ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಈ ಕಡೆಯ ಕ್ಷಣಗಳಲ್ಲಿ ಬಿಜೆಪಿಗರು ಟಾರ್ಗೆಟ್ ಮಾಡಲಿದ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ಅರ್ಜಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಲವೆಡೆ ಬಿಜೆಪಿ ವಿರೋಧಿ ಮತಗಳು ಮತ್ತು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡಲು ಬಿಜೆಪಿ ವ್ಯವಸ್ಥಿತ ಸಂಚು ಹೆಣೆದಿದೆ. ಬಿಜೆಪಿಯ ಷಡ್ಯಂತ್ರಗಳು ಇದೀಗ ರಾಜ್ಯಾದ್ಯಂತ ದಾಖಲೆ/ಸಾಕ್ಷ್ಯ ಸಮೇತ ಬಹಿರಂಗಗೊಂಡಿವೆ. ಅಕ್ರಮವಾಗಿ ಮತದಾರರ ಹೆಸರು ಅಳಿಸಲು ‘ಫಾರ್ಮ್-7’ ಸಲ್ಲಿಸಿದರ ಹಲವು ಬಿಜೆಪಿಗರ ವಿರುದ್ಧ ದೂರು-ಎಫ್‌ಐಆರ್‌ಗಳು ದಾಖಲಾಗಿವೆ.
ಕರ್ನಾಟಕದಾದ್ಯಂತ ಒಟ್ಟು 84,900ದಷ್ಟು ಫಾರ್ಮ್-7 ಅರ್ಜಿಗಳು ಸ್ವೀಕೃತವಾಗಿವೆ ಎಂಬುದನ್ನು ರಾಜ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ. ಈ ಪೈಕಿ ಕೆಲವು ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿಯಾದ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಮುಖ್ಯವಾಗಿ ಬಾಬಲೇಶ್ವರ, ಭಾಲ್ಕಿ, ವಿಜಯನಗರ, ವಿಜಯಪುರ, ಮೂಡಿಗೆರೆ, ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಅತೀ ಹೆಚ್ಚು ಫಾರ್ಮ್-7ಗಳು ಸಲ್ಲಿಕೆಯಾಗಿರುವುದು ಬಿಜೆಪಿಯ ಷಡ್ಯಂತ್ರಕ್ಕೆ ಕನ್ನಡಿ ಹಿಡಿದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಫಾರ್ಮ್-7 ಅಕ್ರಮ
ಜಯನಗರ: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಅಳಿಸಿಹಾಕಲು ಬೃಹತ್ ಪ್ರಮಾಣದಲ್ಲಿ ‘ಫಾರ್ಮ್-7’ ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಜಯನಗರದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜಯನಗರದ ಗುರುಪ್ಪನಪಾಳ್ಯದಲ್ಲಿಯೇ (ವಾರ್ಡ್ 171) ಅತಿ ಹೆಚ್ಚು ಅಂದರೆ 4,327 ಮತದಾರರ ಹೆಸರುಗಳನ್ನು ಅಳಿಸಲು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಂತೆಯೇ, ಬೈರಸಂದ್ರದಲ್ಲಿ (ವಾರ್ಡ್ 169 ಮತ್ತು 170) ಒಟ್ಟು 1,244, ಹಲಸೂರಿನಲ್ಲಿ (ವಾರ್ಡ್ 168) 54, ಹಾಗೂ ಜಯನಗರದ ಇತರೆ ವಾರ್ಡ್‌ಗಳಲ್ಲಿ (177, 178, 179) ಒಟ್ಟು 82 ಮತದಾರರ ಹೆಸರುಗಳ ಅಳಿಸುವಿಕೆಗೆ ಅಕ್ರಮವಾಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ.
ಸೌಮ್ಯ ರೆಡ್ಡಿ ಅವರ ದೂರಿನ ಆಧಾರದ ಮೇಲೆ, ಬಿಜೆಪಿಯ ಸಿ. ರಮೇಶ್, ರೂಪಾ, ಬಿಜೆಪಿ ಬಿಎಲ್‌ಎಗಳಾದ ರಾಮಕೃಷ್ಣ, ಯೋಗೇಶ್ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ ಅವರ ಆಪ್ತ ಲೋಕೇಶ್ ವಿರುದ್ಧ ಜಯನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶಿವಾಜಿನಗರ – (ಒಂದೇ ಕುಟುಂಬದ 8 ಮತಗಳು ರದ್ದು): ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಹಲಸೂರು ನಿವಾಸಿ ರಫೀ ಮತ್ತು ಅವರ ಕುಟುಂಬದ 8 ಮತಗಳನ್ನು ಮತಪಟ್ಟಿಯಿಂದ ಅಳಿಸಿಹಾಕಲಾಗಿದೆ. ‘ರಫೀ ಮತ್ತು ಅವರ ಕುಟುಂಬದ ಸದಸ್ಯರು ಹಲಸೂರಿನಲ್ಲಿ ವಾಸವಾಗಿಲ್ಲ’ ಎಂದು ಬಿಜೆಪಿ ಬೆಂಬಲಿಗ ರವಿ ಎಂಬಾತ ಸಲ್ಲಿಸಿದ್ದ ಫಾರ್ಮ್-7 ಅರ್ಜಿಯನ್ನಾಧರಿಸಿ, ರಫೀ ಮತ್ತು ಅವರ ಕುಟುಂಬಸ್ಥರಾದ ಸುಹೈಲ್, ನಾಝಿಯಾ ಬಾನು, ಹಾಜಿರ ಬೇಗಂ, ಸಾಯಿರಾ ಬಾನು, ಮಲ್ಲಿಕಾ ಬೇಗಂ, ತಸ್ಲೀಮ ಬಾನು ಹಾಗೂ ನಯೀಮ ಬಾನು ಅವರ ಮತಗಳನ್ನು ಡಿಲೀಟ್ ಮಾಡಲಾಗಿದೆ. ವಿಚಾರ ತಿಳಿದ ನಂತರ, ರಫೀ ಅವರು ಸ್ಥಳೀಯ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ನಿವಾಸದ ದಾಖಲೆಗಳನ್ನು ಸಲ್ಲಿಸಿ ಮರುಸೇರ್ಪಡೆಗೆ ಮನವಿ ಮಾಡಿದ್ದಾರೆ. ಪ್ರಸ್ತುತ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಮಲ್ಲೇಶ್ವರಂ (ವಾರ್ಡ್ 64) – ವೈಯಾಲಿಕಾವಲ್ ಠಾಣೆ ಎಫ್‌ಐಆರ್: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 64ರಲ್ಲಿ ಬಿಜೆಪಿ ಬಿಎಲ್‌ಎ ಜಿ.ಎಸ್. ವಸಂತಲಕ್ಷ್ಮಿ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಹಲವು ವರ್ಷಗಳಿಂದ ವಾಸವಿರುವ ಕಾನೂನುಬದ್ಧ ಮತದಾರರನ್ನು ‘ಗೈರುಹಾಜರಿದ್ದಾರೆ’ ಅಥವಾ ‘ಶಾಶ್ವತವಾಗಿ ಬೇರೆಡೆಗೆ ಹೋಗಿದ್ದಾರೆ’ ಎಂದು ಸುಳ್ಳು ಮಾಹಿತಿ ನೀಡಿ ಒಟ್ಟು 778 ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿದ್ದರು.
ಇವುಗಳಲ್ಲಿ ಮತಗಟ್ಟೆ ಸಂಖ್ಯೆ 157ರಲ್ಲಿ 122, ಮತಗಟ್ಟೆ 155ರಲ್ಲಿ 233, ಮತಗಟ್ಟೆ 156ರಲ್ಲಿ 28, ಮತಗಟ್ಟೆ 158ರಲ್ಲಿ 5, ಮತಗಟ್ಟೆ 154ರಲ್ಲಿ 47, ಮತಗಟ್ಟೆ 205ರಲ್ಲಿ 171, ಮತಗಟ್ಟೆ 203ರಲ್ಲಿ 88 ಹಾಗೂ ಮತಗಟ್ಟೆ 153ರಲ್ಲಿ 14 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಬಹುತೇಕ ಅರ್ಜಿಗಳು ಜಿ.ಎಸ್. ವಸಂತಲಕ್ಷ್ಮಿ ಹೆಸರಿನಲ್ಲಿದ್ದರೂ, ಅರ್ಜಿಗಳಲ್ಲಿರುವ ಸಹಿಗಳಲ್ಲಿ ಭಾರಿ ವ್ಯತ್ಯಾಸಗಳಿದ್ದು, ನಕಲಿ ಸಹಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಲ್ಲೇಶ್ವರಂ ಕ್ಷೇತ್ರದ ಪಾರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ಅವರು ಫಾರ್ಮ್-7 ದುರ್ಬಳಕೆ ಕುರಿತು ಅಕ್ಟೋಬರ್ 2ರಂದು ನೀಡಿದ ದೂರಿನ ಮೇರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಲ್ಲೇಶ್ವರಂ (ವಾರ್ಡ್ 45) – ಯಶವಂತಪುರ ಠಾಣೆ ಎಫ್‌ಐಆರ್: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.45ರ ಮತಗಟ್ಟೆ ಸಂಖ್ಯೆ 68 (ಸುಭೇದಾರ್ ಪಾಳ್ಯ) ಪ್ರದೇಶದಲ್ಲೂ ಫಾರ್ಮ್-7 ಅಕ್ರಮ ನಡೆದಿದೆ. BLA-2 ಆಗಿದ್ದ ದೀಪಕ್ ಸಿಂಗ್ ಎಂಬುವವರು 136 ಅರ್ಜಿಗಳನ್ನು ಸಲ್ಲಿಸಿ ಮತದಾರರು ಗೈರುಹಾಜರಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅರ್ಜಿಗಳಲ್ಲಿನ ಸಹಿ ಮತ್ತು ಮಾಹಿತಿಯಲ್ಲಿ ಭಾರಿ ಏರುಪೇರಿದ್ದು, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಸಂಚು ನಡೆಸಲಾಗಿದೆ ಎಂದು ಅನೂಪ್ ಅಯ್ಯಂಗಾರ್ ಆರೋಪಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಾಗಿದೆ.
ನಾನಾ ಜಿಲ್ಲೆಗಳಿಗೂ ವ್ಯಾಪಿಸಿದೆ ಫಾರ್ಮ್-7 ಅಕ್ರಮ
ಬಳ್ಳಾರಿ (ಬ್ರೂಸ್ ಪೇಟೆ ಠಾಣೆ ಎಫ್‌ಐಆರ್): ಬಳ್ಳಾರಿಯಲ್ಲಿ ಬಿಜೆಪಿ BLA-1 ಶ್ರೀನಿವಾಸ ಮೋತ್ಕರ್ ಎಂಬುವವರು ಬರೋಬ್ಬರಿ 7,561 ಮತದಾರರ ಹೆಸರುಗಳನ್ನು ಅಳಿಸಲು ಮತ್ತು ಪರಿಷ್ಕರಿಸಲು ಫಾರ್ಮ್-7 ಅರ್ಜಿ ಸಲ್ಲಿಸಿದ್ದಾರೆ. ಇವುಗಳಲ್ಲಿ ಬಹುತೇಕ ಅರ್ಜಿಗಳನ್ನು ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಬೆಂಬಲಿತ ಮತದಾರರ ವಿರುದ್ಧ ಸಲ್ಲಿಸಲಾಗಿದೆ. ಈ ಬಗ್ಗೆ, ಕಾಂಗ್ರೆಸ್ BLA ಗೌತಮ್ ಅವರು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ಠಾಣೆಗೆ ಭೇಟಿ ನೀಡಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ, ಎಫ್‌ಐಆರ್ ದಾಖಲಾಗಿದೆ.
ಬೆಳಗಾವಿ ದಕ್ಷಿಣ: ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಬಿಜೆಪಿ ಅಭಯ್ ಪಾಟೀಲ್ ಅವರು 2,598 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಚುನಾವಣಾಧಿಕಾರಿಗೆ ನೇರವಾಗಿ ಪತ್ರ ಬರೆದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಕಲಿ ದಾಖಲೆ ಬಳಸಿ ಮತದಾರರನ್ನು ಅಳಿಸಲು ಶಾಸಕರು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಂತೆಯೇ, ಬೆಳಗಾವಿಯಲ್ಲಿಯೇ ಬಿಜೆಪಿ ಬೆಂಬಲಿಗರಾದ ಶಂಕರ್ ಬೀರಪ್ಪ ನಾಯಕ್, ಪ್ರಶಾಂತ್ ದೀಪಕ್, ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್ ಮತ್ತು ಇತರರು 198 ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ನಕಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮೀರ್‌ಸಾಬ್ ಸನದಿ ಅವರು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಈ ಎಲ್ಲ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 318(4), 336(3), 336(4), 353, 61(2), 3(5), 3(7), 192 ಮತ್ತು 190ರ ಅಡಿ ಪ್ರಕರಣ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ (ಬೆಳ್ತಂಗಡಿ ಮತ್ತು ಪುತ್ತೂರು): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಯಾರದ್ದೋ ಹೆಸರಿನಲ್ಲಿ ಬಿಜೆಪಿಗರು ಅಕ್ರಮವಾಗಿ ಫಾರ್ಮ್-7 ಅರ್ಜಿ ಸಲ್ಲಿಸಿದ್ದಾರೆ. ಬಳ್ತಂಗಡಿಯ ಸಂಜಯನಗರ ವಾರ್ಡ್ ಸಂಖ್ಯೆ-122ರ ನಿವಾಸಿಗಳಾದ ಖಾದ್ರಿ ಬಿ, ಫೆಲಿಕ್ಸ್ ಡಿಸೋಜ, ರೋಷನ್, ಡಲ್ವಿನ್ ಬಿಜು, ಅಬ್ದುಲ್ ಮಜೀದ್ ಬಂಗಾಡಿ, ಹಂಝ ಇರ್ಫಾನ್ ಬಿ ಹಾಗೂ ನಿಜಾಮುದ್ದಿನ್ ಹೆಸರಿನಲ್ಲಿ ಬಿಜೆಪಿಗರು ಅಕ್ರಮವಾಗಿ ಫಾರ್ಮ್-7 ಅರ್ಜಿ ಸಲ್ಲಿಸಿದ್ದರು ಎಂಬುದು ಈಗ ಬಟಾಬಯಲಾಗಿದೆ. ಈ ಎಲ್ಲರೂ ನಮಗೆ ಗೊತ್ತಿಲ್ಲದೆಯೇ, ತಮ್ಮ ಹೆಸರು ಬಳಸಿ ನಕಲಿ ಅರ್ಜಿ ಹಾಕಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಬಳಿಕ, SDPI ಬೆಳ್ತಂಗಡಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದ ನಿಯೋಗ ತಹಶೀಲ್ದಾರರಿಗೆ ದೂರು ನೀಡಿ, BLA ಪದ್ಮ ಕುಮಾರ್ ಕುಲಾಲ್ ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಇದೇ ವೇಳೆ, ಬೆಳ್ತಂಗಡಿಯಲ್ಲೂ ಮತದಾರರ ಅಳಿಸುವಿಕೆಗೆ ಬಿಜೆಪಿಗರು ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಅವರ ತಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಬೆಳ್ತಂಗಡಿಯ ಒಂದೇ ಮತಗಟ್ಟೆಯಲ್ಲಿ 275 ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಅಳಿಸಲು ಪುತ್ತೂರು ಬಿಜೆಪಿ ಕಚೇರಿಯಿಂದ ನೇರವಾಗಿ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ನಿಯಮಿತ ಫಾರ್ಮ್-7 ಬದಲು ಬಿಜೆಪಿ ಲೆಟರ್‌ಹೆಡ್ ಬಳಸಿ ಪಟ್ಟಿಯಿಂದ ಹೆಸರು ತೆಗೆಯಲು ಕೋರಿರುವುದು ‘ಪ್ರಜಾಪ್ರಭುತ್ವದ ಮಾರಣಹೋಮ’ ಎಂದು ಶಾಹುಲ್ ಹಮೀದ್ ದೂರಿದ್ದಾರೆ.
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಸಬಾ ಹೋಬಳಿ ಸುರಳಿ ಬಾಳೆಬೈಲು ಗ್ರಾಮದ ಭಾಗ ಸಂಖ್ಯೆ 186ರಲ್ಲಿ 81 ಮತದಾರರನ್ನು ‘ಗ್ರಾಮದಲ್ಲಿ ವಾಸವಾಗಿಲ್ಲ’ ಎಂದು ಸುಳ್ಳು ಹೇಳಿ, ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸತೀಶ್ ಎಂಬಾತ ತಹಶೀಲ್ದಾರ್‌ಗೆ ಸಾಧಾರಣ ಪತ್ರ ಬರೆದು, ಮತದಾರರನ್ನು ಅಳಿಸಲು ಒತ್ತಾಯಿಸಿದ್ದಾರೆ. ಈ 81 ಹೆಸರುಗಳಲ್ಲಿ ಬರೋಬ್ಬರಿ **78 ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಚುನಾವಣಾ ನಿಯಮಗಳ ಪ್ರಕಾರ ಪ್ರತಿಯೊಬ್ಬ ಮತದಾರನ ಹೆಸರು ತೆರವಿಗೂ ಪ್ರತ್ಯೇಕ ‘ಫಾರ್ಮ್-7’ ಸಲ್ಲಿಸುವುದು ಕಡ್ಡಾಯ. ಆದರೆ, ಕೇವಲ ಬಿಳಿ ಹಾಳೆಯಲ್ಲಿ ಬರೆದ ಪತ್ರವನ್ನು ಸ್ವೀಕರಿಸಿದ ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಅವರು, ಅದನ್ನು ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರಿಗೆ (RI) ಕಳುಹಿಸಿ, 81 ಜನರ ಪಟ್ಟಿಯ ಸ್ಥಳ ಪರಿಶೀಲನೆ ನಡೆಸಿ ತುರ್ತು ವರದಿ ನೀಡುವಂತೆ ಆದೇಶಿಸಿದ್ದು, ಆಡಳಿತ ಯಂತ್ರವೇ ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪಕ್ಕೆ ಕಾರಣವಾಗಿದೆ.
ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ ಪುನಃ ಭುಗಿಲೆಬ್ಬಿಸಿದ ವಿವಾದ
ಕಾನೂನಿನ ಪ್ರಕಾರ, ಒಬ್ಬ ಬಿಎಲ್‌ಎಗೆ ದಿನಕ್ಕೆ 10 ಫಾರ್ಮ್-7ಅನ್ನು, ಇಡೀ ಪ್ರಕ್ರಿಯೆಯಲ್ಲಿ ಗರಿಷ್ಠ 30 ಫಾರ್ಮ್-7ಗಳನ್ನು ಮಾತ್ರವೇ ಸಲ್ಲಿಸಲು ಅವಕಾಶವಿದೆ. ಹಾಗಿದ್ದರೂ, ಹಲವೆಡೆ ಬಿಜೆಪಿ ಬಿಎಲ್‌ಎಗಳು ಅಕ್ರಮವಾಗಿ ನೂರಾರು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚುನಾವಣಾ ಕಚೇರಿಯಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದರು. ಆ ಬಳಿಕ, ಅಕ್ರಮವಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಮತದಾರರ ಹೆಸರು ಅಳಿಸಲು ವ್ಯವಸ್ಥಿತವಾಗಿ ಮುಂಚಿತವಾಗಿಯೇ ಮುದ್ರಿಸಲಾದ (pre-printed) ಫಾರ್ಮ್-7 ಅರ್ಜಿಗಳನ್ನು ಬಳಸಿಕೊಂಡಿವೆ. ನಕಲಿ ಅರ್ಜಿಗಳು ಮತ್ತು ಫೋರ್ಜರಿ ಮಾಡಲಾದ ಸಹಿಗಳನ್ನು ಬಳಸಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಗಂಭೀರ ಸಂಚು ರೂಪಿಸಿದೆ” ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, “ಆರ್‌ಎಸ್‌ಎಸ್ ಕಚೇರಿಯಲ್ಲೇ ಪೂರ್ವಮುದ್ರಿತ ಫಾರ್ಮ್-7 ಅರ್ಜಿಗಳು ಮುದ್ರಣಗೊಳ್ಳುತ್ತಿವೆ. ಅಲ್ಲಿಂದ ನೇರವಾಗಿ ಬಿಜೆಪಿಯವರ ಕೈಗೆ ತಲುಪುತ್ತಿವೆ. ತಮ್ಮ ನರಸಿಂಹರಾಜ ಕ್ಷೇತ್ರ ಒಂದರಲ್ಲೇ ಸುಮಾರು 10,000 ಮತದಾರರ ಹೆಸರುಗಳನ್ನು ಅಳಿಸಲು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕ್ಷೇತ್ರ ಅಥವಾ ವಾರ್ಡ್‌ಗೆ ಯಾವುದೇ ಸಂಬಂಧವಿಲ್ಲದ ಹೊರಗಿನವರು ಪ್ರತಿ ಮತಗಟ್ಟೆಯಲ್ಲೂ 100ರಿಂದ 150 ಅರ್ಜಿಗಳನ್ನು ಹಾಕಿದ್ದಾರೆ. ಚಿಕ್ಕಮಗಳೂರಿನ ನಿವಾಸಿಗಳನ್ನು ತಂದು ನರಸಿಂಹರಾಜ ಕ್ಷೇತ್ರದ ಮತದಾರರನ್ನಾಗಿ ಸೇರ್ಪಡೆಗೊಳಿಸಿ, ತಮಗೆ ಬೇಕಾದವರನ್ನು ಪಟ್ಟಿಗೆ ಸೇರಿಸಿ, ಸ್ಥಳೀಯ ಮುಸ್ಲಿಂ ಮತ್ತು ದಲಿತ ಮತದಾರರನ್ನು ಕೈಬಿಡಲು ಆರ್‌ಎಸ್‌ಎಸ್ ನಿರ್ದೇಶನದಂತೆ ಸಂಚು ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ನಡುವೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಬೆಂಬಲಿತ ಏಜೆಂಟರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಸುಮ್ಮನೆ ಯಾವುದೇ ಸೆಕ್ಷನ್‌ಗಳನ್ನು ಹಾಕುತ್ತಿಲ್ಲ. ಬದುಕಿರುವ ನಾಗರಿಕರನ್ನೇ ‘ಮೃತಪಟ್ಟಿದ್ದಾರೆ’ ಎಂದು ಸುಳ್ಳು ಮಾಹಿತಿ ನೀಡಿ ಬಿಜೆಪಿ ಕಾರ್ಯಕರ್ತರು ಫಾರ್ಮ್-7 ಸಲ್ಲಿಸುತ್ತಿದ್ದಾರೆ. ಆದರೆ, ‘ತಾನು ಮೃತಪಟ್ಟಿಲ್ಲ, ಜೀವಂತವಾಗಿದ್ದೇನೆ’ ಎಂದು ಸ್ವತಃ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದವರಿಗೆ ಸಮ್ಮಾನ ಅಥವಾ ‘ಕರ್ನಾಟಕ ರತ್ನ’ ಕೊಡಲು ಸಾಧ್ಯವೇ? ಅವರೆಲ್ಲರಿಗೂ ಕಾನೂನಿನಡಿ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆಯಾಗಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಬೀದರ್, ಬಬಲೇಶ್ವರ, ಚಿಕ್ಕಮಗಳೂರು, ಬೆಳಗಾವಿಯಲ್ಲಿ ಅಕ್ರಮವಾಗಿ ಫಾರ್ಮ್-7 ಸಲ್ಲಿಸಿ, ಮತದಾರರನ್ನು ಅಳಿಸುವ ಕುತಂತ್ರ ಹೆಣೆದವರ ಬಗ್ಗೆಯೂ ಬಿಜೆಪಿಗರು ಚುನಾವಣಾ ಆಯೋಗಕ್ಕೆ ತಿಳಿಸಲಿ. ಬಿಜೆಪಿ ಕಾರ್ಯಕರ್ತರಿಗೆ ಪೂರ್ವಮುದ್ರಿತ ಫಾರ್ಮ್-7 ಎಲ್ಲಿಂದ ಸಿಕ್ಕಿತು ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಬಿಜೆಪಿ-ಜೆಡಿಎಸ್‌ಗೆ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಇನ್ನು, ಇದೇ ವಿಚಾರವಾಗಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುಖ್ಯಚುನಾವಣಾಧಿಕಾರಿ ಅನ್ಬುಕುಮಾರ್, “ಯಾರಾದರೂ ಫಾರ್ಮ್-7 ಅರ್ಜಿ ಅಥವಾ ಆಕ್ಷೇಪಣೆ ಸಲ್ಲಿಸಿದ ತಕ್ಷಣಕ್ಕೇ ಆಕ್ಷೇಪಣೆಗೆ ಒಳಗಾದ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ. ಕೇವಲ ಅರ್ಜಿಯ ಆಧಾರದ ಮೇಲೆ ಈವರೆಗೆ ರಾಜ್ಯದಲ್ಲಿ ಯಾರೊಬ್ಬ ಅರ್ಹ ಮತದಾರನ ಹೆಸರನ್ನೂ ಅಳಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“1960ರ ಮತದಾರರ ನೋಂದಣಿ ನಿಯಮಾವಳಿಯ ಸೆಕ್ಷನ್ 16 ರಿಂದ 20ರ ಪ್ರಕಾರ, ಫಾರ್ಮ್-7 ಸ್ವೀಕೃತವಾದಾಗ ಮತದಾರರ ನೋಂದಣಿ ಅಧಿಕಾರಿಗಳು (ERO) ಅರ್ಜಿದಾರ (ಆಕ್ಷೇಪಣೆ ಸಲ್ಲಿಸಿದವರು) ಮತ್ತು ಸಂಬಂಧಪಟ್ಟ ಮತದಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಬೇಕು. ಇಬ್ಬರನ್ನೂ ವಿಚಾರಣೆಗೆ ಕರೆದು, ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳನ್ನು ತನಿಖೆ ಮಾಡಿದ ನಂತರವಷ್ಟೇ ಇಆರ್‌ಒ ಅಧಿಕಾರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ಫಾರ್ಮ್-7 ಅರ್ಜಿಯಲ್ಲೂ ಅರ್ಜಿದಾರರು ನೀಡುವ ಮಾಹಿತಿಯು ಸತ್ಯವೆಂದು ನಮೂದಿಸುವ ಸ್ವಯಂ-ಘೋಷಣೆ ಇರುತ್ತದೆ. ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ನಕಲಿ ಮಾಹಿತಿ ಅಥವಾ ಸುಳ್ಳು ಸಹಿ ಬಳಸಿ ಆಕ್ಷೇಪಣೆ ಸಲ್ಲಿಸಿರುವುದು ಕಂಡುಬಂದರೆ, ಅಂತಹ ಅರ್ಜಿ ಸಲ್ಲಿಸಿದವರ ವಿರುದ್ಧ ಇಆರ್‌ಒಗಳು ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ” ಎಂದು ವಿವರಿಸಿದ್ದಾರೆ.



