿಗಳಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿತ್ತು.
2022ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್ ಸರ್ಕಾರವು ತನ್ನ ಹಳೆಯ ಕ್ಷಮಾದಾನ ನೀತಿಯನ್ನು ಬಳಸಿ, ‘ಸನ್ನಡತೆ’ಯ ಆಧಾರದ ಮೇಲೆ ಈ ಎಲ್ಲಾ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಜೈಲಿನಿಂದ ಹೊರಬಂದ ಅಪರಾಧಿಗಳಿಗೆ ವಿಎಚ್‌ಪಿ ಕಚೇರಿಯಲ್ಲಿ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಸನ್ಮಾನಿಸಿದ್ದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಬಿಲ್ಕಿಸ್ ಬಾನೊ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ಪೀಠವು, 2024ರ ಜನವರಿಯಲ್ಲಿ ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ‘ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದರಿಂದ, ಅಪರಾಧಿಗಳಿಗೆ ಕ್ಷಮಾದಾನ ನೀಡುವ ಅಧಿಕಾರ ಆ ರಾಜ್ಯದ ಸರ್ಕಾರಕ್ಕಿದೆ ಹೊರತು ಗುಜರಾತ್ ಸರ್ಕಾರಕ್ಕಲ್ಲ’ ಎಂದು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಬಿಡುಗಡೆಯಾಗಿದ್ದ ಎಲ್ಲಾ 11 ಅಪರಾಧಿಗಳು ಎರಡು ವಾರದೊಳಗೆ ಮತ್ತೆ ಜೈಲಿಗೆ ಶರಣಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಅದರಂತೆ ಅವರೆಲ್ಲರೂ ಮತ್ತೆ ಜೈಲು ಸೇರಿದ್ದರು.
2024ರ ಜನವರಿಯ ಸುಪ್ರೀಂ ಆದೇಶದ ನಂತರ ಮತ್ತೆ ಜೈಲು ಪಾಲಾಗಿದ್ದ ಅಪರಾಧಿಗಳ ಪೈಕಿ ಇಬ್ಬರು, ತಮ್ಮ ಸುದೀರ್ಘ ಜೈಲುವಾಸ ಮತ್ತು ಅನಾರೋಗ್ಯವನ್ನು ಮುಂದಿಟ್ಟುಕೊಂಡು ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಿದ್ದರು. ವಾಸ್ತವಿಕವಾಗಿ ಅವರು 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದಿದ್ದಾರೆ ಮತ್ತು ಓರ್ವ ಅಪರಾಧಿಯ ಅಂಗವೈಕಲ್ಯದ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಲಯ, ಅಂತಿಮ ತೀರ್ಪು ಬರುವವರೆಗೆ ಮಾತ್ರ ಈ ಇಬ್ಬರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ. ಉಳಿದ 9 ಅಪರಾಧಿಗಳು ಜೈಲಿನಲ್ಲೇ ಮುಂದುವರಿಯಲಿದ್ದಾರೆ.



