ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅಪರೂಪದ ವಿವಾದಕ್ಕೆ ಕಾರಣವಾಗಿದ್ದವರು ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ (ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್)!
ಮದ್ರಾಸ್ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಕರ್ಣನ್ (71), ಶುಕ್ರವಾರ (ನ. 13) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಲಿತ ಸಮುದಾಯದಿಂದ ಬಂದು ನ್ಯಾಯಾಂಗದ ಉನ್ನತ ಸ್ಥಾನಕ್ಕೇರಿದ್ದ ಕರ್ಣನ್ ಅವರ ಬದುಕು, ಸಾಧನೆಗಳಷ್ಟೇ ವಿವಾದಗಳಿಂದಲೂ ಕೂಡಿತ್ತು. ನ್ಯಾಯಾಂಗದೊಳಗಿನ ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಅವರು, ಕೊನೆಗೆ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು.
1955ರ ಜೂನ್ 12ರಂದು ತಮಿಳುನಾಡಿನ ಕಡಲೂರು ಜಿಲ್ಲೆಯ ಕರ್ಣತ್ತಂ ಗ್ರಾಮದಲ್ಲಿ ಕರ್ಣನ್ ಜನಿಸಿದರು. ತಂದೆ ಸ್ವಾಮಿನಾಥನ್, ತಾಯಿ ಕಮಲಂ. ಎಂಟು ಮಕ್ಕಳ ಕುಟುಂಬದಲ್ಲಿ ಎರಡನೇ ಮಗುವಾಗಿದ್ದ ಅವರ ಮೂಲ ಹೆಸರು ಕರುಣಾನಿಧಿ. ನಂತರ ತಮ್ಮ ಹೆಸರನ್ನು ಕರ್ಣನ್ ಎಂದು ಬದಲಿಸಿಕೊಂಡಿದ್ದರು.
ಚೆನ್ನೈನಲ್ಲಿ ಪದವಿ ಶಿಕ್ಷಣ ಪಡೆದ ಅವರು, 1983ರಲ್ಲಿ ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. 1984ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಮದ್ರಾಸ್ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ಆರಂಭಿಸಿದರು.
ಸುಮಾರು 25 ವರ್ಷಗಳ ವಕೀಲ ವೃತ್ತಿಯ ನಂತರ, 2009ರ ಮಾರ್ಚ್ 30ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಎರಡು ವರ್ಷಗಳ ಬಳಿಕ ಕಾಯಂ ನ್ಯಾಯಮೂರ್ತಿಯಾದರು.
ದಲಿತ ಸಮುದಾಯದ ಕರ್ಣನ್ ನ್ಯಾಯಾಂಗದ ಉನ್ನತ ಹುದ್ದೆಗೇರಿದ್ದು ಗಮನಾರ್ಹ ಸಾಧನೆಯಾಗಿತ್ತು. ಆದರೆ, ನ್ಯಾಯಮೂರ್ತಿಯಾದ ನಂತರವೂ ಜಾತಿಯ ಕಾರಣಕ್ಕೆ ತಾರತಮ್ಯ ಎದುರಿಸುತ್ತಿರುವುದಾಗಿ ಅವರು ನಿರಂತರವಾಗಿ ಹೇಳಿಕೊಂಡಿದ್ದರು.
2011ರಲ್ಲಿ ಕರ್ಣನ್ ತಮ್ಮ ಸಹೋದ್ಯೋಗಿ ನ್ಯಾಯಮೂರ್ತಿಗಳ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ತಾವು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವಮಾನ, ಸಾಮಾಜಿಕ ಬಹಿಷ್ಕಾರ ಹಾಗೂ ತಾರತಮ್ಯಕ್ಕೆ ಒಳಗಾಗುತ್ತಿರುವುದಾಗಿ ದೂರಿದ್ದರು. ‘ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರು ತಮ್ಮನ್ನು ಪಾದರಕ್ಷೆಯಿಂದ ಉದ್ದೇಶಪೂರ್ವಕವಾಗಿ ಸ್ಪರ್ಶಿಸಿದ್ದರು; ಇತರರು ಅದನ್ನು ನೋಡಿ ನಕ್ಕಿದ್ದರು’ ಎಂಬ ಗಂಭೀರ ಆರೋಪವನ್ನೂ ಮಾಡಿದ್ದರು.
ನ್ಯಾಯಾಂಗದ ಆಡಳಿತಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ಸೂಕ್ತ ಜವಾಬ್ದಾರಿಗಳನ್ನು ನೀಡುತ್ತಿಲ್ಲ ಹಾಗೂ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ಪ್ರಾತಿನಿಧ್ಯಕ್ಕೆ ಮಹತ್ವ ನೀಡುತ್ತಿಲ್ಲವೆಂದು ಅವರು ಆಕ್ಷೇಪ ಎತ್ತಿದ್ದರು. ಮಾತ್ರವಲ್ಲದೆ, 2014ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಾಲಯದ ಕಲಾಪದ ಮಧ್ಯೆ ಪ್ರವೇಶಿಸಿ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು.
ಇಂತಹ ಹಲವು ಸಂದರ್ಭಗಳಲ್ಲಿ ನ್ಯಾಯಾಂಗದ ಆಡಳಿತಾತ್ಮಕ ನಿರ್ಧಾರಗಳ ವಿರುದ್ಧ ದನಿ ಎತ್ತುತ್ತಿದ್ದ ಕರ್ಣನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಇತರ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮದ್ರಾಸ್ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರೊಂದಿಗೆ ಕರ್ಣನ್ ಅವರ ಸಂಘರ್ಷ ತೀವ್ರಗೊಳ್ಳಲಾರಂಭಿಸಿತ್ತು.
ಇದೆಲ್ಲದರ ನಡುವೆಯೇ, 2016ರ ಫೆಬ್ರವರಿಯಲ್ಲಿ ಕರ್ಣನ್ ಅವರನ್ನು ಮದ್ರಾಸ್ ಹೈಕೋರ್ಟ್‌ನಿಂದ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಆದರೆ, ಈ ವರ್ಗಾವಣೆಯನ್ನು ವಿರೋಧಿಸಿದ ಅವರು, ಅದನ್ನು ತಡೆಯುವ ನ್ಯಾಯಾಂಗ ಆದೇಶವನ್ನೇ ಹೊರಡಿಸಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಆ ಆದೇಶಕ್ಕೆ ತಡೆ ನೀಡಿದ್ದರಿಂದ, ಅಂತಿಮವಾಗಿ 2016ರ ಮಾರ್ಚ್ 11ರಂದು ಕರ್ಣನ್ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡರು.
ವರ್ಗಾವಣೆಯ ನಂತರವೂ ನ್ಯಾಯಾಂಗದಲ್ಲಿನ ತಾರತಮ್ಯ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮುಂದುವರಿಸಿದ ಅವರು, ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡತೊಡಗಿದರು.
2017ರ ಫೆಬ್ರವರಿ 8ರಂದು, ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿಕೊಂಡಿತು. ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ವಿಚಾರಣೆ ಆರಂಭಿಸಿತು. ವಿಚಾರಣೆ ನಡೆಯುವವರೆಗೆ ಕರ್ಣನ್ ಯಾವುದೇ ನ್ಯಾಯಾಂಗ ಅಥವಾ ಆಡಳಿತಾತ್ಮಕ ಕಾರ್ಯ ನಿರ್ವಹಿಸದಂತೆ ನಿರ್ಬಂಧಿಸಲಾಗಿತ್ತು. ಆದರೆ, ಈ ಕ್ರಮವನ್ನು ಕರ್ಣನ್ ಪ್ರಶ್ನಿಸಿದ್ದರು.
ಈ ಲೇಖನ ಓದಿದ್ದೀರಾ?: ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
ಮಾತ್ರವಲ್ಲದೆ, 2017ರ ಮೇ 8ರಂದು ಅಚ್ಚರಿಯ ಆದೇಶವೊಂದನ್ನು ಹೊರಡಿಸಿದ್ದರು. ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಸೇರಿದಂತೆ ಸುಪ್ರೀಂ ಕೋರ್ಟ್‌ನ ಎಂಟು ನ್ಯಾಯಮೂರ್ತಿಗಳು ಜಾತಿ ತಾರತಮ್ಯ ಎಸಗಿದ್ದಾರೆ ಎಂದು ದೂರಿದ್ದ ಕರ್ಣನ್, ಆ ಎಲ್ಲ ನ್ಯಾಯಮೂರ್ತಿಗಳಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಆದೇಶಿಸಿದ್ದರು.
ಆದರೆ, ಈ ಆದೇಶಕ್ಕೆ ಕಾನೂನಾತ್ಮಕ ಮಾನ್ಯತೆ ದೊರೆಯಲಿಲ್ಲ. ಅದು ಜಾರಿಯೂ ಆಗಲಿಲ್ಲ.
ಆದಾಗ್ಯೂ, ಮರುದಿನವೇ, (ಮೇ 9) ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು ಕರ್ಣನ್ ಅವರನ್ನು ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಆರು ತಿಂಗಳ ಜೈಲುಶಿಕ್ಷೆ ವಿಧಿಸಿತು.
2017ರ ಜೂನ್‌ನಲ್ಲಿ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಅವರನ್ನು, ಜೂನ್ 20ರಂದು ತಮಿಳುನಾಡಿನ ಕೊಯಮತ್ತೂರು ಸಮೀಪ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದರು. ನಂತರ, ಅವರನ್ನು ಕೋಲ್ಕತ್ತಾದ ಜೈಲಿನಲ್ಲಿ ಇರಿಸಲಾಗಿತ್ತು.
ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಿದ ಕರ್ಣನ್, 2017ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದರು. ನ್ಯಾಯಾಲಯ ನಿಂದನೆಗಾಗಿ ಜೈಲುಶಿಕ್ಷೆಗೆ ಗುರಿಯಾದ ಭಾರತದ ಮೊದಲ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯೂ ಕರ್ಣನ್ ಆಗಿದ್ದಾರೆ.
ಸೆರೆವಾಸ ಅನುಭವಿಸಿ ಹೊರ ಬಂದ ಕರ್ಣನ್, 2018ರಲ್ಲಿ ‘ಆ್ಯಂಟಿ ಕರಪ್ಷನ್ ಡೈನಮಿಕ್ ಪಾರ್ಟಿ’ ಎಂಬ ರಾಜಕೀಯ ಪಕ್ಷವನ್ನು ಕಟ್ಟಿದ್ದರು. ಆದರೆ, 2020ರಲ್ಲಿ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಅಶ್ಲೀಲ ಮತ್ತು ಬೆದರಿಕೆಯ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿತ್ತು. ನಂತರ, ಕ್ಷಮೆಯಾಚನೆ ಸಲ್ಲಿಸಿದ್ದರು. ಕ್ಷಮೆಯಾಚನೆಯನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ಅವರಿಗೆ ಜಾಮೀನು ನೀಡಿತು.
ಇದೆಲ್ಲದರ ನಡುವೆಯೂ, ನ್ಯಾಯಮೂರ್ತಿ ಕರ್ಣನ್ ಅವರ ಬದುಕು ಅನೇಕ ವೈರುಧ್ಯಗಳನ್ನು ಒಳಗೊಂಡಿತ್ತು. ಅಂತೆಯೇ, ಅವರ ಬದುಕಿನಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಗಳಿದ್ದವು. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವದ ಕುರಿತ ಸಂಘರ್ಷಗಳಿದ್ದವು. ವೈಯಕ್ತಿಕ ನಡವಳಿಕೆಗೆ ಸಂಬಂಧಿಸಿದ ಗಂಭೀರ ವಿವಾದಗಳೂ ಇದ್ದವು.
ಕರ್ಣನ್ ಅವರ ಬದುಕು ಭಾರತದ ನ್ಯಾಯಾಂಗ ವ್ಯವಸ್ಥೆಯ ಎದುರು ಒಂದು ಪ್ರಶ್ನೆಯನ್ನಿಟ್ಟಿದೆ: ನ್ಯಾಯಾಂಗದೊಳಗೆ ಜಾತಿ ತಾರತಮ್ಯದ ಆರೋಪಗಳು ಕೇಳಿಬಂದಾಗ ಅವುಗಳನ್ನು ಸ್ವತಂತ್ರವಾಗಿ ಮತ್ತು ವಿಶ್ವಾಸಾರ್ಹವಾಗಿ ಪರಿಶೀಲಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿದೆ.


