ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ 50 ವರ್ಷಗಳ ಸಾರ್ಥಕ ರಾಜಕೀಯ ಬದುಕಿನ ಗೌರವಾರ್ಥವಾಗಿ ಮೇ 9ರಂದು ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿರುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಜಿ ಸಚಿವ, ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಮನವಿ ಮಾಡಿದ್ದಾರೆ
‘ಬಿಎಸ್‌ವೈ ಅವರು ನಾಡು ಕಂಡ ಅಪರೂಪದ ರಾಜಕಾರಣಿ. ಸಮಾಜಮುಖಿ ಹೋರಾಟಗಳ ಮುಖಾಂತರ ರಾಜಕೀಯಕ್ಕೆ ಬಂದ ಇವರು, ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪಕ್ಷ ಸಂಘಟನೆಯನ್ನು ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಿದ ಶ್ರೇಯಸ್ಸು ಅವರದ್ದಾಗಿದೆ’ ಎಂದು ಬಣ್ಣಿಸಿದ್ದಾರೆ.
‘ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೈತರಿಗೆ ಶೂನ್ಯ ಬಡ್ಡಿದರ ಸಾಲ, ನೀರಾವರಿ ಯೋಜನೆಗಳಿಗೆ ವೇಗ, ಬೆಳೆ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಸೇರಿದಂತೆ ಹಲವು ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಬಡ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ ಯೋಜನೆ, ಸೈಕಲ್ ವಿತರಣೆಯಂತಹ ಅನೇಕ ಜನಪರ ಯೋಜನೆಗಳ ಮೂಲಕ ಜನಮನ ಗೆದ್ದಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಔರಾದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಯಡಿಯೂರಪ್ಪ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಸಾಕಷ್ಟು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಅವರು, ನಾನು ಸಚಿವನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಸಲ್ಲಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ರಸ್ತೆ, ಕುಡಿಯುವ ನೀರಿನ ಯೋಜನೆಗಳು, ಶಾಲಾ-ಕಾಲೇಜುಗಳ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ಮಂಜೂರು ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಿದ್ದಾರೆ’ ಎಂದು ತಿಳಿಸಿದ್ದಾರೆ.
This video cannot be played in your browser. Open the video directly
ಇದನ್ನೂ ಓದಿ: ಬೀದರ್ | ವಸತಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ : ಯೋಗಿಶ್ ಎಸ್.ಬಿ
ಯಡಿಯೂರಪ್ಪ ಅವರ ಸಾರ್ಥಕ 50 ವರ್ಷಗಳ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆ ಗೌರವಾರ್ಥವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವು ಕೂಡ ಭಾಗವಹಿಸುತ್ತಿದ್ದು, ಔರಾದ(ಬಿ) ಕ್ಷೇತ್ರದಿಂದ ಸಾವಿರಾರು ಜನ ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ಯಡಿಯೂರಪ್ಪನವರ ಅಭಿಮಾನಿಗಳು, ಮುಖಂಡರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.





