ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ಮೇಲಿರುವ ಆರೋಪಗಳನ್ನು ಇತರರ ಮೇಲೆ ಹೊರಿಸುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ. ಅವರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬೊಮ್ಮಾಯಿ ಅವರು, “ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ” ಎಂದಿದ್ದಾರೆ.
“ಜಾರ್ಜ್ ಸೋರೋಸ್‌ನಂತಹ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಪ್ರಶ್ನೆಗಳು ಇಂದು ದೇಶದ ಮುಂದೆ ಇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಸಂಸದ ಬಸವರಾಜ ಬೊಮ್ಮಾಯಿ
“ವಿದೇಶಿ ಸಂಪರ್ಕಗಳ ಬಗ್ಗೆ ಮಾತನಾಡುವುದಾದರೆ, ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುವ ರಾಹುಲ್ ಗಾಂಧಿಯವರೇ ತಮ್ಮ ವಿದೇಶಿ ಸಂಪರ್ಕಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುವುದು, ದೇಶದ ಆಂತರಿಕ ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸುವುದು ಮತ್ತು ಭಾರತದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು ಅವರ ರಾಜಕೀಯ ನಡವಳಿಕೆಯಾಗಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಜಾರ್ಜ್ ಸೋರೋಸ್ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳ ವಿಚಾರವಾಗಿ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಅದರ ಚಟುವಟಿಕೆಗಳ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆ ನೀಡುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ” ಎಂದಿದ್ದಾರೆ.
“ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೈಯಕ್ತಿಕ ಸುಖ-ಸ್ವಾರ್ಥ ಬದಿಗಿಟ್ಟು ದೇಶಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಅವರ ವಿರುದ್ಧ ಆಧಾರರಹಿತ ಆರೋಪ ಮಾಡುವುದು ಕೋಟ್ಯಂತರ ಭಾರತೀಯರ ಭಾವನೆಗೆ ಮಾಡುವ ಅಪಮಾನವಾಗಿದೆ” ಎಂದೂ ಹೇಳಿದ್ದಾರೆ.
ಬಿಜೆಪಿ ನಾಯಕರ ಈ ಆರೋಪಗಳನ್ನು ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಪ್ರತ್ಯುತ್ತರ ನೀಡಿದೆ. “ದೇಶದ ಪ್ರಮುಖ ಆಡಳಿತ ವೈಫಲ್ಯಗಳು ಮತ್ತು ಅದಾನಿ ಗ್ರೂಪ್ ಮೇಲಿನ ಆರೋಪಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ‘ಜಾರ್ಜ್ ಸೋರೋಸ್’ ಹೆಸರನ್ನು ಗುರಾಣಿಯಾಗಿ ಬಳಸುತ್ತಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರರು ಆರೋಪಿಸಿದ್ದಾರೆ.
“ರಾಹುಲ್ ಗಾಂಧಿಯವರು ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಬಡಜನರ ಪರವಾಗಿ ಹೋರಾಡುತ್ತಿದ್ದಾರೆಯೇ ಹೊರತು ಯಾವುದೇ ವಿದೇಶಿ ಶಕ್ತಿಗಳ ಮುಖಾಂತರ ಅಲ್ಲ. ಬಿಜೆಪಿಯ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಹೇಳಿದೆ. ಹಾಗೆಯೇ “ಜಾರ್ಜ್ ಸೋರೋಸ್ ಅನುದಾನ ನೀಡುವ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ (ಉದಾಹರಣೆಗೆ ವಿಶ್ವಸಂಸ್ಥೆಯ UNDEF) ಭಾರತ ಸರ್ಕಾರವೂ ನಿಧಿ ನೀಡುತ್ತಿರುವುದೇಕೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.




