ವಿವಾಹ ಎಂಬುದು ಒಬ್ಬ ವ್ಯಕ್ತಿಯು ಮತ್ತೊಬ್ಬರ ಸ್ವಾತಂತ್ರ್ಯ, ವ್ಯಕ್ತಿತ್ವ ಮತ್ತು ಇಷ್ಟಕಷ್ಟಗಳನ್ನು ನಿಯಂತ್ರಿಸುವ ಅಥವಾ ವಶಪಡಿಸಿಕೊಳ್ಳುವ ಪರವಾನಗಿ ಅಲ್ಲ. ಅಷ್ಟಕ್ಕೂ ಹೆಂಡತಿ ಮನೆಯಾಳಲ್ಲ. ಪೋಷಕರ ಆರೈಕೆ ಮಗ-ಮಗಳ ಪ್ರಾಥಮಿಕ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಾಲತಾ ಅವರಿದ್ದ ಏಕಸದಸ್ಯ ಪೀಠವು, ಪತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿ ಈ ನಿರ್ಣಯ ಕೈಗೊಂಡಿದೆ. “ಮನೆಗೆಲಸವನ್ನು ಪತಿ ಹಾಗೂ ಪತ್ನಿ ಇಬ್ಬರೂ ಸಮಾನವಾಗಿ ಹಂಚಿಕೊಂಡು ಮಾಡಬೇಕು. ಹೆಂಡತಿಯನ್ನು ಮನೆಗೆಲಸ ಮಾಡುವಂತೆ ಗಂಡ ಬಲವಂತಪಡಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ‘ಲಿವ್-ಇನ್ ಸಂಬಂಧ’ವನ್ನು ಮದುವೆ ಎಂದು ಕಾನೂನು ಪರಿಗಣಿಸುವುದಿಲ್ಲ: ಕೇರಳ ಹೈಕೋರ್ಟ್
ಹಾಗೆಯೇ ತುಮಕೂರಿನ ಕೌಟುಂಬಿಕ ನ್ಯಾಯಾಲಯವು ಪತಿಯು ತನ್ನ ಪತ್ನಿ ಹಾಗೂ ಮಗಳಿಗೆ ತಿಂಗಳಿಗೆ ಒಟ್ಟು ₹9,000 ಜೀವನಾಂಶ ನೀಡಬೇಕೆಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದನು. ಅರ್ಜಿಯಲ್ಲಿ “ನನ್ನ ಹೆಂಡತಿಯು ಮನೆಗೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ, ವೃದ್ಧರಾದ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಹಾಗೂ ತನ್ನ ಮತ್ತು ಕುಟುಂಬದವರ ಅನುಮತಿ ಪಡೆಯದೇ ತವರು ಮನೆಗೆ ಹೋಗುತ್ತಾಳೆ” ಎಂದು ಆರೋಪಿಸಿದ್ದನು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಹೆಂಡತಿ ಮನೆಯಾಳಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ದಿನಗಳಲ್ಲಿ ಜೀವನಾಂಶವಾಗಿ ನೀಡಲಾಗಿರುವ ₹9,000 ಮೊತ್ತವು ಜೀವನ ನಿರ್ವಹಣೆಗೆ ಹೆಚ್ಚೇನೂ ಅಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪತಿಯ ಅರ್ಜಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
“ಪತಿಯಾದವನು ತನ್ನ ಹೆಂಡತಿಗೆ ಮನೆಗೆಲಸ ಮಾಡುವಂತೆ ಆಜ್ಞಾಪಿಸುವಂತಿಲ್ಲ. ಮನೆಕೆಲಸಗಳು ಕೇವಲ ಮಹಿಳೆಯ ಹೊಣೆಯಲ್ಲ; ಗಂಡ ಮತ್ತು ಹೆಂಡತಿ ಇಬ್ಬರೂ ಇವುಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಶ್ರೇಷ್ಠತೆ ಅಥವಾ ಸಲ್ಲಿಕೆಯ ಆಧಾರದ ಮೇಲೆ ಹೆಂಡತಿಯ ಸಮರ್ಪಣಾ ಭಾವವನ್ನು ಅಳೆಯಲಾಗುವುದಿಲ್ಲ. ವಿವಾಹವು ಇಬ್ಬರು ಸಮಾನ ಮನಸ್ಕರ ಸಂಬಂಧವೇ ಹೊರತು ಅಸಮಾನತೆಯ ಸಂಬಂಧವಲ್ಲ” ಎಂದು ಹೇಳಿದೆ. ಹಾಗೆಯೇ, “ಮಹಿಳೆಯೊಬ್ಬಳು ತನ್ನ ತವರು ಮನೆಗೆ ಹೋಗಲು ಗಂಡನ ಅಥವಾ ಅತ್ತೆ-ಮಾವಂದಿರ ಅನುಮತಿ ಪಡೆಯಲೇಬೇಕೆಂಬ ನಿಯಮವಿಲ್ಲ. ತನ್ನ ತಂದೆ-ತಾಯಿಯನ್ನು ನೋಡಲು ಹೋಗುವುದು ಆಕೆಯ ಮೂಲಭೂತ ಹಕ್ಕು” ಎಂದೂ ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
“ವೃದ್ಧ ಪೋಷಕರನ್ನು ನೋಡಿಕೊಳ್ಳುವುದು ಅವರ ಸ್ವಂತ ಮಗ ಅಥವಾ ಮಗಳ ಪ್ರಾಥಮಿಕ ಕರ್ತವ್ಯವೇ ಹೊರತು ಸೊಸೆ ಅಥವಾ ಅಳಿಯಂದಿರ ಮೇಲಿನ ಬಲವಂತದ ಹೇರಿಕೆಯಲ್ಲ. ಸೊಸೆ ಅಥವಾ ಅಳಿಯ ಅತ್ತೆ-ಮಾವಂದಿರ ಸೇವೆ ಮಾಡುವುದು ಅವರ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕೇ ಹೊರತು, ಅದನ್ನು ಕಡ್ಡಾಯ ಕರ್ತವ್ಯವೆಂದು ಒತ್ತಾಯಿಸುವಂತಿಲ್ಲ” ಎಂದೂ ಹೇಳಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಸ್ತ್ರೀವಾದಿ, ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ಬಹಳ ಹಿಂದೆಯೇ ಚರ್ಚೆಯಾಗಿ, ಯಾವತ್ತೋ ಈ ಬಗ್ಗೆ ನಿಲುವು ಬರಬೇಕಾಗಿತ್ತು. ಆದರೆ ಈಗಲಾದರೂ ಈ ಆದೇಶ ಬಂದಿದೆ ಎಂಬುದು ಸಂತೋಷದ ವಿಷಯ. ಅದೇ ಸಂದರ್ಭದಲ್ಲಿ ನಾವು ಇನ್ನೊಂದು ಆಯಾಮವನ್ನೂ ನೋಡಬೇಕಾಗುತ್ತದೆ. ಇದು ಒಂದು ಉಚಿತ ಶ್ರಮ (free labour) ಹೆಂಗಸರು ಕಷ್ಟಪಟ್ಟು ಮಾಡಲಿ ಅಥವಾ ಗಂಡಸರೂ ಹಂಚಿಕೊಂಡು ಮಾಡಲಿ, ಈ ಪಿತೃಪ್ರಭುತ್ವ ಸಮಾಜದಲ್ಲಿ ಒಟ್ಟಾರೆಯಾಗಿ ಅದರ ಲಾಭ ಇನ್ನೊಂದೆಡೆ ಎಲ್ಲೋ ಹೋಗಿ ಸೇರುತ್ತಿರುತ್ತದೆ” ಎಂದು ತಿಳಿಸಿದ್ದಾರೆ.

“ಇಂದಿನ ಸಮಾಜದಲ್ಲಿ ಮನೆಕೆಲಸಕ್ಕಾಗಿ ಯಾರನ್ನಾದರೂ ನೇಮಿಸಲಾಗುತ್ತದೆ. ಅದಕ್ಕಾಗಿ ವೇತನ ನೀಡಲಾಗುತ್ತದೆ. ಆದರೆ ಈ ಹಿಂದಿನಿಂದಲೂ ಮಹಿಳೆಯರಿಂದ ಉಚಿತ ಶ್ರಮ ಮಾಡಿಸಲಾಗುತ್ತಿರುವ ಕಾರಣ, ಇಂದು ಮಹಿಳೆಯರು ಉದ್ಯೋಗಕ್ಕೆ ಹೋಗುತ್ತಿದ್ದರೂ ಮನೆಯ ಕೆಲಸವನ್ನು ಆಕೆಯ ಮೇಲೆ ಹೇರಲಾಗುತ್ತದೆ. ಪುರಾತನ ಕಾಲದಲ್ಲಿ ತಮ್ಮದೇ ಜಮೀನಿನಲ್ಲಿ ಮಹಿಳೆ ದುಡಿಯುತ್ತಿದ್ದರೂ ಮನೆಕೆಲಸದ ಹೆಚ್ಚುವರಿ ಹೊರೆ ಇರುತ್ತಿತ್ತು. ಇನ್ನೊಂದೆಡೆ ಮನೆಯಲ್ಲಿರುವ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಹಾಕಲಾಗುತ್ತದೆ. ಒಟ್ಟಾರೆಯಾಗಿ ಇದರ ಲಾಭ ಪಿರಮಿಡ್‌ನ ತುತ್ತ ತುದಿಯಲ್ಲಿ ಕೂತಿರುವ ಉಚಿತ ಶ್ರಮ ಲಾಭಗಿಟ್ಟಿಸಿಕೊಳ್ಳುವ ಭೂಮಾಲೀಕರು, ಬಂಡವಾಳಿಗರಿಗೆ ಅವರಿಗೆ ಹೋಗಿ ಸಂಗ್ರಹವಾಗುತ್ತದೆ” ಎಂದು ಅಭಿಪ್ರಾಯಿಸಿದರು.
“ಹೈಕೋರ್ಟ್ ಆದೇಶ ಬಹಳ ಅತ್ಯುತ್ತಮವಾದುದ್ದು. ಅದೇ ಸಂದರ್ಭದಲ್ಲಿ ಮನೆ ಮನೆಯಲ್ಲೂ ನಡೆಯುತ್ತಿರುವ ಈ ಉಚಿತ ಶ್ರಮವನ್ನು ಸಾಮಾಜೀಕರಣ ಮಾಡಬೇಕು ಎಂದು ವಿಶೇಷವಾಗಿ ಸ್ತ್ರೀವಾದಿ, ಮಾರ್ಕ್ಸ್‌ವಾದಿ ಚಳವಳಿ ಬಹಳ ಹಿಂದೆಯೇ ಪರಿಚಯಿಸಿದೆ. ಆದರೆ ಮಹಿಳೆಯರಿಂದ ಈ ಉಚಿತ ಶ್ರಮವನ್ನು ಆದರ್ಶಿಸಿಕರಿಸಿ, ಮಹಿಳೆಯನ್ನು ಆದರ್ಶ ನಾರಿ ಎಂದು ಚಿತ್ರಿಸಿ, ಈ ವ್ಯವಸ್ಥೆಯನ್ನು ಪಿತೃಪ್ರಧಾನ ಸಮಾಜ ಸೃಷ್ಟಿಸಿದೆ. ಇದನ್ನು ವಿರೋಧಿಸುತ್ತಾ ಈ ಕೆಲಸವನ್ನು ಹೆಣ್ಣುಮಕ್ಕಳು, ಗಂಡುಮಕ್ಕಳು ಎಂಬುದನ್ನು ದಾಟಿ ಒಂದು ವ್ಯವಸ್ಥೆಯನ್ನು ಸ್ತ್ರೀವಾದಿ, ಮಾರ್ಕ್ಸ್‌ವಾದಿ ಚಳವಳಿ ಪ್ರತಿಪಾದಿಸಿದೆ. ಮನೆಮನೆಯ ಶ್ರಮವನ್ನು ಸಾಮಾಜೀಕರಣ ಮಾಡುವುದು ಹೇಗೆ ಎಂಬುದನ್ನು ಹೇಳಿದೆ. ಪ್ರತಿ ಮನೆಯಲ್ಲಿಯೂ ಪ್ರತಿ ದಿವಸ ಅಡುಗೆ ಕೋಣೆಯಲ್ಲಿ ಕೆಲಸ ಮಾಡಲೇಬೇಕಾದ ಅವಶ್ಯಕತೆ ಏನು? ಇದನ್ನು ಯಾಕೆ community kitchen ಆಗಿ ಬದಲಾಯಿಸಬಾರದು? ಇಂತಹ ಪ್ರಯೋಗಗಳನ್ನು ಚೀನಾದಲ್ಲಿ ಮಾಡಲಾಗಿದೆ. ಇದರಿಂದಾಗಿ ಗಂಡಸರ ಮೇಲಾಗಲಿ, ಹೆಂಗಸರ ಮೇಲಾಗಲಿ ದೊಡ್ಡ ಹೊರೆ ಕಡಿಮೆಯಾಗುತ್ತದೆ ಅಲ್ವಾ? ಈ ಸಮಯವನ್ನು ವಿರಾಮಕ್ಕೋ, ಮಕ್ಕಳೊಂದಿಗೆ ಕಾಲ ಕಳೆಯಲೋ ಬಳಸಿಕೊಳ್ಳಬಹುದಲ್ಲವೇ” ಎಂದು ಪ್ರಶ್ನಿಸಿದರು.
“ಇದೇ ರೀತಿ ಹಿರಿಯರ ಮತ್ತು ಮಕ್ಕಳ ಆರೈಕೆಯನ್ನು ನಾವು ಬೇರೆ ದೇಶಗಳಲ್ಲಿ ಹೇಗೆ ನೋಡಲಾಗುತ್ತದೆ? ಜರ್ಮನಿಯಲ್ಲಿ ಮಕ್ಕಳ ಆರೈಕೆಯನ್ನು ಸಂಪೂರ್ಣವಾಗಿ ಸರ್ಕಾರ ವಹಿಸಿಕೊಳ್ಳುತ್ತದೆ. ಮಹಿಳೆ ಗರ್ಭಿಣಿಯಾದಾಗಿನಿಂದ ಮಗು 18 ವರ್ಷಕ್ಕೆ ತಲುಪವವರೆಗೂ ಅದರ ಸಂಪೂರ್ಣ ಹೊಣೆಯನ್ನು ಪ್ರಭುತ್ವ ಅಂದರೆ ಸರ್ಕಾರ ವಹಿಸಿಕೊಳ್ಳುತ್ತದೆ. ವಯಸ್ಸಾದವರ ಆರೈಕೆಗೂ ಸರ್ಕಾರ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತದೆ. ಇವೆಲ್ಲವೂ ಸೇರಿ ಮನೆ ಕೆಲಸ ಅಲ್ಲವೇ? ಇವೆಲ್ಲವೂ ಸಾಮಾಜೀಕರಣವಾಗಲು ಸಾಧ್ಯತೆಯಿದೆ, ಸಾಮಾಜೀಕರಣ ಆಗಬೇಕಿದೆ. ಇದು ಬಹಳ ಮುಖ್ಯವಾದುದ್ದು” ಎಂದಿದ್ದಾರೆ.
“ಮೊದಲನೆಯದಾಗಿ ಹೈಕೋರ್ಟ್ ಈ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ಆದರೆ ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಾವು ಹೊಂದಿಕೊಂಡಿರುವ ಸಂದರ್ಭದಲ್ಲಿ, ಮತ್ತೆ ಬಂಡವಾಳಶಾಹಿ ದುಡಿಮೆಯ ವಿಧಾನ ಎಲ್ಲ ಕಡೆಯಿಂದ ಆವರಿಸಿಕೊಂಡಿರುವ ಸಂದರ್ಭದಲ್ಲಿ ಆರೈಕೆ ಮತ್ತು ಮನೆ ಕೆಲಸ ಎರಡನ್ನೂ ಸಾಮಾಜೀಕರಣ ಮಾಡುವ ಅಗತ್ಯವಿದೆ. ಇದರ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಬೇಕು. ಈ ವಿಚಾರ ನ್ಯಾಯಾಂಗ ವ್ಯವಸ್ಥೆಯ ಬಾಗಿಲನ್ನು ತಟ್ಟುವಂತಾಗಬೇಕು” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಸ್ತ್ರೀವಾದಿ, ಯುವ ಲೇಖಕಿ ರೇಖಾ ಹೊಸಹಳ್ಳಿ, “ಮದುವೆ ಎಂಬ ಚೌಕಟ್ಟಿನಲ್ಲಿರಿಸಿ ಮಹಿಳೆಯರನ್ನು ಗುಲಾಮರಂತೆ ಪರಿಗಣಿಸುವ, ಅವರ ಸ್ವಾಯತ್ತತೆಯನ್ನು ಹತ್ತಿಕ್ಕುವ ವಿದ್ಯಮಾನಕ್ಕೆ ಸುಮಾರು 4000 ವರ್ಷಗಳ ಇತಿಹಾಸವಿದೆ. ಇಂಥ ಸಂಬಂಧಗಳಿಂದ ಮಹಿಳೆಯರಿಗಷ್ಟೇ ಅಲ್ಲದೆ ಪುರುಷರಿಗೂ ಎಂಥ ಅನಾರೋಗ್ಯಕರ ಹಾಗೂ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರೆ ಯಾವಾಗ ಬೇಕಾದರೂ ಊಹಿಸಲಾಗದ ತೆರದಲ್ಲಿ ಸಂಬಂಧಗಳು ಸಿಡಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ” ಎಂದು ತಿಳಿಸಿದ್ದಾರೆ.

“ಈಗಾಗಲೇ ವಿಶ್ವಾದ್ಯಂತ ಅನೇಕ ದೇಶಗಳಲ್ಲಿ ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಿರುವುದು ಗೊತ್ತೇ ಇದೆ. ದಕ್ಷಿಣ ಕೊರಿಯಾದಲ್ಲಿ 4B Movement ಎಂಬ ಚಳುವಳಿಯ ಮೂಲಕ ಮಹಿಳೆಯರು ಡೇಟಿಂಗ್, ಲೈಂಗಿಕತೆ, ಮದುವೆ ಹಾಗೂ ಮಕ್ಕಳು ಬೇಡ ಎಂದು ‘ನಾಲ್ಕು ಬೇಡಗಳು’ (Four Nos) ಎಂಬ ಪ್ರತಿಜ್ಞೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ದಕ್ಷಿಣ ಕೊರಿಯಾ, ಚೀನಾ , ಜಪಾನ್ ಟ್ಯುನಿಷಿಯಾ ದೇಶಗಳಲ್ಲಿ ಮದುವೆ ನಿರಾಕರಿಸುತ್ತಿರುವ ಮಹಿಳೆಯರ ಅಂಕಿಅಂಶ ಸರಾಸರಿ ಶೇಕಡ 50ರಷ್ಟಿದೆ. ಜೆನ್ zಗಳ ಪ್ರತಿರೋಧ ಹೆಚ್ಚುತ್ತಿರುವ ಪ್ರಸ್ತುತ ಭಾರತಕ್ಕೂ ಇದು ಹಬ್ಬುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಇನ್ನಾದರೂ ಪುರುಷರು ತಮ್ಮ ಹೆಚ್ಚುಗಾರಿಕೆ, ತಂತ್ರಗಾರಿಕೆಯನ್ನು ಬಿಟ್ಟು ಸಂಗಾತಿಯೊಡನೆ ಪ್ರೀತಿ-ವಿಶ್ವಾಸ, ಗೌರವ, ಜವಾಬ್ದಾರಿಗಳನ್ನು ರೂಢಿಸಿಕೊಳ್ಳದಿದ್ದರೆ ಬರಲಿರುವ ಹೊಸ ಬದಲಾವಣೆಗೆ ಅವರೇ ಮುನ್ನುಡಿ ಬರೆಯಲಿದ್ದಾರೆ. ಹಾಗಾದಲ್ಲಿ ಹೊಸ ಜೀವನಶೈಲಿಗೆ ಹೊಂದಿಕೊಳ್ಳುವ ಶಕ್ತಿ ಅವರಲ್ಲಿದೆಯೇ? ಹುಡುಕಿದರೆ ಇತಿಹಾಸದಲ್ಲಿ ಉತ್ತರವಿದೆ” ಎಂದಿದ್ದಾರೆ.




