ಬಸವ ಜಯಂತಿ ವಿಶೇಷ | ಕಾಯಕ ಚಳವಳಿ ರೂಪಿಸಿದ ನಾಯಕ ಬಸವಣ್ಣ

Date:

ಬಸವಣ್ಣ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ದೇಶ ಅಷ್ಟೇ ಅಲ್ಲ, ವಿಶ್ವವೇ ಸಮಾನತೆ ನೆಲೆಗಟ್ಟಿನಲ್ಲಿ ‌ಸಾಗಬಹುದು.ಆದರೆ, ಅವರನ್ನು ಅರ್ಥಮಾಡಿಕೊಳ್ಳದ ಮೂಲಭೂತವಾದಿಗಳು ಅವರ ಹೆಸರನ್ನು ಮಾತ್ರ ಯತೇಚ್ಛವಾಗಿ ಬಳಸುವ ಮೂಲಕ ಬಸವಣ್ಣನವರ ನಾಮದ ಬಲವಷ್ಟೇ ಮುಖ್ಯವಾಗಿಸಿ ಅವರ ತಾತ್ವಿಕ ಚಿಂತನೆಗಳಿಗೆ ಮನ್ನಣೆ ಇಲ್ಲದಂತೆ ಮಾಡಿರುವುದು ಈ ಕಾಲಘಟ್ಟದ ವಿಪರ್ಯಾಸ.

ನಾವು ಬಸವಣ್ಣನವರನ್ನು ಒಬ್ಬ ಆಧ್ಯಾತ್ಮ ಗುರು ಎಂದಷ್ಟೇ ಗುರುತಿಸಲು ಮಾತ್ರ ಸಾಧ್ಯವಾಗಿದೆ. ಆದರೆ, ಅವರೊಬ್ಬ ಸಮೂಹ ‌ಸಂಘಟಕ, ಸಾಮಾಜಿಕ ಚಿಂತಕ, ಆರ್ಥಿಕ ತಜ್ಞ, ವೈಜ್ಞಾನಿಕ ಪ್ರಜ್ಞಾವಂತ ಕೂಡ ಹೌದು ಎನ್ನುವುದು ಮತ್ತೆ ಮತ್ತೆ ಮನಗಾಣಬೇಕಾಗಿದೆ.

12ನೇ ಶತಮಾನದಲ್ಲಿ ನಡೆದಿರುವ ವಚನಕಾರರ ಚಳವಳಿಯ ಸ್ವರೂಪವನ್ನು ಅನೇಕರು ಅನೇಕ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಆದರೆ, ವಚನಕಾರರ ಕಾಲಘಟ್ಟದ ಚಳವಳಿಯ ಮೂಲ ಉದ್ದೇಶಗಳನ್ನು ನೋಡಿದಾಗ ವಿಭಿನ್ನ ಆಯಾಮಗಳು ಕಂಡು ಬರುತ್ತವೆ. ಧರ್ಮಗಳು ನಿಷ್ಕ್ರಿಯಗೊಂಡು ಎಲ್ಲೆಡೆ ಹಿಂಸೆ ತಾಂಡವಾಡುತ್ತಿತ್ತು. ರಾಜ್ಯಶಕ್ತಿಗಳ ಅಟ್ಟಹಾಸ, ಆರ್ಥಿಕ, ಸಾಮಾಜಿಕ ಅಸಮಾನತೆ ಹಾಗೂ ನಿರಂತರ ಶೋಷಣೆಗೆ ಒಳಗಾಗಿದ್ದ ಕಾಯಕ ಜೀವಿಗಳ ಬದುಕು ದುರ್ಬರವಾಗಿತ್ತು. ಇಂಥ ವಿಷಮ ಪರಿಸ್ಥಿತಿಯ ಕಾಲಮಾನದಲ್ಲಿ ಜನಿಸಿದ ಬಸವಣ್ಣನವರು ಧರ್ಮ ‌ಸ್ಥಾಪಿಸಿದರು ಎಂದು ಸ್ಪಷ್ಟವಾಗಿ ಹೇಳುತ್ತೇವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೌದು, ಆದರೆ ಹನ್ನೆರಡನೇ ಶತಮಾನಕ್ಕಿಂತ ಮುಂಚೆಯೂ ಹಲವು ಧರ್ಮಗಳು ವೈದಿಕತೆಯ ಹಿಂಸೆಯಿಂದ ದುರ್ಬಲಗೊಂಡಿದ್ದವು. ವರ್ಣಾಶ್ರಮ ಪದ್ಧತಿ, ಅಸಮಾನತೆ ಹಾಗೇ ಢಾಳಾಗಿತ್ತು. ಮತ್ತೆ ಬಸವಣ್ಣ ಕೇವಲ ಧರ್ಮ ಸ್ಥಾಪನೆಗೆ ಮಾತ್ರ ಹುಟ್ಟಿದನೆಂದು, ಆತನ್ನು ಬರೀ ಧಾರ್ಮಿಕ ಚೌಕಟ್ಟಿನಲ್ಲಿಯೇ ಹಿಡಿದಿಟ್ಟು ಇಡೀ ಶರಣರ ಚಳುವಳಿಯನ್ನು ಗುರುತಿಸಲು ಸಾಧ್ಯವಿಲ್ಲ. ಬಸವಣ್ಣನವರು ಧರ್ಮ ಅಷ್ಟೇ ಸ್ಥಾಪಿಸಲಿಲ್ಲ. ಅಂದಿನ ದುರಿತ ಕಾಲದಲ್ಲಿ ಹಲವು ಸ್ತರದ ಕಾಯಕ ಜೀವಿಗಳು ಹಲವು ಶೋಷಣೆಗೆ ಒಳಪಟ್ಟಿದ್ದರು. ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸಮಾನತೆ ಹಕ್ಕು ಕೆಲವರಿಗೆ ಮಾತ್ರ ಇತ್ತು. ಕೆಳಸ್ತರದ ಕಾಯಕ ಜೀವಿಗಳ ಬದುಕು ಅಸಹಾಯಕತೆಗೆ ಸಿಲುಕಿತ್ತು. ಇಂಥ ಜಾತಿಯತೆ, ಅಸಮಾನತೆ, ಸರ್ವಾಧಿಕಾರಿ ಧೋರಣೆ ಸಮಾಜದಿಂದ ಹೊರಬಂದು, ಸರ್ವಸ್ವಾತಂತ್ರ್ಯ ಸಮಾಜ ಕಟ್ಟುವ ಮಹಾದಾಸೆ ಬಸವಣ್ಣನವರಿಗೆ ಇತ್ತು. ಹೀಗಾಗಿ ಎಲ್ಲರನ್ನೂ ಒಗ್ಗೂಡಿಸಬೇಕಾದರೆ ‘ಕಾಯಕ’ ಸಿದ್ದಾಂತ ಅಸ್ತ್ರವಾಗಿತ್ತು. ಅದನ್ನು ಮೊದಲಿಗೆ ರೂಪಿಸಿದವರು ಶ್ರೇಷ್ಠ ಚಿಂತಕ ಬಸವಣ್ಣನವರು.

ಬಸವಣ್ಣ ಒಬ್ಬ ಸಾಮಾಜಿಕ ಹೋರಾಟಗಾರ ಎಂದು ನಾವು ಹೇಳಬೇಕಾಗಿದೆ. ಬಸವಣ್ಣನವರು ಹುಟ್ಟು ಹೋರಾಟಗಾರರು, ವರ್ಣ, ವರ್ಗ, ಲಿಂಗ ಬೇಧ ತಾರತಮ್ಯ ಹಾಗೂ ಸಾಮಾಜಿಕ ಅನ್ಯಾಯವನ್ನು ತುಂಬಾ ಹತ್ತಿರದಿಂದ ಅರಿತುಕೊಂಡು “ಏನಯ್ಯಾ ವಿಪ್ರರು ನುಡಿದಂತೆ ನಡೆಯರು ಇದೆಂತಯ್ಯಾ? ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ” ಎಂದು ಚಿಕ್ಕವರಿದ್ದಾಗಲೇ ಬ್ರಾಹ್ಮಣ್ಯವನ್ನು ತ್ಯಾಜಿಸಿ ಪಕ್ಕದ ಕೂಡಲ ಸಂಗಮಕ್ಕೆ ತೆರಳಿದವರು. ವೈದಿಕ ವ್ಯವಸ್ಥೆಯಿಂದ ಶೂದ್ರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಶಾಶ್ವತವಾಗಿ ದುರ್ಬಲರಾಗಿ ಉಳಿಯುವಂಥ ಪಾಳೆಗಾರಿಕೆ ದುಸ್ಥಿತಿ ಒಂದಾದರೆ, ವೃತ್ತಿ ಅವಲಂಬಿತ ಕಾಯಕ ಜೀವಿಗಳ ಮೇಲೆ ತೆರಿಗೆ ಸುಲಿಯುವ ರಾಜಾಶ್ರಯ ಮನೆತದವರ ದಬ್ಬಾಳಿಕೆ ಇನ್ನೊಂದು ಕಡೆ. ಸಮಾಜದ ವರ್ಣ, ವರ್ಗ ಅಸ್ಪೃಶ್ಯತೆ, ಲಿಂಗ ಬೇಧ ತಾರತಮ್ಯ ಹೋಗಲಾಡಿಸಲು ಬಸವಣ್ಣನವರು ಸಿಡಿದೇಳುತ್ತಾರೆ. ಎಲ್ಲ ಕಾಯಕ ಶರಣರು ಬೆನ್ನಿಗೆ ನಿಂತು ಜನ ಸಮೂಹ‌ವನ್ನು ಒಗ್ಗೂಡಿಸಿದರು.

ಇಲ್ಲಿ ಹಲವು ಮಹತ್ವದ ಸತ್ಯ ಸಂಗತಿಗಳನ್ನು ಹೇಳಲೇಬೇಕು. ಇಡೀ ದಕ್ಷಿಣ ಭಾರತದಲ್ಲಿ ಯಾವುದೇ ಧರ್ಮ ಹುಟ್ಟು ಪಡೆಯಲಿಲ್ಲ. ವೈದಿಕ, ಶೈವ, ಬೌದ್ಧ, ಜೈನ ಧರ್ಮಗಳು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹಬ್ಬಿದರೂ ಕೂಡ ಅವುಗಳ ಉಗಮಸ್ಥಾನ ಉತ್ತರ ಭಾರತವಾಗಿತ್ತು. ದಕ್ಷಿಣ ಭಾರತದವರು ವಲಸೆ ಧರ್ಮಗಳನ್ನೇ ಅನುಸರಿಸಿಕೊಂಡು ಹೋಗುವ ಅಂದಿನ ಕಾಲಘಟ್ಟದಲ್ಲಿ ಮೊದಲು ಹುಟ್ಟಿದ್ದು ‘ಲಿಂಗಾಯತ ಧರ್ಮ’ ಅದನ್ನು ನಾವು ಬಸವ ಧರ್ಮ, ವಚನ ಧರ್ಮ ಅಥವಾ ಶರಣ ಧರ್ಮ ಎಂತಲೂ ಕರೆಯುತ್ತೇವೆ . ದೇಶದ ಮೊದಲ ಏಕದೇವೋಪಾಸನೆ ಧರ್ಮ ಲಿಂಗಾಯತ, ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾಪಿತ ಧರ್ಮ ಹುಟ್ಟು ಪಡೆದಿದ್ದು ಕನ್ನಡ ನೆಲದಲ್ಲಿ ಎನ್ನುವುದು ಇನ್ನೊಂದು ಹೆಮ್ಮೆ. ಕನ್ನಡ ನೆಲದಲ್ಲಿ ಒಂದು ಧರ್ಮ ‌ಸ್ಥಾಪಿಸಿ ಕನ್ನಡ ಧರ್ಮ ಹಾಗೂ ಸಾಹಿತ್ಯ ಚಳುವಳಿಯನ್ನು ವಿಶ್ವ ಮನ್ನಣೆಗೆ ಗುರುತಿಸಿ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಶ್ರೇಯಸ್ಸು 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ.

ರಾಜ್ಯಶಕ್ತಿಗಳ ಕೌರ್ಯತೆ ವಿರುದ್ಧ ಸಿಡಿದೆದ್ದು ಚಳವಳಿ ರೂಪಿಸುವುದು ಅಷ್ಟು ಸಾಮಾನ್ಯ ಸಂಗತಿ ಆಗಿರಲಿಲ್ಲ. ಆದರೆ ಜಾತಿ – ವರ್ಗ – ವರ್ಣ – ಲಿಂಗಬೇಧವಿಲ್ಲದೇ ಶೋಷಣೆ ರಹಿತವಾದ ಸಮತೆಯ ಸಮಾಜ ಕಟ್ಟುವುದು ಬಸವಣ್ಣನವರಿಗೆ ಅಗತ್ಯವಾಗಿತ್ತು. ಹೀಗಾಗಿ ಶ್ರಮಜೀವಿಗಳನ್ನು ಸಂಘಟಿಸಿ ಶರಣ ಚಳವಳಿ ಕಟ್ಪುವ ಮೂಲಕ ಮೊದಲ ಸಮೂಹ ನಾಯಕತ್ವದ ಪ್ರಜ್ಞೆ ಮೂಡಿಸಿದರು. ಹಲವು ಸಮುದಾಯಗಳ ಹಿನ್ನೆಲೆಯಿಂದ ಬಂದ ಕಾಯಕ ಜೀವಿಗಳನ್ನು ಶರಣ ಚಳವಳಿಯಲ್ಲಿ ಒಳಗೊಂಡಿದ್ದರು. ಚಳವಳಿಯ ಮೂಲ ‌ಸಂವಿಧಾನ ರಚನೆಯ ಸಿದ್ಧತೆಗಳಿಗೆ ‘ಅನುಭವ ಮಂಟಪ’ ರೂಪುಗೊಂಡಿತ್ತು.

ಜನಪರ ಚಿಂತನೆಯ ಬ‌ಸವಣ್ಣನವರ ಸಾಮಾಜಿಕ ಕಲ್ಯಾಣ ಕ್ರಾಂತಿಯು ದೇಶ ವಿದೇಶಗಳಿಗೂ ವ್ಯಾಪಿಸಿ ಅನೇಕ ರಾಜರನ್ನು ಆಕರ್ಷಿಸುವಂತೆ ಮಾಡಿತ್ತು. ಹೀಗಾಗಿ ಅನೇಕ ಶರಣರು ತಮ್ಮ ರಾಜ ವೈಭೋಗ, ಸಂಪತ್ತನ್ನು ತೊರೆದು ಕಲ್ಯಾಣ ರಾಜ್ಯದ ಕಡೆ ಪ್ರವೇಶಿಸಿದರು. ಕಾಯಕ ಮಾಡುವ ಮೂಲಕ ಬಸವಣ್ಣನವರ ಸಮಾನತೆ ಸಮಾಜ ಪರಿಕಲ್ಪನೆಗೆ ಬೆನ್ನೆಲುಬಾಗಿ ನಿಂತು ಚಳವಳಿ ಮುನ್ನಡೆಸಿದರು. ಬಸವಣ್ಣನವರು ಕಟ್ಟಿರುವ ಧರ್ಮದಲ್ಲಿ ವರ್ಗ, ವರ್ಣ, ಜಾತಿ, ಕುಲ, ಲಿಂಗಬೇಧಕ್ಕೆ ಅವಕಾಶ ಇರಲಿಲ್ಲ. ಬಸವಣ್ಣನವರು “ಇವನಾರವ ಎನ್ನದೆ ಇವನಮ್ಮವ ಇವನಮ್ಮವ” ಎನ್ನುವ ತಾರತಮ್ಯ ರಹಿತವಾದ ಸಮಾಜ ಕಟ್ಟಲು ಬಯಸಿದರು. ಅದಕ್ಕಾಗಿ ಎಲ್ಲರನ್ನೂ ‘ತನ್ನ ಮನೆಯ ಮಗನೆಂದು’ ಸ್ವೀಕರಿಸಿದರು.

ಬಸವಣ್ಣನವರು ಕೇವಲ ಮನುಷ್ಯರಿಗೆ ಅಷ್ಟೇ ಲೇಸು ಬಯಸಲಿಲ್ಲ. ಜಗತ್ತಿನ ‘ಸಕಲ ಜೀವಾತ್ಮರಿಗೂ ಲೇಸು ಬಯಸು’ ಎನ್ನುವ ಜೀವಪರವಾದ ನಿಲುವು ಮಂಡಿಸಿದರು. ಬದುಕಿಗೆ ಧರ್ಮ ಬೇಕು, ಆದರೆ, ಧರ್ಮವೇ ಬದುಕಾಗಬಾರದು. ದಯ ಇಲ್ಲದಿರುವ ಧರ್ಮವನ್ನು ನಿರಾಕರಿಸಿ ‘ದಯವೇ ಧರ್ಮದ ಮೂಲ’ ಎಂದು ಮಾನವೀಯತೆ ಧರ್ಮ ಅನುಷ್ಠಾನಗೊಳಿಸಿದರು. ಮಾನವೀಯ ಮೌಲ್ಯಗಳ ಕುರಿತು ಧ್ವನಿಯೆತ್ತಿದ ಬಸವಣ್ಣನವರು ನಿಜಕ್ಕೂ ‘ಮಾನವತಾವಾದಿ’ಯಾಗಿ ಕಾಣುತ್ತಾರೆ.

ಹಾಗೆಂದು, ಬಸವಣ್ಣನವರು ಧರ್ಮ – ದೇವರ ವಿರೋಧಿಗಳು ಅಲ್ಲ, ದೇವರನ್ನು ಅವರು ದ್ವೇಷ ಮಾಡಲಿಲ್ಲ, ದೇವರ ಅಸ್ತಿತ್ವವನ್ನು ಅಲ್ಲಗಳೆಯದ ಬಸವಣ್ಣನವರು “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎನ್ನುವ ಮೂಲಕ ಸ್ಥಾವರ ಪೂಜೆಯನ್ನು ನಿರಾಕರಿಸಿದರು. ‘ಎನ್ನ ದೇಹವೇ ದೇವಾಲಯ’ ಎಂದು ನುಡಿದು ದೇವರನ್ನು ‘ದೇವ ಮಂದಿರದಿಂದ ದೇಹ ಮಂದಿರದೊಳಗೆ’ ನೆಲೆಸುವಂತೆ ಮಾಡಿದರು. ಧರ್ಮದ ಉನ್ಮಾದದಿಂದ ಮನುಷ್ಯತ್ವವನ್ನು ಕ್ರೂರವಾಗಿ ತುಳಿಯುವುದು, ಸಾಮಾಜಿಕ ಶೋಷಣೆಗೆ ಸಮ್ಮತಿ ಇಲ್ಲದ ಧರ್ಮ ಸಿದ್ಧಾಂತವನ್ನು ಬಲವಾಗಿ ವಿರೋಧಿಸಿದರು. ಶೋಷಣೆ ಮುಕ್ತ ಸಮಾಜ ರೂಪಿಸಲು ಶರಣ ಸಮೂಹ ಒಕ್ಕೂಟ ಅವಶ್ಯ, ಈ ನಿಟ್ಟಿನಲ್ಲಿ ಸಮಾನತೆ ಮಾರ್ಗವೇ ಸೂಕ್ತ ಎಂದು ಎಲ್ಲರನ್ನೂ ಜಾಗೃತಗೊಳಿಸಿದರು.

ಇಡೀ ಶರಣ ಸಂಕುಲ ಒಗ್ಗೂಡಿತು. ದೀನ, ದಲಿತರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ‌ಶರಣ ಸಂಕುಲವನ್ನು ಕಲ್ಯಾಣ ಕಡೆ ಧಾವಿಸುವಂತೆ ಮಾಡಿದ್ದು ಬಸವಣ್ಣನವರ ಮೇರು ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಸಾಮಾಜಿಕ ಅನುಭಾವ ಚಿಂತನೆಗಳನ್ನು ಚರ್ಚಿಸುವ ‘ಅನುಭವ ಮಂಟಪ’ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಚರ್ಚಿಸುವ ‘ಅರಿವಿನ ಮಹಾಮನೆ’ಯಾಗಿತ್ತು. ಹಲವು ಕಾಯಕ ಸ್ತರಗಳಿಂದ ಬಂದ ಶರಣರು ತಮ್ಮ ವೃತ್ತಿ ಅನುಭವದ ಚಿಂತನೆಗಳನ್ನು ಅನುಭಾವ ರೂಪದಲ್ಲಿ ಅಭಿವ್ಯಕ್ತಿಗೊಳಿಸುವ ವಾಕ್ ಸ್ವಾತಂತ್ರ್ಯ ಅಂದೇ ಪಡೆದುಕೊಂಡಿದ್ದರು. ಬದುಕಿನ ಅನುಭವದ ಚಿಂತನೆಗಳು (ಅನುಭಾವ) ವಚನಗಳಾಗಿ ಮಾರ್ಪಟ್ಟಿವೆ. ಶರಣ ಸಾಹಿತ್ಯದ ವಚನಗಳು ಜೀವನ ಮೌಲ್ಯಗಳಾಗಿ ರೂಪಾಂತರ ಪಡೆದು ಪ್ರಜ್ಞಾವಂತ ಸಮಾಜಕ್ಕೆ ಆದರ್ಶವಾಗಿವೆ.

ರಾಜವಿರೋಧಿ ಹಿನ್ನೆಲೆಯ ವಚನಕಾರರ ಚಳುವಳಿ ನಂತರದ ದಿನಗಳಲ್ಲಿ ಕ್ರಿಯಾತ್ಮಕವಾಗಿ ತೀವ್ರ‌ಸ್ವರೂಪ ಪಡೆಯಿತು. ಇದೆಲ್ಲವೂ ಅರಿತುಕೊಂಡ ಬಿಜ್ಜಳ ವಚನಕಾರರ ಚಳವಳಿ ಹತ್ತಿಕ್ಕಲು ನಿರ್ಧಾರಿಸಿದನು. ಅಂತರ್ಜಾತಿ ವಿವಾಹ, ವೈದಿಕ ಆಚರಣೆ ನಿರಾಕರಣೆ ಸೇರಿದಂತೆ ಅನೇಕ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಕ್ರಾಂತಿಕಾರಿ ಕಾರ್ಯಗಳು ಶರಣರಿಗೆ ಮುಳುವಾಗಿ ಪರಿಣಾಮ ಬೀರಿದವು. ಆದರೆ ಧೃತಿಗೆಡದ ಶರಣರು “ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ; ಲೋಕ ವಿರೋಧಿ ಶರಣನಾರಿಗಂಜುವನಲ್ಲ” ಎಂದು ಕಾಯಕ ಚಳವಳಿ ಮುನ್ನಡೆಸಿ “ನಾಳೆ ಬಪ್ಪುದು ನಮಗಿಂದೆ ಬರಲಿ ಇಂದು ಬಪ್ಪುವುದು ನಮಗೀಗಲೇ ಬರಲಿ ಇದಕಾರರಂಜುವರು ಇದಕಾರಳುಕುವರು” ಎನ್ನುವ ಎದೆಗಾರಿಕೆಯಿಂದ ತಾತ್ವಿಕ ನೆಲೆಗಟ್ಟಿನಲ್ಲಿ ಖಚಿತ ನಿಲುವು ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಶ್ರೀರಾಮನಿಗೊಂದು ಪಶ್ಚಾತ್ತಾಪ ಮತ್ತು ಆತ್ಮವಿಮರ್ಶೆಯ ಪತ್ರ

ನಿಜಕ್ಕೂ ಹನ್ನೆರಡನೇ ಶತಮಾನವು ಕರ್ನಾಟಕ ಇತಿಹಾಸದ ‘ಸುವರ್ಣ ಕಾಲ’ ಎಂದು ಹೇಳಿದರೂ ಅತಿಶಯೋಕ್ತಿಯಲ್ಲ. ಪಾಳೆಗಾರಿಕೆ ವ್ಯವಸ್ಥೆಯಲ್ಲಿ ದುಡಿಯುವ ವರ್ಗ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಶರಣ ಸಮೂಹವೊಂದು ಬಂಡಾಯ ಧೋರಣೆ ರೂಪತಾಳಿ ‌ಸಾಹಿತ್ಯಿಕ ಅಭಿವ್ಯಕ್ತಿ ಜೊತೆಯಲ್ಲಿ ವಚನದ ಸಾಹಿತ್ಯದ ಬೆಳಕು ಮೂಡಿಸಿದ್ದು ಎಂದಿಗೂ ಸ್ಮರಣೆಯಾದದ್ದು. ಅಂದು ಪಾಳೆಗಾರಿಕೆಯಿಂದ ನಲುಗುತ್ತಿದ್ದ ಸಮಾಜ ಇಂದು ಬಂಡವಾಳಶಾಹಿಗಳಿಂದ ನಲುಗುತ್ತಿದೆ. ಎಲ್ಲವೂ ಜಾತಿ – ಧರ್ಮದ ಚೌಕಟ್ಟಿನಲ್ಲಿ ಮುನ್ನಡೆಯುವ ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ವೈಚಾರಿಕ, ನೈತಿಕ, ಸಾಮಾಜಿಕ ಮೌಲ್ಯಗಳು ಎಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿವೆ.

ಬಸವಣ್ಣನವರ ಮೂಲ ಚಿಂತನೆಗಳನ್ನು ಮರೆಮಾಚಲು ಹೊರಟ ಸಂಪ್ರದಾಯವಾದಿಗಳು ಬದಲಾದ ಕಾಲಘಟ್ಟದಲ್ಲಿ ಬಸವಣ್ಣನವರನ್ನು ವೈಭವೀಕರಣಗೊಳಿಸಿದರು. ಬಸವಣ್ಣನವರನ್ನು ನಾವು ದೈವತ್ವದ ರೂಪಕ್ಕೆ ಸೀಮಿತಗೊಳಿಸಿದರೆ ಬಸವಣ್ಣ ನಮಗೆ ವೈಚಾರಿಕ, ವೈಜ್ಞಾನಿಕವಾಗಿ ಬಹು ದೂರವಾಗುತ್ತಾರೆ. ಮನುಕುಲದ ಒಳತಿಗಾಗಿ ವಿಶ್ವಮಾನವ ಸಂದೇಶದ ರಹದಾರಿ ತೋರಿದ ಬಸವಣ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಪ್ರಸ್ತುತವಾಗಿ ಬಸವಣ್ಣನವರಿಗೆ ತಾತ್ವಿಕ ನೆಲೆಯಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ.

ಬಸವಣ್ಣನವರ ಅರಿವು ಮತ್ತು ಸಿದ್ಧಾಂತ ಎಲ್ಲರಿಗೂ ಎಚ್ಚರಗೊಳಿಸಬಲ್ಲದು. ಧರ್ಮದ ಭಾವೋದ್ರೇಕಕ್ಕೆ ಒಳಗಾಗಿರುವರು ಸಮಾನತೆ, ‌ಸೌಹಾರ್ದತೆಯ ಭಾವನೆಗಳನ್ನು ಮೈಗೂಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕಾಗಿದೆ. ಬಸವಣ್ಣನವರು ಭಕ್ತಿಗಿಂತ ಶರಣತ್ವಕ್ಕೆ ಹೆಚ್ಚಿನ ಮಹತ್ವ ನೀಡಿದರು. ಹಾಗಾಗಿ ಬಸವಣ್ಣನವರ ಪ್ರಖರವಾದ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿ ಉಳಿಯಬೇಕಾದರೆ ಎಲ್ಲರೂ ‘ಕಾಯಕವೇ ಕೈಲಾಸ’ ತತ್ವವನ್ನು ಮನ್ನೆಲೆಗೆ ತರಬೇಕಾಗಿದೆ. ಅಂದಾಗ ಮಾತ್ರ ಬಸವಣ್ಣನವರ ಬಯಸಿದ ‘ಕಲ್ಯಾಣ ರಾಜ್ಯ’ ರೂಪುಗೊಳ್ಳಲು ಸಾಧ್ಯವಿದೆ.

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ಬಿಜೆಪಿ ವಿಜಯೋತ್ಸವದ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣ; ಮತ್ತೆ 7 ಮಂದಿ ಬಂಧನ

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...

ಬೀದರ್‌ | ಗ್ರಾ.ಪಂ. ನಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

ಬೀದರ್‌ ತಾಲೂಕಿ ಮಾಳೆಗಾಂವ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಯೋಜನೆಯಡಿ ನಡೆಸಿರುವ ಅವ್ಯವಹಾರದ...

ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?

ಸದ್ಯ ದೇಶಾದ್ಯಂತ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ದೊಡ್ಡ ಚರ್ಚೆಯಾಗಿದೆ. ವೈದ್ಯಕೀಯ...

ತುಮಕೂರಿನ ವಸಂತನರಸಾಪುರದ ಬಳಿ ಇಂಟಿಗ್ರೇಟೆಡ್ ಟೌನ್‌ಶಿಪ್‌ ನಿರ್ಮಾಣ; ಯೋಜನೆ ಕೈಗೊಳ್ಳುವಂತೆ ಸಚಿವ ಬೈರತಿ ಸುರೇಶ್ ಸೂಚನೆ

ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ನಗರಾಭಿವೃದ್ಧಿ ಇಲಾಖೆಯಿಂದ Integrated...