‘ಸೌಜನ್ಯ ಪ್ರಕರಣ’ದ ಮರುತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ, ರಾಜ್ಯ ಸರ್ಕಾರವು ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಂಗಳೂರು ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದ, ಪ್ರಸ್ತುತ ಪೊಲೀಸ್ ಮಹಾನಿರೀಕ್ಷಕರಾಗಿರುವ (ಐಜಿಪಿ) ಎನ್. ಶಶಿಕುಮಾರ್ ಅವರನ್ನು ಈ ನೂತನ ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ನ್ಯಾಯಾಲಯದ ಸೂಚನೆಯಂತೆ ಪ್ರಕರಣದ ಕೂಲಂಕಷ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸುವ ಉದ್ದೇಶದಿಂದ ಸರ್ಕಾರವು ದಕ್ಷ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಅಖಾಡಕ್ಕಿಳಿಸಿದೆ. ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದ ಈ ತಂಡದಲ್ಲಿ ಇತರ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸದಸ್ಯರನ್ನಾಗಿ ನಿಯೋಜಿಸಲಾಗಿದೆ.
ಎಸ್‌ಐಟಿ ತಂಡದಲ್ಲಿರುವ ಇತರ ಸದಸ್ಯರು
ತಂಡದ ಸದಸ್ಯರಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತಾ ವಿಭಾಗದ ಪೊಲೀಸ್ ಅಧೀಕ್ಷಕಿ (ಎಸ್‌ಪಿ) ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ವಿಭಾಗದ ಎಸ್‌ಪಿ ಲೋಕೇಶ್ ಜಲಸಾಗರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರು ಕಾರ್ಯನಿರ್ವಹಿಸಲಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ, ಈ ವಿಶೇಷ ತನಿಖಾ ತಂಡವು ಪ್ರಕರಣದ ಮರುತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದು, ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.





