ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ ಹಾಗೂ ಶೋಷಣೆಯ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ ಸಾಹಿತ್ಯವೇ ದಲಿತ ಸಾಹಿತ್ಯ ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ‘ದಲಿತ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ’ ವಿಷಯದ ಕುರಿತು ಅವರು ಮಾತನಾಡಿದರು.
ಒಂದು ವರ್ಗದ ಜನರಿಗೆ ಆಸ್ತಿ-ಸಂಪತ್ತು ಹೊಂದುವ ಹಕ್ಕಿಲ್ಲ, ವಿದ್ಯಾಭ್ಯಾಸ ಮಾಡಬಾರದು, ಮೇಲ್ವರ್ಗದವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಬಾರದು ಎಂಬಂತಹ ಸಾಮಾಜಿಕ ಕಟ್ಟಳೆಗಳು ಮನುಷ್ಯನ ಮೂಲಭೂತ ಹಕ್ಕುಗಳನ್ನೇ ನಿರಾಕರಿಸಿದ್ದವು. ಇಂತಹ ವ್ಯವಸ್ಥೆಯಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಾಗ ಅದರ ವಿರುದ್ಧ ಸಾಹಿತ್ಯದ ಮೂಲಕ ಪ್ರತಿರೋಧ ದಾಖಲಿಸಿದ ಪರಂಪರೆಯೇ ದಲಿತ ಸಾಹಿತ್ಯ ಎಂದು ಅವರು ವಿಶ್ಲೇಷಿಸಿದರು.
‘ಮಾತೃಭಾಷೆಯೇ ವ್ಯಕ್ತಿತ್ವದ ಬೇರು’
ಮಹಾಂತೇಶ ಜಿಜಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ನರಸನಗೌಡ್ರ ಅವರು ‘ಕನ್ನಡ ಭಾಷೆಗೆ ಪಾಲಕರ ಒಲವು’ ವಿಷಯ ಕುರಿತು ಮಾತನಾಡಿ, ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಾತೃಭಾಷೆಯ ಪಾತ್ರ ಮಹತ್ವದ್ದಾಗಿದೆ ಎಂದರು.
ಮಾತೃಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ವ್ಯಕ್ತಿಯ ಸಂಸ್ಕೃತಿ, ಅಸ್ತಿತ್ವ ಮತ್ತು ಪರಂಪರೆಯನ್ನು ಬೆಸೆಯುವ ಜೀವಂತ ಕೊಂಡಿಯಾಗಿದೆ. ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
‘ಇಂದಿನ ಯುವಕ-ಯುವತಿಯರ ಮನಸ್ಥಿತಿ’ ಕುರಿತು ಶಿಕ್ಷಕಿ ಸರಿತಾ ಶಿರಗುಪ್ಪಿ ಮಾತನಾಡಿ, “ಯುವಜನತೆ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ಆಲೋಚನೆ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ದುಡಿಯುವ ಸಂಸ್ಕೃತಿ ಹಾಗೂ ಸಾಧಿಸುವ ಛಲ ಹೊಂದಿರುವವರಿಗಷ್ಟೇ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಾಣುವ ಸಾಮರ್ಥ್ಯ ಇರುತ್ತದೆ. ಕಾಲದ ಬದಲಾವಣೆಯೊಂದಿಗೆ ಹೆಜ್ಜೆ ಹಾಕುವ ಶಕ್ತಿ ಯುವಕರಲ್ಲಿದ್ದು, ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಎಂ.ಬಿ ಇಂಡಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷ ಸಂಗಮೇಶ ಮಟೋಳಿ, ಚನ್ನಪ್ಪ ಬಿರಾದಾರ, ಚಿತ್ತರಂಜನ ನಾಂದ್ರೇಕರ, ಶಿವಾನಂದ ಕುಬಸದ ಹಾಗೂ ಸತೀಶ ದಳವಾಯಿ ಉಪಸ್ಥಿತರಿದ್ದರು.




