ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ಉತ್ತರ ವಲಯ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಎರಡನೇ ದಿನವೂ ಮುಂದುವರಿಯಿತು.
ಮಾಸ್ತಿಹೊಳಿ, ಗುಡಗನಟ್ಟಿ, ಬೀರನಹೊಳಿ, ಸುತಗಟ್ಟಿ ಹಾಗೂ ಜಾರಕಿಹೊಳಿ ಗ್ರಾಮಗಳ 500ಕ್ಕೂ ಹೆಚ್ಚು ರೈತರು ಮಂಗಳವಾರದಿಂದಲೇ ಜಾನುವಾರುಗಳೊಂದಿಗೆ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿ, ಅಲ್ಲಿಯೇ ಅಡುಗೆ ಮಾಡಿಕೊಂಡು ವಾಸ್ತವ್ಯ ಹೂಡಿದ್ದಾರೆ.
ಬುಧವಾರ ರೈತರು ಜಾನುವಾರುಗಳ ಸಮೇತ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮತ್ತೆ ನೀರಾವರಿ ನಿಗಮದ ಕಚೇರಿಗೆ ಮರಳಿ ಧರಣಿ ಮುಂದುವರಿಸಿದರು.
ಬುಧವಾರ ರೈತರು ಜಾನುವಾರುಗಳ ಸಮೇತ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮತ್ತೆ ನೀರಾವರಿ ನಿಗಮದ ಕಚೇರಿಗೆ ಮರಳಿ ಧರಣಿ ಮುಂದುವರಿಸಿದರು.
“ಅಭಿವೃದ್ಧಿ ಯೋಜನೆಗಾಗಿ ನಮ್ಮ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ, ಇಂದಿಗೂ ನ್ಯಾಯಯುತ ಪರಿಹಾರ ದೊರೆತಿಲ್ಲ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ನ್ಯಾಯ ಒದಗಿಸಬೇಕು” ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರೈತರ ಅಹವಾಲು ಆಲಿಸಿ, ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಸಂಜೆ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಆದರೆ ಸಭೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ದೊರೆಯದ ಹಿನ್ನೆಲೆಯಲ್ಲಿ, “ನಮ್ಮ ಬೇಡಿಕೆಗಳು ಸಂಪೂರ್ಣ ಈಡೇರುವವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ” ಎಂದು ರೈತ ಮುಖಂಡರು ಘೋಷಿಸಿದರು.
ಧರಣಿಯಲ್ಲಿ ಸಂತೋಷ ಪಾಟೀಲ, ಮಲಗೌಡ ಪಾಟೀಲ, ಬಾಳೇಶ ಪಾಟೀಲ, ಸಿದ್ದಲಿಂಗ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.




