ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ವಿರೋಧಿಸಿ ಜಾತ್ಯತೀತ ಪಕ್ಷಗಳು ಹಾಗೂ ಕರ್ನಾಟಕ ಜನಪರ ಸಂಘಟನೆಗಳ ಒಕ್ಕೂಟ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜಾಗೃತಿ ಜಾಥಾವು ಜೂ.16ರಂದು ಮಧ್ಯಾಹ್ನ 1.30ಕ್ಕೆ ಮೈಸೂರಿನ ಪುರಭವನ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗಕ್ಕೆ ಆಗಮಿಸಲಿದ್ದು, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಜಾಥಾವನ್ನು ಸ್ವಾಗತಿಸಲಿದ್ದಾರೆ ಎಂದು ಪ್ರಗತಿಪರ ಮುಖಂಡ ಕಮಲ್ ಗೋಪಿನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಂಗಳವಾರ ಬೆಳಿಗ್ಗೆ ಹುಣಸೂರಿನ ಹಾಡಿಯಲ್ಲಿ ಆರಂಭವಾಗುವ ಜಾಥಾವು ಬಳಿಕ ಹುಣಸೂರು ಪಟ್ಟಣ ಹಾಗೂ ಎಚ್.ಡಿ.ಕೋಟೆಯಲ್ಲಿ ಸಂಚರಿಸಿ ಮೈಸೂರಿಗೆ ಆಗಮಿಸಲಿದೆ ಎಂದು ವಿವರಿಸಿದರು.
ಮೈಸೂರು ನಗರದಲ್ಲಿ ಪುರಭವನದ ಮುಂಭಾಗ, ಮೀಲಾದ್ ಪಾರ್ಕ್ ಹಾಗೂ ಅಶೋಕಪುರಂನ ಬುದ್ಧ ವಿಹಾರದಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದ್ದು, ಎಲ್ಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕನ್ನು ನೀಡಿದ್ದು, ಅದನ್ನು ಸಂರಕ್ಷಿಸುವುದು ಚುನಾವಣಾ ಆಯೋಗದ ಮೂಲ ಕರ್ತವ್ಯವಾಗಿದೆ ಎಂದು ಹೇಳಿದರು. ಆದರೆ ಇಂದಿನ ಚುನಾವಣಾ ಆಯೋಗವು ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕಡೆಗಣಿಸಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದಂತೆ ವರ್ತಿಸುತ್ತಿರುವುದು ದುರಂತಕರ ಬೆಳವಣಿಗೆ ಎಂದು ಆರೋಪಿಸಿದರು.
ಭಾರತ ಚುನಾವಣಾ ಆಯೋಗ ಜಾರಿಗೆ ತರಲು ಮುಂದಾಗಿರುವ ಎಸ್‌ಐಆರ್ ಪ್ರಕ್ರಿಯೆಯು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದ್ದು, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ಸಾಮಾನ್ಯ ಮತದಾರರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಇದರಿಂದ ಎಲ್ಲಾ ಸಮುದಾಯಗಳ ಬಡ ಹಾಗೂ ದುರ್ಬಲ ವರ್ಗದ ಜನರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಫಾರ್ಮ್ಯಾಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ ಪಾರದರ್ಶಕತೆ ಕಾಪಾಡಬೇಕು. ಅಲ್ಲದೆ ಆಕ್ಷೇಪಣೆ ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?SIR ವಿರೋಧಿ ಜಾಥಾಕ್ಕೆ ಮಂಡ್ಯದಲ್ಲಿ ಬೆಂಬಲ: ಜೂನ್ 20ರ ಪ್ರತಿರೋಧ ಸಮಾವೇಶಕ್ಕೆ ಕರೆ
ಮೇ 30ರಂದು ರಾಜ್ಯದ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ವಿರೋಧಿಸಿ ‘ಕರ್ನಾಟಕ ಪ್ರತಿರೋಧ’ ಅಭಿಯಾನದಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. “ಇದು ಬಿಹಾರವೂ ಅಲ್ಲ, ಬಂಗಾಳವೂ ಅಲ್ಲ; ಬಸವಣ್ಣರ ಕರ್ನಾಟಕ” ಎಂಬ ಸ್ಪಷ್ಟ ಸಂದೇಶವನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ಜೂ.17ರಂದು ಚಾಮರಾಜನಗರದಲ್ಲಿ ಜನಜಾಗೃತಿ ಜಾಥಾ
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಎಸ್‌ಡಿಪಿಐ ಮುಖಂಡ ಅಹಮ್ಮದ್ ಖಾನ್, ಡಾ. ಮ.ಪು. ಪೂರ್ಣಾನಂದ, ರತಿರಾವ್, ಸವಿತಾ ಪ. ಮಲ್ಲೇಶ್ ಹಾಗೂ ರಾಜ್ಯ ರೈತ ಸಂಘದ ಪಿ. ಮರಂಕಯ್ಯ ಇದ್ದರು.




