ಮತದಾರರ ಪಟ್ಟಿಯಿಂದ ಹೊರಹಾಕುವ ಅವೈಜ್ಞಾನಿಕ, ಅಪ್ರಜಾಸತ್ತಾತ್ಮಕ ಪ್ರಕ್ರಿಯೆಯಾದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಹಾಗೂ ಇವಿಎಂ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರರೊಬ್ಬರು ಏಕಾಂಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಸೋಮವಾರ (ಮೇ 11) 9ನೇ ದಿನ ಪೂರೈಸಿದೆ.
ಔರಾದ್ ಪಟ್ಟಣದ ನಿವಾಸಿಯಾದ ಗೋಪಾಲ್ ಸಿಂಗ್ ಠಾಕೂರ್ ಅವರು ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಮೇ 3ರಿಂದ ʼವೋಟ್ ಸತ್ಯಾಗ್ರಹʼ ಎಂಬ ಘೋಷವಾಕ್ಯದೊಂದಿಗೆ ಆರಂಭಿಸಿದ ಏಕಾಂಗಿ ಧರಣಿ ಮುಂದುವರೆದಿದೆ. ಈ ಕುರಿತು ಈಗಾಗಲೇ ಅವರು ರಾಷ್ಟ್ರಪತಿ, ಜಿಲ್ಲಾಧಿಕಾರಿಗಳಿಗೆ ಪೋಸ್ಟ್ ಮುಖಾಂತರ ಮನವಿ ಪತ್ರ ರವಾನಿಸಿದ್ದಾರೆ.
ʼದೇಶದ ಬಲಿಷ್ಠವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮತದಾರರ ಹಕ್ಕು ಕಸಿದುಕೊಳ್ಳುವ ಎಸ್‌ಐಆರ್ ದಿಂದ ದೇಶದಲ್ಲಿ ಲಕ್ಷಾಂತರ ಜನರು ತಮ್ಮ ಮತದಾನ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ಇದು ಅವೈಜ್ಞಾನಿಕ ಪ್ರಕ್ರಿಯೆ ಹಾಗೂ ಸಂವಿಧಾನ ವಿರೋಧಿಯಾಗಿದೆ. ಹಾಗೇ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ) ವ್ಯವಸ್ಥೆ ರದ್ದುಗೊಳಿಸಿ ಬ್ಯಾಲೆಟ್ ಬಾಕ್ಸ್ ಚುನಾವಣಾ ವ್ಯವಸ್ಥೆ ಮರುಸ್ಥಾಪಿಸಬೇಕುʼ ಎಂದು ಅವರು ಬೇಡಿಕೆಯಿಟಿದ್ದಾರೆ.
ʼನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ, ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ. ದೇಶದ ಜವಾಬ್ದಾರಿಯುತ ನಾಗರಿಕನಾಗಿ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಪ್ರಶ್ನಿಸುವುದು ನನ್ನ ಹಕ್ಕು. ಅದನ್ನು ನನ್ನ ಕರ್ತವ್ಯ ಎಂದು ಭಾವಿಸಿ ಅಹಿಂಸಾತ್ಮಕ ಮಾರ್ಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ನನ್ನ ಹೋರಾಟಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಬೆಂಬಲಿಸುತ್ತಿದ್ದಾರೆʼ ಎಂದು ಹೇಳಿದರು.
ಧರಣಿನಿರತ ಗೋಪಾಲ್ ಸಿಂಗ್ ಅವರು ʼವೋಟ್ ಸತ್ಯಾಗ್ರಹʼ ಹೆಸರಿನ ಬ್ಯಾನರ್ ಮೇಲೆ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ಭಗತ್ ಸಿಂಗ್ ಅವರ ಪೋಟೊ ಇದೆ. ರಾತ್ರಿ-ಹಗಲು ಧರಣಿ ಸ್ಥಳದಲ್ಲೇ ವಾಸ್ತವ್ಯವಿದ್ದು, ಸ್ನಾನ ಕೂಡ ಅಲ್ಲೇ ಮಾಡ್ತಾ ಇದ್ದಾರೆ. ಕೇವಲ ನೀರು ಮಾತ್ರ ಸೇವಿಸಿ ಧರಣಿ ಮುಂದುವರೆಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಬೀದರ್ | ಮಾಂಜ್ರಾ ನದಿಯಲ್ಲಿ ಈಜಲು ಹೋದ ಯುವಕ ಸಾವು : 2 ದಿನಗಳ ನಂತರ ಶವ ಪತ್ತೆ
ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಸೋಮವಾರ ಭೇಟಿ ನೀಡಿ ಸತ್ಯಾಗ್ರಹ ಹಿಂಪಡೆಯಬೇಕೆಂದು ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಪ್ರಜಾತಂತ್ರದ ಮೌಲ್ಯಗಳು ನಾಶವಾದರೆ ದೇಶದಲ್ಲಿ ಸರ್ವಾಧಿಕಾರ ಸ್ಥಾಪಿತವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ದುರ್ಬಳಕೆ ಆಗಬಾರದೆಂಬ ಮಹತ್ವದ ಉದ್ದೇಶದಿಂದ ಪ್ರಜಾತಂತ್ರದ ಮೌಲ್ಯಗಳ ಉಳಿವಿಗಾಗಿ 21ದಿನಗಳ ಕಾಲ ನನ್ನ ಉಪವಾಸ ಸತ್ಯಾಗ್ರಹ ನಿರಂತರವಾಗಿ ಮುಂದುವರೆಸುವೆ ಎಂದು ತಿಳಿಸಿದ್ದೇನೆʼ ಎಂದು ಹೇಳಿದ್ದಾರೆ.




