ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡಕಲ್ ಡ್ಯಾಂ ವ್ಯೂ ಪಾಯಿಂಟ್ ಸಮೀಪ ಮಂಗಳವಾರ ಸಂಜೆ ನಡೆದ ತಲವಾರು ದಾಳಿಯಲ್ಲಿ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ನಡೆದಿದೆ. ಹಳೆಯ ವೈಷಮ್ಯ ಹಾಗೂ ಕೋಕಾ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಕಾರಣ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, 10 ರಿಂದ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತರನ್ನು ಪಾಸ್ಕಲ್ ಹೃದಯರಾಜ್ ಮುತ್ತುಸ್ವಾಮಿ (31), ಮಾಣಿಕವಾಡಿ, ಗೋಕಾಕ ತಾಲೂಕು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಕರಣ ಸುಭಾಸ ಮೇಳವಂಕಿ (25) ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 227/2026 ದಾಖಲಿಸಲಾಗಿದೆ.
ದೂರಿನ ಪ್ರಕಾರ, ಜುಲೈ 14ರಂದು ಮಧ್ಯಾಹ್ನ ಕರಣ, ಪಾಸ್ಕಲ್ ಹಾಗೂ ಸ್ನೇಹಿತರಾದ ಮಲ್ಲೇಶ ಕೋಲಕಾರ ಮತ್ತು ಸತೀಶ ಹೆಳವಿ ಅವರು ಬೈಕ್ಗಳಲ್ಲಿ ಹಿಡಕಲ್ ಡ್ಯಾಂ ವ್ಯೂ ಪಾಯಿಂಟ್ಗೆ ತೆರಳಿ, ಗಿಡದ ನೆರಳಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ಸಂಜೆ ಸುಮಾರು 5ರಿಂದ 5.30ರ ವೇಳೆಗೆ ಡ್ಯಾಂ ಕಡೆಯಿಂದ ಒಂದು ಆಟೋ ರಿಕ್ಷಾ ಹಾಗೂ ಎರಡು ಬೈಕ್ಗಳಲ್ಲಿ ತಲವಾರು ಹಿಡಿದು ಬಂದ 10 ರಿಂದ 11 ಜನ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ದಾಳಿಯಿಂದ ಜೀವಭಯಗೊಂಡ ನಾಲ್ವರೂ ಗುಡ್ಡದ ಕಡೆಗೆ ಓಡಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಎಸೆದ ಕಲ್ಲು ಕರಣ ಅವರ ತಲೆಗೆ ತಗುಲಿ ಗಾಯವಾಗಿದೆ. ಓಡುವ ವೇಳೆ ಪಾಸ್ಕಲ್ ಕಾಲು ಜಾರಿ ಕೆಳಗೆ ಬಿದ್ದಿದ್ದು, ದುಷ್ಕರ್ಮಿಗಳು ಆತನನ್ನು ಸುತ್ತುವರಿದು ತಲವಾರಿನಿಂದ ಕುತ್ತಿಗೆ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಪಾಸ್ಕಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮೃತ ಪಾಸ್ಕಲ್ ಗೋಕಾಕ ಠಾಣೆಯ ಕೋಕಾ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಹಾಗೂ ಆರೋಪಿತರೊಂದಿಗೆ ಹಳೆಯ ವೈಷಮ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಪ್ಪ ನಾಯಿಕ, ರಾಹುಲ್, ನಾಗೇಶ ನಾಯಿಕ, ಪ್ರಜ್ವಲ್ ಸೇರಿದಂತೆ ಇನ್ನೂ ಏಳು ಅಪರಿಚಿತ ಆರೋಪಿಗಳ ವಿರುದ್ಧ ವಿವಿಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.



