ಬೆಂಗಳೂರು ನಗರದ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ (ಫುಟ್‌ಪಾತ್) ಒತ್ತುವರಿ ತೆರವು ಕಾರ್ಯಾಚರಣೆಯು ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಖುದ್ದಾಗಿ ಪರಿಶೀಲಿಸಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ಮಾಹಿತಿ ಪಡೆದ ಬಳಿಕ ಜಯನಗರದ ಅಶೋಕ ಸ್ತಂಭದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜುಲೈ 1ರಿಂದ ಈವರೆಗೆ ಒಟ್ಟು 435 ಕಿ.ಮೀ. ಉದ್ದದ ಮಾರ್ಗದಲ್ಲಿ 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ತೆರವು ಕಾರ್ಯಾಚರಣೆಯ ಕುರಿತು ನಿಖರ ಅಂಕಿ-ಅಂಶಗಳನ್ನು ನೀಡಿದ ಅವರು, ಈವರೆಗೆ ಒಟ್ಟು 1,340 ಅಂಗಡಿಗಳು, 2,267 ಅಂಗಡಿಗಳ ಮುಂಭಾಗದ ತಗಡಿನ ಶೀಟ್‌ಗಳು, 2,300 ಮೆಟ್ಟಿಲು ಹಾಗೂ ರ‍್ಯಾಂಪ್‌ಗಳು, 2,662 ಪಿಲ್ಲರ್ ಹಾಗೂ ಬೋರ್ಡ್‌ಗಳು ಮತ್ತು 2,247 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಸುಮಾರು 1,800 ತಳ್ಳುವ ಗಾಡಿಗಳನ್ನು ತೆರವು ಮಾಡಲಾಗಿದ್ದು, ಆ ಗಾಡಿಗಳನ್ನು ವಾಪಸ್ ಒಯ್ಯಲು ಮಾಲೀಕರಿಗೆ ಅವಕಾಶ ನೀಡಲಾಗಿದೆ. ತೆರವುಗೊಂಡ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದರ ಜೊತೆಗೆ, ಹಾಳಾಗಿರುವ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವೂ ಜೊತೆಯಲ್ಲೇ ಸಾಗುತ್ತಿದೆ ಎಂದು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದ್ದು, ಅವರು ನಮ್ಮವರೇ ಆಗಿದ್ದಾರೆ ಹಾಗೂ ಅವರು ಬದುಕಬೇಕು ಎಂಬ ಆಸೆ ನಮಗೂ ಇದೆ. ಆದರೆ, ಖಾಸಗಿ, ಸರ್ಕಾರಿ ಜಾಗ ಅಥವಾ ಯಾರದೋ ಆಸ್ತಿಯ ಮುಂದೆ ಬೇಕಾಬಿಟ್ಟಿ ವ್ಯಾಪಾರ ಮಾಡಲು ಅವಕಾಶವಿಲ್ಲ. ಅವರಿಗೆ ಪರ್ಯಾಯವಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತಹ ಸೂಕ್ತ ಜಾಗಗಳನ್ನು ಗುರುತಿಸಿ, ಬೆಳಿಗ್ಗೆ ಬಂದು ಸಂಜೆ ಹೋಗುವಂತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಶಿಕ್ಷಕರಿಗೆ SIR ಕರ್ತವ್ಯವೋ, ಮಕ್ಕಳ ಪಾಠವೋ- ಬಗೆಹರಿಯದ ಗೊಂದಲ
ಹಿಂದೆ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು, ಆದರೆ, ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅದು ನಿಂತಿತ್ತು. ಈಗ ಆ ಪ್ರಕ್ರಿಯೆಯನ್ನು ಮರುಚಾಲನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ವಿಜಯನಗರ ಅಂಡರ್‌ಪಾಸ್ ಮಾರುಕಟ್ಟೆ ಬಳಕೆಯಾಗದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕುರಿತ ಸಲಹೆಗಳನ್ನು ಹಾಗೂ ವಾಸ್ತವವನ್ನು ಪರಿಗಣಿಸಲಾಗುವುದು ಎಂದರು.
ಪಾದಚಾರಿ ಮಾರ್ಗಗಳ ಒತ್ತುವರಿ ಹಿಂದೆ ದೊಡ್ಡ ಮಾಫಿಯಾವೇ ಕೆಲಸ ಮಾಡುತ್ತಿದ್ದು, ರೌಡಿಗಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ನಿಖರ ಮಾಹಿತಿ ಸರ್ಕಾರಕ್ಕಿದೆ. ಹೀಗಾಗಿಯೇ ಪೊಲೀಸ್ ಮತ್ತು ಜಿಬಿಎ ಅಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು ಎಚ್ಚರಿಸಿದರು. ಕಳೆದ ಮೂರು ವರ್ಷಗಳಲ್ಲಿ ಪಾದಚಾರಿ ಮಾರ್ಗಗಳಿಲ್ಲದೆ ರಸ್ತೆಯಲ್ಲಿ ನಡೆದು 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪಾದಚಾರಿ ಮಾರ್ಗವಿಲ್ಲದಿದ್ದರೆ ಜನ ರಸ್ತೆಗಿಳಿಯುತ್ತಾರೆ, ಇದರಿಂದ ವಾಹನ ದಟ್ಟಣೆಯೂ ಹೆಚ್ಚಾಗುತ್ತದೆ. ಸ್ವಚ್ಛ ಬೆಂಗಳೂರು ನಿರ್ಮಾಣ ನಮ್ಮ ಗುರಿಯಾಗಿದ್ದು, ಎಷ್ಟೇ ಟೀಕೆಗಳು ಬಂದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾರ್ಯಾಚರಣೆ ಪೂರ್ಣಗೊಳಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಜಯನಗರ ಮಾರುಕಟ್ಟೆ ಕಟ್ಟಡದ ಕುರಿತು ಮಾತನಾಡಿದ ಅವರು, ಅರ್ಧಕ್ಕೆ ನಿಂತಿರುವ ಈ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾವುದಾದರೂ ಒಂದು ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು, ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.




