ಬಡವರು, ನಿರ್ಗತಿಕರು ಹಾಗೂ ಪ್ರತಿಭಾವಂತರಿಗೆ ನೆರವಾಗುವ ನಿಸ್ವಾರ್ಥ ಸಮಾಜಮುಖಿ ಸೇವೆಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ರಾಜಶೇಖರ ಹಿರೇಮಠ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ದಲಾಲ್ ಫಾರ್ಮ್ ಹೌಸ್‌ನಲ್ಲಿ ನೂತನ ರಬಕವಿ-ಬನಹಟ್ಟಿ ತಾಲೂಕು ಲಯನ್ಸ್ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಶಿಬಿರ, ಶೈಕ್ಷಣಿಕ ದತ್ತು ಸ್ವೀಕಾರ, ಉದ್ಯೋಗ ಮೇಳ ಸೇರಿದಂತೆ ಜನಪರ ಸೇವಾ ಕಾರ್ಯಗಳಲ್ಲಿ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸತ್ಯ ಸಾಯಿ ಸಂಸ್ಥೆಯ ಸಂಸ್ಥಾಪಕ ಶಿವಲಿಂಗ ಢವಳೇಶ್ವರ ಮಾತನಾಡಿ, ಸಂಘಟನೆಯಲ್ಲಿ ಒಗ್ಗಟ್ಟು, ನಿಸ್ವಾರ್ಥ ಸೇವೆ ಹಾಗೂ ಉತ್ತಮ ಯೋಜನೆಗಳು ಮುಖ್ಯವೆಂದರು. ಹಿಂದಿನ ಜಿಲ್ಲಾ ಗವರ್ನರ್ ಮೋನಿಕಾ ಸಾವಂತ್ ಅವರು, ಕ್ಲಬ್‌ಗಳು ಸಭೆಗಳಿಗೆ ಸೀಮಿತವಾಗದೆ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಬಸವರಾಜ ದಲಾಲ್ ಮಾತನಾಡಿ, ತಮ್ಮ ಅವಧಿಯಲ್ಲಿ ಸಂಸ್ಕೃತಿ, ಕ್ರೀಡೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿನೂತನ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜ್ಞಾನ ಸಂಜೀವಿನಿ ಕಿಟ್‌ಗಳನ್ನು ವಿತರಿಸಲಾಯಿತು. ಹಲವು ಗಣ್ಯರು ಹಾಗೂ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.



