ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಈ ಹೊತ್ತಿನಲ್ಲಿ ಈ ಇಡೀ ಬೆಳವಣಿಗೆಯ ಚಿತ್ರಣ, ಘಟನೆಯ ಹಿನ್ನೆಲೆ ಮತ್ತು ಇದರಿಂದ ಆಡಳಿತ ವ್ಯವಸ್ಥೆಯ ಮೇಲಾಗಿರುವ ಪರಿಣಾಮಗಳನ್ನು ಚರ್ಚಿಸುವುದು ಅಗತ್ಯ.
ಒಂದೆಡೆ ಸಾಲು ಸಾಲು ಪ್ರತಿಭಟನೆಗಳು, ಧರಣಿಗಳು, ರ್ಯಾಲಿಗಳ ಧೂಳೆಬ್ಬಿಸುತ್ತಿರುವಾಗಲೇ, ರಾಜಧಾನಿಯ ಭದ್ರತೆಯ ಹೊಣೆ ಹೊತ್ತ ಪೊಲೀಸರು ಬೀದಿಗಿಳಿದು ಧರಣಿ ಕುಳಿತ್ತಿರುವ ಅಪರೂಪದ ಹಾಗೂ ಕಳವಳಕಾರಿ ಘಟನೆಗೆ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಮತ್ತು ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ವಾದಿಸಬೇಕಾದ ವಕೀಲರ ನಡುವಿನ ಸಂಘರ್ಷ ಈಗ ಬೀದಿ ರಂಪಾಟಕ್ಕೆ ತಿರುಗಿದ್ದು, ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತಮ್ಮದೇ ಪ್ರಧಾನ ಕಚೇರಿಯ (PHQ) ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕತೆ ಶುರುವಾಗಿದ್ದು ಎಲ್ಲಿಂದ?
ಈ ಇಡೀ ಗಲಾಟೆಯ ಹಿನ್ನೆಲೆ ನೋಡುವುದಾದರೆ, ಈಶಾನ್ಯ ದೆಹಲಿಯ ರೋಹತಾಶ್ ನಗರದ ಸಲೂನ್ ಒಂದರ ಹೊರಗಡೆ ನಡೆದ ತೀರಾ ಸಾಮಾನ್ಯ ಪಾರ್ಕಿಂಗ್ ವಿವಾದವೊಂದು ತೆರೆದುಕೊಳ್ಳುತ್ತದೆ. ಅಕ್ಟೋಬರ್ 23 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೀತಲ್ ಠಾಕೂರ್ ಮತ್ತು ಆಕೆಯ ಪತಿ ರಾಹುಲ್ ತಮ್ಮ ಸಲೂನ್ ಬಾಗಿಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕನ್ನು ತೆರವುಗೊಳಿಸುವಂತೆ ಸವಾರನಿಗೆ ಕೋರಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಶೀತಲ್ ಅವರ ಕುಟುಂಬದವರ ಆರೋಪದಂತೆ, ಮಾತಿಗೆ ಮಾತು ಬೆಳೆದು ಕೆಲವೇ ಗಂಟೆಗಳಲ್ಲಿ ವಕೀಲರ ಗುಂಪೊಂದು ಸಲೂನ್‌ಗೆ ನುಗ್ಗಿದೆ. ಪೀಠೋಪಕರಣಗಳನ್ನ ಧ್ವಂಸಗೊಳಿಸಿದೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಶೀತಲ್ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದಾದ ನಂತರ ಕುಟುಂಬಸ್ಥರು ಶಹದರಾ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಠಾಣೆಯ ಒಳಗಡೆಯೇ ವಕೀಲರು ಮತ್ತೆ ದೂರುದಾರರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಲಾಟೆಯಲ್ಲಿ ಲಲಿತ್ ಬನ್ಸಾಲ್ ಎಂಬ ವಕೀಲರ ತಲೆಗೆ ತೀವ್ರ ಪೆಟ್ಟಾಗಿದೆ. ಈ ಸಂಬಂಧ ದೂರು ನೀಡಿದರೂ ಪೊಲೀಸರು ಆರೋಪಿ ರಾಹುಲ್‌ನನ್ನು ಬಂಧಿಸದೆ ಬಿಡುಗಡೆ ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. ಅಲ್ಲದೆ, ACP ಮಾನಸ್ವಿ ವಸಿಷ್ಠ ಅವರು ತಮಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ವಕೀಲರ ಸಂಘಟನೆ ಗಂಭೀರ ಆರೋಪ ಮಾಡಿದೆ.
ಅಕ್ಟೋಬರ್ 24ರಂದು ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತು. ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಕೀಲರು ಶಾಹದಾರ ಪೊಲೀಸ್ ಠಾಣೆಗೆ ಆಗಮಿಸಿದರು. ಈ ವೇಳೆ ಸಹಾಯಕ ಪೊಲೀಸ್ ಆಯುಕ್ತ (ACP) ಮನಸ್ವಿ ವಶಿಷ್ಠ ಮತ್ತು ಠಾಣಾಧಿಕಾರಿ (SHO) ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಅವರೊಂದಿಗೆ ವಕೀಲರ ಮಾತಿನ ಚಕಮಕಿ ನಡೆದಿದೆ.
ವಕೀಲರ ಸಂಘಟನೆ ನೀಡಿರುವ ವಿವರಣೆಯ ಪ್ರಕಾರ, ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿಯೂ ವಕೀಲರಿಗೆ ಲಭ್ಯವಾಗಿತ್ತು. ಇದನ್ನು ಪ್ರಶ್ನಿಸಲು ಠಾಣೆಗೆ ಹೋದಾಗ ಎಸಿಪಿ ಮನಸ್ವಿ ವಶಿಷ್ಠ ತಮ್ಮ ರಿವಾಲ್ವರ್ ಪ್ರದರ್ಶಿಸಿ ವಕೀಲರನ್ನು ಬೆದರಿಸಿದ್ದಾರೆ ಎಂಬುದು ವಕೀಲರ ಗಂಭೀರ ಆರೋಪ. ಇದಕ್ಕೆ ವಿರುದ್ಧವಾಗಿ ಎಸಿಪಿ ವಶಿಷ್ಠ ನೀಡಿದ ದೂರಿನಲ್ಲಿ, ಸುಮಾರು 15ರಿಂದ 20 ವಕೀಲರು ಠಾಣಾಧಿಕಾರಿಯ ಕೊಠಡಿಗೆ ನುಗ್ಗಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆಯಲ್ಲಿ ಲಂಚ ಸ್ವೀಕರಿಸಿ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಕೀಲರು ಆರೋಪಿಸಿದ್ದು, ಅಧಿಕಾರಿಗಳಿಗೆ ಕೆಲಸ ಮಾಡಲು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಒಬ್ಬ ವಕೀಲರು ಎಸ್‌ಎಚ್‌ಒ ಅವರ ಕೈ ಹಿಡಿದು ಎಳೆಯಲು ಯತ್ನಿಸಿದ್ದಾರೆ ಎಂಬ ಆರೋಪವೂ ದೂರಿನಲ್ಲಿದೆ.
ಘಟನೆಯ ನಂತರ ವಕೀಲರ ಸಂಘಟನೆಯು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿ, ಎಸಿಪಿ ಹಾಗೂ ಎಸ್‌ಎಚ್‌ಒ ಅಮಾನತಿಗೆ ಪಟ್ಟು ಹಿಡಿಯಿತು. ವಕೀಲರ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ ಅಕ್ಟೋಬರ್ 28 ರಂದು ಎಸಿಪಿ ಮಾನಸ್ವಿ ವಸಿಷ್ಠ ಮತ್ತು ಎಸ್‌ಎಚ್‌ಒ ಅರುಣ್ ಕುಮಾರ್ ಅವರನ್ನು ದೆಹಲಿಯ ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಿತು.
ತಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಷ್ಠೆಯಿಂದ ಕೆಲಸ ಮಾಡಿದ್ದರೂ, ರಾಜಕೀಯ ಹಾಗೂ ವಕೀಲರ ಒತ್ತಡಕ್ಕೆ ಸಿಲುಕಿ ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶಗೊಂಡ ಸುಮಾರು 150ಕ್ಕೂ ಹೆಚ್ಚು ಪೊಲೀಸರು ನವೆಂಬರ್ 2 ರಂದು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಗೇಟ್ ನಂ. 1 ರ ಮುಂದೆ ಧರಣಿ ಕುಳಿತರು. “ಖಾಕಿಗೆ ಗೌರವ ಕೊಡಿ”, “ನಾವು ಪಂಚಿಂಗ್ ಬ್ಯಾಗ್ ಅಲ್ಲ” ಎಂಬ ಬ್ಯಾನರ್‌ಗಳನ್ನು ಹಿಡಿದು, ತಮ್ಮದೇ ಕಮಿಷನರ್ ವಿರುದ್ಧ ಹಾಗೂ ವಕೀಲರ ಗೂಂಡಾಗಿರಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಪೊಲೀಸರು, ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಕಮಿಷನರ್ ಅನುರಾಗ್ ಕುಮಾರ್ ಅವರನ್ನು ಭೇಟಿಯಾಗಿ 5 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
ವಕೀಲರ ವಿರುದ್ಧ ಎಸಿಪಿ ವಸಿಷ್ಠ ನೀಡಿದ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು, ಪೊಲೀಸರ ಸಮಸ್ಯೆಗಳನ್ನು ಆಲಿಸಲು ಮತ್ತು ಅವರಿಗೆ ಆಗುವ ಅನ್ಯಾಯಗಳನ್ನು ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು, ವಕೀಲರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾದಾಗ ನಿರ್ವಹಣೆ ಮಾಡಲು ನಿರ್ದಿಷ್ಟ ಕಾರ್ಯವಿಧಾನ (SOP) ರೂಪಿಸಬೇಕು, ಪೊಲೀಸ್ ಅಧಿಕಾರಿಯ ಕೊಠಡಿಗೆ ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ವಕೀಲರು ನುಗ್ಗದಂತೆ ನಿಯಂತ್ರಣ ಹೇರಬೇಕು ಹಾಗೂ ಕೋರ್ಟ್ ಆವರಣ ಹಾಗೂ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು.

ಉನ್ನತ ಸ್ಥಾನದಲ್ಲಿರುವ ಪೊಲೀಸ್ ಪಡೆಯೇ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿದ್ಯಾರ್ಥಿ ಸಂಘಟನೆ AISA ಯ ಅಧ್ಯಕ್ಷೆ ನೇಹಾ ಬೋರಾ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ದೆಹಲಿ ಪೊಲೀಸ್ ಪ್ರಧಾನ ಕಚೇರಿಯಿರುವ ಪ್ರದೇಶದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹಾಗಿದ್ದ ಮೇಲೆ ಧರಣಿ ಕುಳಿತ ಪೊಲೀಸರ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲಿಸುತ್ತಾರೆಯೇ? ಇದು ಕುಸಿದುಬಿದ್ದಿರುವ ವ್ಯವಸ್ಥೆಯ ಸಂಕೇತ,” ಎಂದು ಕಿಡಿಕಾರಿದ್ದಾರೆ.
ಇನ್ನೊಂದೆಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸಿಪಿ ಮಾನಸ್ವಿ ವಸಿಷ್ಠ ಅವರನ್ನು ಘಟನೆಯ ಮರುದಿನವೇ ಅಮಾನತುಗೊಳಿಸಲಾಗಿದೆ. ಆದರೆ, ಅಮಾನತಿಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾನಸ್ವಿ, “ಪೊಲೀಸ್ ಠಾಣೆಗಳೇ ಸುರಕ್ಷಿತವಾಗಿರದಿದ್ದರೆ, ಈ ನಗರದಲ್ಲಿ ಇನ್ಯಾವ ಜಾಗ ಸುರಕ್ಷಿತವಾಗಿರಲು ಸಾಧ್ಯ? ನಮಗೆ ಅನ್ಯಾಯವಾಗಿದೆ, ನಾವು ನಮಗಾಗಿ ದ್ವನಿ ಎತ್ತುತ್ತಿದ್ದೇವೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಇದನ್ನೂ ಓದಿ: ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್ ಬಜೆಟ್ ಸಿನಿಮಾಗಳಲ್ಲೂ ನಿಲ್ಲದ ಸಂಭಾವನೆ ತಾರತಮ್ಯ!
ದೆಹಲಿಯಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಹೀಗೆ ಬೀದಿ ಕಾಳಗ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2019 ರಲ್ಲಿ ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿಯೂ ಸಹ ಇಂತಹುದೇ ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದಾಗಿ ವಕೀಲರು ಮತ್ತು ಪೊಲೀಸರ ನಡುವೆ ಭಾರಿ ಹಿಂಸಾಚಾರ ನಡೆದಿತ್ತು. ಅಂದು 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಆ ಘಟನೆಯನ್ನು ಖಂಡಿಸಿ 2,000ಕ್ಕೂ ಹೆಚ್ಚು ಪೊಲೀಸರು ಹಾಗೂ ಅವರ ಕುಟುಂಬಸ್ಥರು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದ್ದರು.
ಖಾಕಿ ಸಮವಸ್ತ್ರ ಧರಿಸಿದ ಮಾತ್ರಕ್ಕೆ ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಸಹಿಸಿಕೊಳ್ಳಬೇಕೇ ಎಂಬ ಪ್ರಶ್ನೆ ಅಂದೂ ಎದ್ದಿತ್ತು, ಇಂದೂ ಎದ್ದಿದೆ. ಏಳು ವರ್ಷಗಳ ನಂತರ ಮತ್ತೆ ಅದೇ ಮಾದರಿಯ ಪಾರ್ಕಿಂಗ್ ರಾದ್ಧಾಂತವು ರಾಜಧಾನಿಯಲ್ಲಿ ಖಾಕಿ ಮತ್ತು ಕಪ್ಪು ಕೋಟ್‌ಗಳ ನಡುವೆ ಯುದ್ಧಕ್ಕೆ ಕಾರಣವಾಗಿದೆ. ಪೊಲೀಸರು ಶಿಸ್ತಿನ ಪಡೆ. ಅವರು ಬೀದಿಗಿಳಿದು ಪ್ರತಿಭಟನೆ ಮಾಡುವುದು ಶಿಸ್ತುಭಂಗ ಎನಿಸಿಕೊಂಡರೂ, ಅವರು ಯಾವ ರೀತಿಯ ಅಭದ್ರತೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ ಎಂಬುದನ್ನೂ ಪರಿಶೀಲಿಸುವುದು ಮುಖ್ಯ. ಕಾನೂನು ಪಾಲಕರು ಮತ್ತು ಕಾನೂನು ರಕ್ಷಕರ ನಡುವಿನ ಈ ವೈಮನಸ್ಸು, ಸಾಮಾನ್ಯ ಜನರಿಗೆ ಕಾನೂನಿನ ಮೇಲಿರುವ ನಂಬಿಕೆಯನ್ನು ಕರಗುವಂತೆ ಮಾಡದಿರಲಿ.
ರಾಜಕೀಯ ಲಾಭ-ನಷ್ಟ ಅಥವಾ ಒತ್ತಡಗಳಿಗೆ ಮಣಿಯದೆ, ತಪ್ಪು ಯಾರೇ ಮಾಡಿದ್ದರೂ ಅದು ವಕೀಲರಾಗಿರಲಿ ಅಥವಾ ಪೊಲೀಸರಾಗಿರಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಶಿಕ್ಷೆ ವಿಧಿಸುವುದು ಸರ್ಕಾರದ ಕರ್ತವ್ಯ. ಇಲ್ಲವಾದರೆ, ದೆಹಲಿಯ ಬೀದಿಗಳಲ್ಲಿ ಕಾನೂನು ರಕ್ಷಕರೇ ತಮ್ಮ ರಕ್ಷಣೆಗೆ ಧರಣಿ ಕುಳಿತುಕೊಳ್ಳುವ ಇಂತಹ ದೃಶ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತವೆ.




