ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಹೇಳಿದರು.
ಬಾಗಲಕೋಟೆ ನಗರದ ತೋವಿವಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತೋವಿವಿಯ 17ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ತಮ್ಮ ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆಯಲ್ಲಿ ಗೆಲುವು ಸಾಧಿಸುವುದು ಸಂತಸದ ವಿಚಾರವಾದರೂ, ಸೋಲಿನಿಂದ ನಿರಾಶರಾಗಬಾರದು. ಸೋಲು ಮುಂದಿನ ಸಾಧನೆಗೆ ಪ್ರೇರಣೆಯಾಗಬೇಕು. ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಕ್ರೀಡಾ ಸ್ಪರ್ಧೆಗಳು ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಪರಸ್ಪರ ಸಹಕಾರ, ಸಮಯಪಾಲನೆ, ಶಿಸ್ತು ಹಾಗೂ ತಂಡದೊಂದಿಗೆ ಕೆಲಸ ಮಾಡುವ ಗುಣಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು.
*ಕ್ರೀಡೆಗೆ ಶಿಕ್ಷಣದಷ್ಟೇ ಆದ್ಯತೆ ನೀಡಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೇ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮಹತ್ವದ ಸ್ಥಾನವಿದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಇಂತಹ ಕ್ರೀಡಾಕೂಟಗಳನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಹೊಸ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳಲು ದೊರೆಯುವ ಉತ್ತಮ ಅವಕಾಶವೆಂದು ಭಾವಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯಕರ ಹಾಗೂ ಶಿಸ್ತಿನ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ವಹಿಸಿದ್ದರು.
ಪ್ರಾರಂಭದಲ್ಲಿ ತೋವಿವಿಯ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ರಾಜಶೇಖರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತೋವಿವಿಯ ವಿಶೇಷಾಧಿಕಾರಿ ಡಾ. ಪಾಟೀಲ, ಬೀಜ ಘಟಕದ ಮುಖ್ಯಸ್ಥ ರವೀಂದ್ರ ಜಾವಾಡಗಿ, ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.




