ರಾಜ್ಯದಲ್ಲಿನ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರವು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಕೆಎಸ್‌ಐಆರ್‌ಟಿಸಿ ದರವು 23% ಏರಿಕೆಯಾಗಿದ್ದರೆ, ಬಿಎಂಟಿಸಿ ದರವು 35%ರಷ್ಟು ಏರಿಕೆಯಾಗಿದೆ. ಈ ಪರಿಷ್ಕೃತ ಟಿಕೆಟ್ ದರಗಳು ಬುಧವಾರ ರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸರ್ಕಾರ ಹೇಳಿದೆ. ಈ ದರ ಏರಿಕೆಗೆ ರಾಜ್ಯದಲ್ಲಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ನಷ್ಟ ಮತ್ತು ನಿರ್ವಹಣಾ ವೆಚ್ಚದ ನೆಪಹೇಳಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ದರ ಏರಿಕೆಯನ್ನು ಪ್ರಕಟಿಸಿದ ಸಾರಿಗೆ ಸಚಿವ ಬೈರತಿ ಸುರೇಶ್, ರಾಜ್ಯದ “ನಾಲ್ಕೂ ರಸ್ತೆ ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ) ಎದುರಿಸುತ್ತಿರುವ ಸತತ ಸಾಲ ಮತ್ತು ನಷ್ಟದ ಭರಿಸುವಿಕೆಗಾಗಿ ದರ ಹೆಚ್ಚಳ ಅನಿವಾರ್ಯವಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದ್ದು, ಅಂತಿಮವಾಗಿ ಪ್ರಯಾಣಿಕರ ದರವನ್ನು ಪರಿಷ್ಕರಿಸಲು ನಿರ್ಧರಿಸಲಾಗಿತ್ತು” ಎಂದು ಹೇಳಿದ್ದಾರೆ.
ಪರಿಷ್ಕೃತ ದರ ಪಟ್ಟಿಯಂತೆ: ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು ಈಗಿರುವ 6 ರೂ.ನಿಂದ 10 ರೂ.ಗೆ ಹೆಚ್ಚಿಸಲಾಗಿದೆ. ಅಂತೆಯೇ, ಗರಿಷ್ಠ ಪ್ರಯಾಣ ದರವನ್ನು 35 ರೂ.ನಿಂದ 40 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು, ವಿಮಾನ ನಿಲ್ದಾಣ ಮತ್ತು ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ವಾಯುವಜ್ರ (ಎಸಿ) ಬಸ್‌ಗಳ ಕನಿಷ್ಠ ದರವನ್ನು 15 ರೂ.ನಿಂದ 20 ರೂ.ಗೆ ಮತ್ತು ಗರಿಷ್ಠ ದರವನ್ನು 75 ರೂ.ನಿಂದ 90 ರೂ.ಗೆ ಹೆಚ್ಚಿಸಲಾಗಿದೆ.
ಈ ದರ ಏರಿಕೆಯು ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳನ್ನು ನಿತ್ಯ ಅವಲಂಬಿಸಿರುವ ಲಕ್ಷಾಂತರ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.
ಈ ಲೇಖನ ಓದಿದ್ದೀರಾ?: ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿತ್ತು. ಇದರ ಬೆನ್ನಲ್ಲೇ, ಈಗ ಅಗತ್ಯ ಸೇವೆಯಾಗಿರುವ ಸಾರ್ವಜನಿಕ ಸಾರಿಗೆ ದರದಲ್ಲೂ ದಿಢೀರ್ ಏರಿಕೆ ಮಾಡಿದೆ. ಇದು ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಮಾಸಿಕ ಆಯವ್ಯಯವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಇಂಧನ ಬೆಲೆ ಏರಿಕೆ, ಉದ್ಯೋಗಿಗಳ ವೇತನ ಹೆಚ್ಚಳ ಹಾಗೂ ನಿಗಮಗಳ ನಿರ್ವಹಣಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಈ ದರ ಏರಿಕೆಗೆ ಮುಖ್ಯ ಕಾರಣವೆಂದು ಸಾರಿಗೆ ಇಲಾಖೆ ಸಮರ್ಥಿಸಿಕೊಂಡಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯ ಮತ್ತು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.



