ರಾಜ್ಯದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯ ವೇಳೆ, ಮುಸ್ಲಿಂ ಶಾಸಕರು ಪ್ರತಿನಿಧಿಸುವ 10 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಪೈಕಿ 27.59% (ಕಾಲು ಭಾಗಕ್ಕಿಂತಲೂ ಅಧಿಕ) ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಪೈಕಿ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ 1.07 ಲಕ್ಷ ಮತದಾರರ ಹೆಸರುಗಳು ಡಿಲೀಟ್ ಆಗಿವೆ.
ರಾಜಕೀಯ ಸಂಶೋಧನಾ ಸಂಸ್ಥೆಯಾದ ‘ಸಂಕಲ್ಪ’ ಒದಗಿಸಿರುವ ಮತ್ತು ಚುನಾವಣಾ ಆಯೋಗ ಪ್ರಕಟಿಸಿರುವ ಬೂತ್ವಾರು ಮತದಾರರ ಕಡಿತದ ದತ್ತಾಂಶಗಳನ್ನು ಆಧರಿಸಿ ‘ವಾರ್ತಾ ಭಾರತಿ’ ವಿಶ್ಲೇಷಣೆ ನಡೆಸಿದೆ. ಈ ವಿಶ್ಲೇಷಣೆಯಲ್ಲಿ ಗಂಭೀರ ಅಂಶಗಳು ಬಹಿರಂಗಗೊಂಡಿವೆ. ರಾಜ್ಯದ ಒಟ್ಟಾರೆ ಮತದಾರರ ಕಡಿತದ ಪ್ರಮಾಣವು 19.45%ರಷ್ಟಿದ್ದರೆ, ಮುಸ್ಲಿಂ ಶಾಸಕರಿರುವ ಈ 10 ಕ್ಷೇತ್ರಗಳಲ್ಲಿ ಕಡಿತದ ಪ್ರಮಾಣವು ರಾಜ್ಯದ ಸರಾಸರಿಗಿಂತ ತೀರಾ (27.59%) ಹೆಚ್ಚಾಗಿದೆ.
2025ರ ಮತದಾರರ ಪಟ್ಟಿಯ ಪ್ರಕಾರ ಈ 10 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9,62,359 ಮುಸ್ಲಿಂ ಮತದಾರರಿದ್ದರು. ಈ ಪೈಕಿ 2,46,759 ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಂದರೆ, 25.64% ಮುಸ್ಲಿಂ ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಜೊತೆಗೆ, ಇದೇ ಕ್ಷೇತ್ರಗಳಲ್ಲಿ ಇತರ ಸಮುದಾಯಗಳ ಮತದಾರರ ಕಡಿತದ ಪ್ರಮಾಣವೂ 28.79%ರಷ್ಟಿದೆ.
ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಡಿಲೀಟ್ ಆಗಿರುವ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆ (ಒಟ್ಟು 1,07,722), ರಿಜ್ವಾನ್ ಅರ್ಷದ್ ಅವರ ಶಿವಾಜಿನಗರ (81,230), ತನ್ವೀರ್ ಸೇಠ್ ಅವರ ನರಸಿಂಹರಾಜ (99,367), ಕನೀಜ್ ಫಾತಿಮಾ ಅವರ ಕಲಬುರಗಿ ಉತ್ತರ (1,05,257), ಎಚ್.ಎ. ಇಕ್ಬಾಲ್ ಹುಸೇನ್ ಅವರ ರಾಮನಗರ (28,088) ಹಾಗೂ ಯು.ಟಿ. ಖಾದರ್ ಫರೀದ್ ಅವರ ಮಂಗಳೂರು (16,989) ಕ್ಷೇತ್ರಗಳಿವೆ. ಇನ್ನುಳಿದಂತೆ, ಎನ್.ಎ. ಹ್ಯಾರಿಸ್ ಅವರ ಶಾಂತಿನಗರ, ರಹೀಂ ಖಾನ್ ಅವರ ಬೀದರ್, ಆಸಿಫ್ (ರಾಜು) ಸೇಠ್ ಅವರ ಬೆಳಗಾವಿ ಉತ್ತರ ಹಾಗೂ 2024ರ ನವೆಂಬರ್ ಉಪಚುನಾವಣೆಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆದ್ದಿದ್ದ ಶಿಗ್ಗಾಂವಿ ಕ್ಷೇತ್ರಗಳೂ ಇದೇ ಪಟ್ಟಿಯಲ್ಲಿವೆ.
ಗಮನಾರ್ಹವಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 60% ಅಥವಾ ಅದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದ ಮತಗಟ್ಟೆಗಳಲ್ಲಿಯೇ 22.35 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಅಲ್ಲದೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಅಳಿಸಲಾಗಿರುವ ಒಟ್ಟು ಮತದಾರರಲ್ಲಿ 35%ಕ್ಕಿಂತ ಹೆಚ್ಚು ಮಂದಿ ಕಾಂಗ್ರೆಸ್ ಪ್ರಾಬಲ್ಯವಿದ್ದ ಬೂತ್ಗಳಿಗೆ ಸೇರಿದವರಾಗಿದ್ದಾರೆ. ಈ 39 ಕ್ಷೇತ್ರಗಳಲ್ಲಿ ಒಟ್ಟು 19,85,732 ಹೆಸರುಗಳನ್ನು ಅಳಿಸಲಾಗಿದೆ. ವಿಶೇಷವೆಂದರೆ ಈ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಸರಾಸರಿ ಪಾಲು 22% ರಷ್ಟಿದೆ. ಇನ್ನೂ ಮುಖ್ಯವಾಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಈ 39 ಕ್ಷೇತ್ರಗಳ ಪೈಕಿ 26ರಲ್ಲಿ ಕಾಂಗ್ರೆಸ್, 11ರಲ್ಲಿ ಬಿಜೆಪಿ ಹಾಗೂ 2ರಲ್ಲಿ ಜೆಡಿಎಸ್ ಜಯಗಳಿಸಿತ್ತು.
ಮತದಾರರ ಹೆಸರುಗಳನ್ನು ಕೈಬಿಡಲು ಚುನಾವಣಾ ಸಿಬ್ಬಂದಿ ದಾಖಲಿಸಿರುವ ಕಾರಣಗಳನ್ನು ಹೆಚ್ಚು ಗಮನ ಸೆಳೆದಿವೆ. ಗಣತಿದಾರರ ವೈಯಕ್ತಿಕ ನಿರ್ಧಾರವನ್ನು ಅವಲಂಬಿಸಿರುವ ‘ಗೈರುಹಾಜರಿ’ ಮತ್ತು ‘ಈಗಾಗಲೇ ಬೇರೆಡೆ ನೋಂದಣಿಯಾಗಿದೆ’ ಎಂಬ ಕಾರಣಗಳನ್ನೇ ಹೆಚ್ಚಾಗಿ ಬಳಸಲಾಗಿದೆ. ಅದರಲ್ಲೂ, ಮುಸ್ಲಿಂ ಮತದಾರರನ್ನು ಅಳಿಸಲು ಈ ಕಾರಣಗಳನ್ನು ತೀವ್ರವಾಗಿ ಬಳಸಿಕೊಳ್ಳಲಾಗಿದೆ.
ರಾಜ್ಯದ ಒಟ್ಟು ಮತದಾರರಲ್ಲಿ ಮುಸ್ಲಿಮರ ಪಾಲು 12.9% ಇದ್ದರೂ, ಗೈರುಹಾಜರಿ ಕಾರಣದಿಂದ ತೆಗೆದುಹಾಕಲಾದ 15,15,088 ಮತದಾರರಲ್ಲಿ ಮುಸ್ಲಿಮರ ಪಾಲು 17.1% (2,58,770) ಇದೆ. ಅದೇ ರೀತಿ, ಈಗಾಗಲೇ ನೋಂದಣಿಯಾಗಿದೆ ಎಂಬ ಕಾರಣಕ್ಕೆ ಕೈಬಿಡಲಾದ 7,08,666 ಮತದಾರರಲ್ಲಿ 20.3%ರಷ್ಟು (1,43,940) ಮುಸ್ಲಿಮರಾಗಿದ್ದಾರೆ. ಅಂದರೆ, ಈ ಎರಡು ವಿಭಾಗದಲ್ಲಿ ಕೈಬಿಡಲಾದ ಪ್ರತಿ ಐವರು ಮತದಾರರಲ್ಲಿ ಒಬ್ಬರು ಮುಸ್ಲಿಮರಾಗಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ, ಮರಣ ಪ್ರಮಾಣಪತ್ರದಂತಹ ಅಧಿಕೃತ ದಾಖಲೆಗಳ ಮೂಲಕ ದೃಢೀಕರಿಸಬೇಕಿದ್ದ ‘ಮೃತಪಟ್ಟಿದ್ದಾರೆ’ ಎಂಬ ವಿಭಾಗದಲ್ಲಿ ಕೈಬಿಡಲಾದವರಲ್ಲಿ ಮುಸ್ಲಿಮರ ಪ್ರಮಾಣ ಕೇವಲ 12.2% (2,00,277) ರಷ್ಟಿದೆ. ಅಧಿಕೃತ ದಾಖಲೆ ಆಧರಿಸಿದ ಕಡಿತಕ್ಕಿಂತ, ಗಣತಿದಾರರ ವಿವೇಚನೆಗೆ ಒಳಪಟ್ಟ ವಿಭಾಗಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳು ಹೆಚ್ಚಾಗಿ ಡಿಲೀಟ್ ಆಗಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
2026ರ ಅಂತಿಮ ಎಸ್ಐಆರ್ ಪಟ್ಟಿಯ ಪ್ರಕಾರ ಮುಸ್ಲಿಂ ಮತದಾರರು 15% ಅಥವಾ ಅದಕ್ಕಿಂತ ಹೆಚ್ಚಿರುವ ರಾಜ್ಯದ 64 ವಿಧಾನಸಭಾ ಕ್ಷೇತ್ರಗಳಲ್ಲಿ 22.67%ರಷ್ಟು ಮುಸ್ಲಿಂ ಮತದಾರರನ್ನು ಕೈಬಿಡಲಾಗಿದ್ದರೆ, ಇತರ ಸಮುದಾಯದ ಮತದಾರರ ಕಡಿತವು 20.19%ರಷ್ಟಿದೆ.
ರಾಜ್ಯದ ಪ್ರಮುಖ ರಾಜಕೀಯ ನಾಯಕರ ಕ್ಷೇತ್ರಗಳ ಅಂಕಿಅಂಶಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಕಪುರದಲ್ಲಿ 22%, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಚಿತ್ತಾಪುರದಲ್ಲಿ 25.7%, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶಿಕಾರಿಪುರದಲ್ಲಿ 16.5%ರಷ್ಟು ಮುಸ್ಲಿಂ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಇನ್ನು ಬೆಂಗಳೂರಿನ ಕ್ಷೇತ್ರಗಳಾದ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರದಲ್ಲಿ ಬರೋಬ್ಬರಿ 37.8% (6,327 ಮತದಾರರು), ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪದ್ಮನಾಭನಗರದಲ್ಲಿ 32.5% (11,278 ಮತದಾರರು) ಹಾಗೂ ಶಿವಾಜಿನಗರದಲ್ಲಿ 32.1%ರಷ್ಟು (25,673 ಮತದಾರರು) ಮುಸ್ಲಿಂ ಮತದಾರರ ಹೆಸರುಗಳು ಪಟ್ಟಿಯಿಂದ ಮಾಯವಾಗಿವೆ.
ಇನ್ನೊಂದೆಡೆ, ಪರಿಷ್ಕರಣೆಯ ಸಂದರ್ಭದಲ್ಲಿ ಹೊಸ ಮತದಾರರ ಸೇರ್ಪಡೆಯಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ. ಸಲ್ಲಿಕೆಯಾದ ಅರ್ಜಿಗಳಿಗಿಂತ ಹೆಚ್ಚಿನ ಸಂಖ್ಯೆಯ ಮತದಾರರನ್ನು ಪಟ್ಟಿಗೆ ಸೇರಿಸಿರುವುದು ಅನುಮಾನಕ್ಕೆ ಎಡೆಮಾಡಿಟ್ಟಿದೆ. ಅಂದರೆ, ಸಂಕಲ್ಪ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶಗಳ ಪ್ರಕಾರ, 2026ರ ಜೂನ್ 16ರಿಂದ ಹೊಸ ಸೇರ್ಪಡೆಗಾಗಿ ಫಾರ್ಮ್-9 ಅಡಿಯಲ್ಲಿ 7,85,716 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಚುನಾವಣಾ ಆಯೋಗವು ಬರೋಬ್ಬರಿ 10,08,038 ಹೊಸ ಮತದಾರರನ್ನು ಪಟ್ಟಿಗೆ ಸೇರಿಸಿದೆ. ಅಂದರೆ, ಸಲ್ಲಿಕೆಯಾದ ಅರ್ಜಿಗಳಿಗಿಂತ 2,22,322 ಹೆಚ್ಚು ಹೆಸರುಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಈ ಹೆಚ್ಚುವರಿ 2.22 ಲಕ್ಷ ಮತದಾರರ ಮೂಲ ಯಾವುದು ಮತ್ತು ಅವರ ಅರ್ಜಿಗಳ ಪರಿಶೀಲನಾ ದಾಖಲೆಗಳು ಎಲ್ಲಿವೆ ಎಂಬುದರ ಕುರಿತು ಚುನಾವಣಾ ಆಯೋಗವು ಯಾವುದೇ ಸಾರ್ವಜನಿಕ ಸ್ಪಷ್ಟನೆಯನ್ನು ನೀಡಿಲ್ಲ.


