ಪ್ರತಿಯೊಂದು ಬೇಡಿಕೆಯನ್ನೂ ಹೋರಾಟದ ಮೂಲಕವೇ ಪಡೆಯಿರಿ ಎನ್ನುವ ಸರ್ಕಾರಗಳ ಧೋರಣೆಯು ಸರಿಯಲ್ಲ. ಸರ್ಕಾರದ ಭರವಸೆಯು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆದಿದ್ದರೆ ಈಗ 'ಆಶಾ' ಕಾರ್ಯಕರ್ತೆಯರು ಹೋರಾಟ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ. ಈ ಪ್ರತಿಭಟನೆಗೆ ಸರ್ಕಾರವೇ ನೇರ ಹೊಣೆಯಾಗಿದೆ.
ಗೌರವ ಧನ ಹೆಚ್ಚಿಸುವುದು ಸೇರಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ (ಎನ್ಎಚ್ಎಂ) ಕಾರ್ಯ ನಿರ್ವಹಿಸುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ = Accredited Social Health Activist) ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಆರಂಭಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ‘ಆಶಾ’ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕಾದ ಅಗತ್ಯವಿದೆ. ಕೇಂದ್ರ ಮತ್ತ ರಾಜ್ಯ ಸರ್ಕಾರಗಳ ಧೋರಣೆ ಮತ್ತು ನೀತಿಯಿಂದಾಗಿ ಹತೋಟಿಗೆ ಸಿಗದ ಬೆಲೆಯೇರಿಕೆ ಸೇರಿದಂತೆ ಜೀವನ ನಿರ್ವಹಣೆಗೆ ಬೇಕಾದ ಕನಿಷ್ಠ ಹಣದ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ‘ಆಶಾ’ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವ ಧನದ ಪ್ರಮಾಣ ಏನೇನೂ ಸಾಲದು.
2005ರಲ್ಲಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಭಾಗವಾಗಿ ನಿಯೋಜಿಸಲಾದ ‘ಆಶಾ’ ಕಾರ್ಯಕರ್ತೆಯರಿಗೆ ಆರಂಭದಲ್ಲಿ ಯಾವುದೇ ನಿಶ್ಚಿತ ಗೌರವ ಧನ ನೀಡುತ್ತಿರಲಿಲ್ಲ. ‘ಗೌರವ ಸ್ವಯಂಸೇವಕರು’ ಎಂದು ಪರಿಗಣಿಸಿ ನಿರ್ದಿಷ್ಟ ಆರೋಗ್ಯ ಸೇವೆಗಳನ್ನು ಪೂರ್ಣಗೊಳಿಸಿದ ನಂತರ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. 2013-14ರಲ್ಲಿ ರಾಜ್ಯ ಸರ್ಕಾರವು ಪ್ರತಿದಿನ ಎರಡು ಗಂಟೆಗಳಂತೆ ಕೆಲಸ ಎಂದ ನಿಗದಿ ಪಡಿಸಿ ‘ಆಶಾ’ ಕಾರ್ಯಕರ್ತೆಯರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಗೌರವ ಧನ ನಿಗದಿ ಪಡಿಸಲಾಯಿತು. ನಂತರ ಈ ಮೊತ್ತವನ್ನು ರೂ 2,500ಕ್ಕೆ ಹೆಚ್ಚಿಸಲಾಯಿತು. ಕೆಲದಿನಗಳಲ್ಲೇ ರೂ 3,500 ಹೆಚ್ಚಿಸಿದ ರಾಜ್ಯ ಸರ್ಕಾರವು ಆಮೇಲೆ ನಾಲ್ಕು ಸಾವಿರ ನಿಗದಿ ಪಡಿಸಿತು. ತೀವ್ರ ಹೋರಾಟ-ಬೇಡಿಕೆಯ ನಂತರ ಈಗ ‘ಆಶಾ’ ಕಾರ್ಯಕರ್ತೆಯರು ಐದು ಸಾವಿರ ರೂಪಾಯಿ ಗೌರವ ಧನ ಪಡೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಬಾಲಕ ಜಯ್ ಶಾ ಐಸಿಸಿ ಅಧ್ಯಕ್ಷ; ಭಾರತದ ಯುವಸಮೂಹ ನಿರ್ಲಕ್ಷ್ಯ
ಈಗ ಪ್ರತಿಭಟನೆ ನಡೆಸುತ್ತಿರುವ ರಾಜ್ಯದ 40 ಸಾವಿರಕ್ಕೂ ಹೆಚ್ಚು ಜನ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಲ್ಲಿ ಗೌರವಧನ ಪ್ರಮಾಣವನ್ನು ಮಾಸಿಕ 15 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಬೇಡಿಕೆಯು ಪ್ರಮುಖವಾಗಿದೆ. ನಿತ್ಯದ ಜೀವನ ವೆಚ್ಚ ಹೆಚ್ಚಿರುವ ಈ ದಿನಗಳಲ್ಲಿ ಈ ಬೇಡಿಕೆಯು ನ್ಯಾಯೋಚಿತವೇ ಆಗಿದೆ.
ಕಳೆದ ಜನವರಿಯಲ್ಲಿ ನಡೆದ ‘ಆಶಾ’ ಕಾರ್ಯಕರ್ತೆಯರ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರವು ಗೌರವ ಧನವನ್ನು ಮಾಸಿಕ ಹತ್ತು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಭರವಸೆ ನೀಡಿತ್ತು. ಅದು ಕೇವಲ ಭರವಸೆಯಾಗಿಯೇ ಉಳಿದಿರುವುದು ಮತ್ತು ಆ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗದಿರುವುದು ಸಹಜವಾಗಿಯೇ ‘ಆಶಾ’ ಕಾರ್ಯಕರ್ತೆಯರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹೋರಾಟ – ಪ್ರತಿಭಟನೆ ಸಂದರ್ಭದಲ್ಲಿ ಅದಕ್ಕೆ ಪ್ರತಿಕ್ರಿಯಿಸಿ ನೀಡಿದ ಭರವಸೆಗಳನ್ನು ಈಡೇರಿಸಬೇಕಾದದ್ದು ಸರ್ಕಾರಗಳ ಆದ್ಯತೆಯಾಗಬೇಕು. ಪ್ರತಿಯೊಂದು ಬೇಡಿಕೆಯನ್ನೂ ಹೋರಾಟದ ಮೂಲಕವೇ ಪಡೆಯಿರಿ ಎನ್ನುವ ಸರ್ಕಾರಗಳ ಧೋರಣೆಯು ಸರಿಯಲ್ಲ. ಸರ್ಕಾರದ ಭರವಸೆಯು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆದಿದ್ದರೆ ಈಗ ‘ಆಶಾ’ ಕಾರ್ಯಕರ್ತೆಯರು ಹೋರಾಟ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ. ಈ ಪ್ರತಿಭಟನೆಗೆ ಸರ್ಕಾರವೇ ನೇರ ಹೊಣೆಯಾಗಿದೆ. ನವೆಂಬರ್ ತಿಂಗಳ ಕೊರೆವ ಚಳಿಯಲ್ಲಿ ಫ್ರೀಡಂ ಪಾರ್ಕಿನ ಬಯಲಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯನ್ನು ಹೆಚ್ಚು ಕಾಲ ಮುಂದುವರೆಸುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ತಕ್ಷಣ ಸ್ಪಂದಿಸಬೇಕು. ಹಾಗೆಯೇ ಅವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.
‘ಆಶಾ’ ಕಾರ್ಯಕರ್ತೆಯರ ಚಟುವಟಿಕೆಗಳನ್ನು ನಿರ್ವಹಿಸಲು ಸರ್ಕಾರವು ಜಾರಿಗೆ ತಂದಿರುವ ‘ಸಮಸ್ತ’ ಆಪ್ನ ಬಳಕೆಯನ್ನು ಕಡ್ಡಾಯಗೊಳಿಸಿರುವ ಕ್ರಮದ ಬಗ್ಗೆಯೂ ತಕರಾರುಗಳಿವೆ. ಈ ಆಕ್ಷೇಪಗಳ ಪೈಕಿ ಗೌರವಧನವನ್ನು ‘ಸಮಸ್ತ’ ಬಳಸಿ ನಮೂದಿಸುವ ದಾಖಲೆಗಳಿಗೆ ಅನುಗುಣವಾಗಿ ನಿರ್ಧರಿಸುವುದು ಕೂಡ ಒಂದು. ಹಲವು ಲೋಪಗಳಿರುವ ಈ ಆಪ್ನ್ನು ಸರಿಪಡಿಸಿ ಮತ್ತು ಸೂಕ್ತ ತರಬೇತಿಯ ನಂತರವೇ ಕಡ್ಡಾಯಗೊಳಿಸಬೇಕಿತ್ತು. ಹಾಗೆಯೇ ಇದಕ್ಕೆ ಅಗತ್ಯವಿರುವ ಮೊಬೈಲ್ಗಳನ್ನು ಒದಗಿಸಬೇಕಾದದ್ದು ಕೂಡ ಸರ್ಕಾರದ ಹೊಣೆಯಾಗಿತ್ತು. ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದೇ ಎಲ್ಲ ಹೊಣೆಗಾರಿಕೆಯನ್ನು ಬೇರೆಯವರಿಗೆ ವರ್ಗಾಯಿಸುವ ಸರ್ಕಾರದ ಚಾಳಿಯು ಸರಿಯಾದದ್ದಲ್ಲ. ‘ಸಮಸ್ತ’ ಆಪ್ನ ಲೋಪಗಳನ್ನು ಸಾಧ್ಯವಾದಷ್ಟು ಬೇಗ ನಿವಾರಿಸಿ, ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಿ, ಹಾಗೆಯೇ ಮೊಬೈಲ್ ಒದಗಿಸಿ ನಂತರವಷ್ಟೇ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮೊಬೈಲ್ನ ಡಾಟ ಬಳಕೆಗೆ ಬೇಕಾದ ಹಣವನ್ನೂ ಸರ್ಕಾರವೇ ನೀಡಬೇಕು.
ಇದನ್ನು ಓದಿದ್ದೀರಾ?: ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!
‘ಎರಡು ಗಂಟೆಗಳ ಕೆಲಸ’ ಎಂದು ಹೇಳಿ ಒಪ್ಪಿಸಿದ್ದ ಸರ್ಕಾರವು ನಂತರದ ದಿನಗಳಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಹೇರುತ್ತಿದೆ ಎಂಬುದು ‘ಆಶಾ‘ ಕಾರ್ಯಕರ್ತೆಯರ ಆಕ್ಷೇಪ. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯಕರ್ತೆಯರ ಕೆಲಸದ ಅವಧಿಯ ಬಗ್ಗೆ ಸೂಕ್ತ ರೀತಿಯ ಪರಿಶೀಲನೆ ನಡೆಸಿ, ಕೆಲಸಕ್ಕೆ ಅನುಗುಣವಾದ ಗೌರವ ಧನ ನೀಡಬೇಕು. ಗ್ರಾಮೀಣ ಮತ್ತು ನಗರದ ಕೊಳಚೆ ಪ್ರದೇಶದಲ್ಲಿ ಬಡವರ-ದೀನರ ನಡುವೆ ಕೆಲಸ ಮಾಡುವ ಈ ಕಾರ್ಯಕರ್ತೆಯರಿಗೆ ಗೌರವ-ಘನತೆಯ ಬದುಕು ನಿರ್ವಹಿಸುವುದಕ್ಕೆ ಅಗತ್ಯವಿರುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆಯ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿಯೂ ಸರ್ಕಾರ ನೆರವು ನೀಡಬೇಕು. ಹಾಗೂ ನಿವೃತ್ತಿಯ ಸಂದರ್ಭದಲ್ಲಿ ನೀಡಬೇಕಾದ ಇಡುಗಂಟಿನ ಹಣವನ್ನು ಪಶ್ಚಿಮ ಬಂಗಾಳದ ಮಾದರಿಯಲ್ಲಿ ನೀಡಬೇಕು ಎನ್ನುವ ಬೇಡಿಕೆಯನ್ನು ಕೂಡ ಸರ್ಕಾರ ಧನಾತ್ಮಕವಾಗಿ ಪರಿಗಣಿಸಬೇಕು. ಮಾಡಿದ ಕೆಲಸಕ್ಕೆ ಅನುಗುಣವಾದ ಗೌರವ ಮತ್ತು ಆರ್ಥಿಕ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ. ಈ ಹೊಣೆಗಾರಿಕೆಯಿಂದ ಸರ್ಕಾರ ತಪ್ಪಿಸಿಕೊಳ್ಳಬಾರದು.



