ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ, ಬಾಪುಗೌಡ ಮೇಟಿ ಉರ್ಫ್ ಕನ್ಹೆರಿ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಂಗಾವತಿಯಲ್ಲಿ ನಡೆದ ಬಸವಶರಣ ಉತ್ಸವದಲ್ಲಿ ಮಾತನಾಡಿದ ಕಾಡಸಿದ್ದೇಶ್ವರ ಸ್ವಾಮೀಜಿ, ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಒಪ್ಪಿಕೊಂಡಿದ್ದರು ಎಂಬರ್ಥದ ಹೇಳಿಕೆ ನೀಡಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇದು ಇತಿಹಾಸದ ಸತ್ಯಕ್ಕೆ ವಿರುದ್ಧವಾದ ಹೇಳಿಕೆ ಎಂದು ಕಿಡಿಕಾರಿದ್ದಾರೆ.
ಮನುಸ್ಮೃತಿಯನ್ನು ಸುಟ್ಟಿದ್ದೇ ಜಾತಿ ವ್ಯವಸ್ಥೆಯ ವಿರುದ್ಧದ ಬಂಡಾಯ!
ಮನುಸ್ಮೃತಿಯು ಜಾತಿ ವ್ಯವಸ್ಥೆ, ವರ್ಣಾಶ್ರಮ ಪದ್ಧತಿ ಮತ್ತು ಮಹಿಳಾ ವಿರೋಧಿ ಅಸಮಾನತೆಯನ್ನು ಪ್ರತಿಪಾದಿಸುವ ಗ್ರಂಥವಾಗಿದೆ. ಇದೇ ಕಾರಣಕ್ಕೆ 1927ರ ಡಿಸೆಂಬರ್ 25ರಂದು ಡಾ. ಅಂಬೇಡ್ಕರ್ ಅವರು ಮಹಾಡ್‌ನಲ್ಲಿ ಸಾರ್ವಜನಿಕವಾಗಿ ಮನುಸ್ಮೃತಿಯನ್ನು ದಹಿಸಿ, ಜಾತಿ ಶೋಷಣೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಐತಿಹಾಸಿಕ ಪ್ರತಿರೋಧ ದಾಖಲಿಸಿದ್ದರು.
ಇಂದಿಗೂ ಡಿಸೆಂಬರ್ 25ನ್ನು ಮನುಸ್ಮೃತಿ ದಹನ ದಿನವಾಗಿ ಆಚರಿಸಲಾಗುತ್ತಿದೆ ಎಂದು ಕಂಬಾಗಿ ವಿವರಿಸಿದ್ದಾರೆ.ಮನುಸ್ಮೃತಿಯಲ್ಲಿರುವ ಮಹಿಳೆಯರು ಮತ್ತು ಕೆಳಜಾತಿಯವರ ಕುರಿತ ಅವಮಾನಕರ ನಿಲುವುಗಳೇ ಅಂಬೇಡ್ಕರ್ ಅವರ ವಿರೋಧಕ್ಕೆ ಪ್ರಮುಖ ಕಾರಣ. ಇಂತಹ ಗ್ರಂಥವನ್ನು ಸಂವಿಧಾನಕ್ಕೆ ಹೋಲಿಸುವುದು ಮತ್ತು ಅಂಬೇಡ್ಕರ್ ಅವರ ನಿಲುವನ್ನು ತಿರುಚುವುದು ಖಂಡನೀಯ ಎಂದು ಹೇಳಿದ್ದಾರೆ.
ಬಸವಣ್ಣನ ಹೆಸರಿನಲ್ಲಿ ಸ್ವಯಂ ವೈಭವೀಕರಣದ
ಆರೋಪಬಸವಣ್ಣನವರ ಸಮಾನತೆಯ ಆಶಯಗಳನ್ನು ಎತ್ತಿಹಿಡಿಯಬೇಕಾದವರು ಅವರ ಹೆಸರನ್ನು ಬಳಸಿಕೊಂಡು ಸ್ವಯಂ ವೈಭವೀಕರಣ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ತಾನೇ ಬಸವಣ್ಣ ಎಂಬಂತೆ ಬಿಂಬಿಸಿಕೊಳ್ಳುವ ಮೂಲಕ ಬಸವಣ್ಣನವರ ವಿಚಾರಧಾರೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಸಂಜು ಕಂಬಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನ, ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಧಾರೆಗಳ ಕುರಿತು ಸುಳ್ಳು ಪ್ರಚಾರ ನಡೆಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಇಂತಹ ಹೇಳಿಕೆಗಳ ವಿರುದ್ಧ ಸರ್ಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಕ್ರಮ ಕೈಗೊಂಡು, ಕಾನೂನುಬದ್ಧವಾಗಿ ಬಾಪುಗೌಡ ಮೇಟಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



