ಹೊಲದಲ್ಲಿ ಸಿಕ್ಕ ಅಣಬೆ ತಂದು ಅಡುಗೆ ಮಾಡಿ ತಿಂದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಹೊಲವೊಂದರಲ್ಲಿ ಬೆಳೆದಿದ್ದ ಅಣಬೆಯನ್ನು ಕಂಡು, ಅದನ್ನು ಮನೆಗೆ ತಂದು ಅಡುಗೆ ಮಾಡಿದ್ದಾರೆ. ಒಬ್ಬರು ತಂದಿದ್ದನ್ನು ಕಂಡು ಮತ್ತೊಂದು ಕುಟುಂಬದವರೂ ಅದೇ ಅಣಬೆಯನ್ನು ತಂದು ಅಡುಗೆ ಮಾಡಿ ಸೇವಿಸಿದ್ದಾರೆ. ಆದರೆ, ಆ ಹೊಲದ ಮಾಲೀಕರು ಬೆಳೆಗೆ ಔಷಧ(ಕೀಟನಾಶಕ) ಸಿಂಪಡಿಸಿದ್ದರು. ಈ ವಿಚಾರ ತಿಳಿಯದ ಕುಟುಂಬಸ್ಥರು ಅಣಬೆ ಊಟ ಮಾಡಿದ ಬಳಿಕ ತೀವ್ರ ವಾಂತಿ ಮತ್ತು ಭೇದಿಯಿಂದ ನರಳಾಡಿದ್ದಾರೆ.
ಕೂಡಲೇ ಅಸ್ವಸ್ಥರಾದ ಎಲ್ಲರನ್ನೂ ಚಿಕ್ಕೋಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಓರ್ವ ಗರ್ಭಿಣಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. 8 ಮಂದಿ ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುರುಕುಗೊಂಡಿದ್ದ ಮುಂಗಾರು ಕಡಿತ: ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆಯೆಂದು ತಿಳಿಯಲು ಇದನ್ನು ಓದಿ
“ಉಮರಾಣಿ ಗ್ರಾಮದ ಸುಮಾರು 9 ಮಂದಿ ಸ್ಥಳೀಯ ಅಣಬೆ ಸೇವಿಸಿ ವಾಂತಿ ಮತ್ತು ಭೇದಿಯಿಂದ ಬಳಲಿ ನಮ್ಮ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದ್ದು, ಎಲ್ಲರ ಆರೋಗ್ಯ ಸದ್ಯ ಸುಧಾರಿಸುತ್ತಿದೆ. ಅವರಲ್ಲಿ ಓರ್ವ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ (BIMS) ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಉಳಿದ 8 ಮಂದಿಗೆ ಇಲ್ಲೇ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು” ಎಂದು ಚಿಕ್ಕೋಡಿ ವೈದ್ಯಾಧಿಕಾರಿ ಡಾ.ಬದನಿಕಾಯಿ ಅವರು ತಿಳಿಸಿದ್ದಾರೆ.




