ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಕಾಂಗ್ರೆಸ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಕೇವಲ ಸುಪ್ರೀಂ ಕೋರ್ಟ್‌ಗೆ ಮಾತ್ರ ನೇರವಾಗಿ ವರದಿ ಸಲ್ಲಿಸುವ ಹೊಸ ಮತ್ತು ಸ್ವತಂತ್ರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಕರಣದಲ್ಲಿ ಇದುವರೆಗೆ ರಚಿಸಲಾದ ಎರಡು ಎಸ್‌ಐಟಿಗಳ ನಡುವಿನ ವೈರುಧ್ಯಗಳು, ತನಿಖಾ ವರದಿಗಳನ್ನು ನಿರ್ವಹಿಸಿದ ರೀತಿ ಮತ್ತು ಚಾರ್ಜ್‌ಶೀಟ್‌ನ ಸೀಮಿತ ವ್ಯಾಪ್ತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!
ಸೆಪ್ಟೆಂಬರ್ 23ರಂದು ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಕೇವಲ ಎಣಿಕೆ ಕೇಂದ್ರದ ಎಂಟು ನೌಕರರನ್ನು ಮಾತ್ರ ಗುರಿಯಾಗಿಸಲಾಗಿದೆ. ಆದರೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯನಿರ್ವಹಣೆ ಮತ್ತು ಅದರ ಪದಾಧಿಕಾರಿಗಳ ಪಾತ್ರದ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ರಮೇಶ್ ದೂರಿದ್ದಾರೆ.
ಜುಲೈ 6ರಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ನೀಡಲಾದ ಕ್ಲೀನ್ ಚಿಟ್ ಬಗ್ಗೆಯೂ ಕಾಂಗ್ರೆಸ್ ಪ್ರಶ್ನಿಸಿದೆ. ಮೊದಲ ಎಸ್‌ಐಟಿ ಯಾವುದೇ ತನಿಖೆ ನಡೆಸದಿದ್ದರೆ, ಯಾವ ಮಧ್ಯಂತರ ವರದಿಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ರಮೇಶ್ ಕೇಳಿದ್ದಾರೆ. ಅಲ್ಲದೆ, ಎರಡೂ ಎಸ್‌ಐಟಿಗಳಲ್ಲಿ ಐಜಿಪಿ ಕಿರಣ್ ಎಸ್. ಅವರ ಪಾತ್ರದ ಬಗ್ಗೆಯೂ ಸ್ಪಷ್ಟನೆ ಕೋರಿದ್ದಾರೆ.
ರಾಮ ಮಂದಿರವು ಕೋಟ್ಯಂತರ ದೇಶವಾಸಿಗಳ ನಂಬಿಕೆಯ ಪ್ರತೀಕವೇ ಹೊರತು ಯಾವುದೇ ಟ್ರಸ್ಟ್ ಅಥವಾ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಶ್ರೀರಾಮನ ಹೆಸರಿನಲ್ಲಿ ನೀಡಲಾದ ಪ್ರತಿಯೊಂದು ರೂಪಾಯಿಗೂ ಲೆಕ್ಕ ನೀಡಲೇಬೇಕು. ಧಾರ್ಮಿಕ ದೇಣಿಗೆ ಕಳ್ಳತನದಂತಹ ಗಂಭೀರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ದೇಶಕ್ಕೆ ತೀವ್ರ ಕಳವಳ ತಂದಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಮೊದಲ ಎಸ್‌ಐಟಿ ರಚನೆಯ ಅಧಿಸೂಚನೆ ಮತ್ತು ಅದರ ತನಿಖಾ ನಿಯಮಗಳನ್ನು ಸಾರ್ವಜನಿಕಗೊಳಿಸಬೇಕು. ಮೊದಲ ಎಸ್‌ಐಟಿಯ ಮಧ್ಯಂತರ ಮತ್ತು ಅಂತಿಮ ವರದಿಗಳನ್ನು ಬಹಿರಂಗಪಡಿಸಬೇಕು. ಆರೋಪ ಎದುರಿಸುತ್ತಿರುವ ಟ್ರಸ್ಟ್‌ಗೇ ಯಾವ ಅಧಿಕಾರದ ಅಡಿಯಲ್ಲಿ ತನಿಖಾ ವರದಿಗಳನ್ನು ಹಸ್ತಾಂತರಿಸಲಾಯಿತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಮಂದಿರದ ಆವರಣದಲ್ಲಿ ದೇಣಿಗೆ ಎಣಿಕೆಯ ವೇಳೆ 105 ಬಾರಿ ಅನಧಿಕೃತವಾಗಿ ನಗದು ತೆಗೆದಿರುವುದು ಮತ್ತು ಬಚ್ಚಿಟ್ಟಿರುವುದನ್ನು ಎಸ್‌ಐಟಿ ಪತ್ತೆಹಚ್ಚಿತ್ತು. ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ಸುಮಾರು 79.85 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದ ತನಿಖಾ ತಂಡ, 70,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ, ಈ ಪ್ರಕರಣದ ಹಿಂದಿರುವ ದೊಡ್ಡ ಮಟ್ಟದ ಪಿತೂರಿಯನ್ನು ಮರೆಮಾಚಲಾಗುತ್ತಿದೆ ಮತ್ತು ಟ್ರಸ್ಟ್ ಪದಾಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ ಎಂಬುದು ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದೆ.



