ಸರ್ಕಾರಿ ಶಾಲಾ ಮಕ್ಕಳಲ್ಲಿನ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಬೆಳೆಸುವ ಉದ್ದೇಶದಿಂದ ಯುವ ಬೆಂಗಳೂರು ಟ್ರಸ್ಟ್ ಆಯೋಜಿಸಿದ್ದ ‘ಮಕ್ಕಳ ಕನ್ನಡ ಕವಿ ಗೋಷ್ಠಿ–2026’ ಕಾರ್ಯಕ್ರಮವು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಭ್ರಮದಿಂದ ನಡೆಯಿತು.
ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಸರ್ಕಾರಿ ಶಾಲೆಗಳ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿ, ತಾವು ರಚಿಸಿದ ಸ್ವರಚಿತ ಕನ್ನಡ ಕವನಗಳನ್ನು ವಾಚಿಸಿದರು. ಕನ್ನಡ ನಾಡು-ನುಡಿ, ಪ್ರಕೃತಿ, ಪರಿಸರ, ತಾಯಿ, ಸಮಾಜ ಹಾಗೂ ಜೀವನ ಮೌಲ್ಯಗಳ ಕುರಿತ ಮಕ್ಕಳ ಕವನಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ, ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವ ಇಂತಹ ವೇದಿಕೆಗಳು ಅಗತ್ಯವೆಂದರು. ಇದೇ ಸಂದರ್ಭದಲ್ಲಿ ದಿವಂಗತ ಬಿ. ವಿಜಯಕುಮಾರ್ (ಸಂಸ್ಥಾಪಕರು, HAL ಕನ್ನಡ ಸಂಘ) ಅವರ ಸ್ಮರಣಾರ್ಥ ನೀಡುವ ‘ಕನ್ನಡ ರತ್ನ ಪ್ರಶಸ್ತಿ–2026’ ಅನ್ನು ಅವರಿಗೆ ಪ್ರದಾನ ಮಾಡಲಾಯಿತು. ಕವನ ವಾಚನ ಮಾಡಿದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಗೌರವ ನೀಡಿ ಅಭಿನಂದಿಸಲಾಯಿತು.
2008ರ ಸೆಪ್ಟೆಂಬರ್‌ನಲ್ಲಿ ಸ್ಥಾಪನೆಯಾದ ಯುವ ಬೆಂಗಳೂರು ಟ್ರಸ್ಟ್, ಒಂದು ಸರ್ಕಾರಿ ಶಾಲೆಯಿಂದ ಆರಂಭಿಸಿ ಇಂದು ಕರ್ನಾಟಕದ 356 ಸರ್ಕಾರಿ ಶಾಲೆಗಳ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಜೀವನ ಕೌಶಲ್ಯಗಳ ವೃದ್ಧಿಗೆ ಸಂಸ್ಥೆ ಆದ್ಯತೆ ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಸ್ಥಾಪಕ ಜಿ. ಕಿರಣ್ ಸಾಗರ್, ಟ್ರಸ್ಟಿಗಳಾದ ಶ್ವೇತಾ ಎಸ್. ರಾವ್, ಬಿ.ವಿ. ಸುನಿಲ್ ಹಾಗೂ ಶಿಕ್ಷಣ ನಿರ್ದೇಶಕ ರಾಹುಲ್ ಆರ್. ಉಪಸ್ಥಿತರಿದ್ದರು. ಮಕ್ಕಳಲ್ಲಿನ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ಸಾಹಿತ್ಯದ ಮುಂದಿನ ಪೀಳಿಗೆಯನ್ನು ರೂಪಿಸುವ ಪ್ರಯತ್ನಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.


