ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಸಾಲು ಸಾಲು ಚುನಾವಣೆಗಳ ಬೆನ್ನಲ್ಲೇ ರಾಜಕೀಯ ವಾತಾವರಣ ತೀವ್ರ ಕಾವು ಪಡೆದುಕೊಂಡಿದೆ. ಕಠಿಣ ಚಳಿಗಾಲದ ಅವಧಿಯಲ್ಲಿ ನಗರ ಸಭೆ, ಪಂಚಾಯತ್ ಹಾಗೂ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ (LAHDC) ಚುನಾವಣೆಗಳನ್ನು ನಡೆಸಲು ಆಡಳಿತ ನಿರ್ಧರಿಸಿದೆ.
ಇದನ್ನು ವಿರೋಧಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಈ ಬೆನ್ನಲ್ಲೇ, ಲೇಹ್ ಮತ್ತು ಕಾರ್ಗಿಲ್ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ರ್ಯಾಲಿಗಳನ್ನು ನಡೆಸುವುದನ್ನು ನಿಷೇಧಿಸಿ ಲಡಾಖ್ ಮುಖ್ಯ ಚುನಾವಣಾಧಿಕಾರಿ (CEO) ರಾಹುಲ್ ಶರ್ಮಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಲಡಾಖ್‌ನಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆ: ರಾಷ್ಟ್ರಪತಿ ಮುರ್ಮು ಅಸ್ತು
ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಸಂಪೂರ್ಣ ಅವಧಿಯಲ್ಲಿ ಲೇಹ್ ಮತ್ತು ಕಾರ್ಗಿಲ್ ನಗರಸಭೆಗಳ ಗಡಿ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ಸಂಘಟನೆಗಳು ಧರಣಿ, ಸುದೀರ್ಘ ಪ್ರತಿಭಟನೆ, ಸತ್ಯಾಗ್ರಹ, ರ‍್ಯಾಲಿ ಅಥವಾ ಮೆರವಣಿಗೆಗಳನ್ನು ನಡೆಸುವಂತಿಲ್ಲ.
ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ಚುನಾವಣೆ ನಡೆಸಲು ಹಾಗೂ ಮತದಾರರ ಮೇಲೆ ಯಾವುದೇ ರೀತಿಯ ಅನಗತ್ಯ ಒತ್ತಡ ಅಥವಾ ಭಯದ ವಾತಾವರಣ ಸೃಷ್ಟಿಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುನ್ಸಿಪಲ್ ಕಾಯ್ದೆ 2000ರ ಸೆಕ್ಷನ್ 282 ಮತ್ತು ಚುನಾವಣಾ ನಿಯಮಗಳ ಅಡಿಯಲ್ಲಿ ಈ ನಿಷೇಧಾಜ್ಞೆ ವಿಧಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ಸೂಚಿಸಲಾಗಿದೆ.
ನವೆಂಬರ್ 21ರಂದು ಲೇಹ್ ಮತ್ತು ಕಾರ್ಗಿಲ್‌ಗಳಲ್ಲಿ ನಗರ ಸಭೆ ಮತ್ತು ಪಂಚಾಯತ್ ಚುನಾವಣೆಗಳು ಹಾಗೂ ಡಿಸೆಂಬರ್ 4 ರಂದು 8 ಹಿಲ್ ಕೌನ್ಸಿಲ್‌ಗಳಿಗೆ ಚುನಾವಣೆ ನಡೆಯಲಿದೆ. ಆದರೆ, ಡಿಸೆಂಬರ್‌ನ ತೀವ್ರ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ ಮಟ್ಟಕ್ಕೆ ಕುಸಿಯುವುದರಿಂದ ಜನಸಾಮಾನ್ಯರು ಮತ್ತು ಕೃಷಿಕರು ಕೆಲಸ ಅರಸಿ ವಲಸೆ ಹೋಗುತ್ತಾರೆ. ಹೀಗಾಗಿ ಸುಮಾರು ಶೇಕಡಾ 20 ರಿಂದ 25 ರಷ್ಟು ಮತದಾರರು ಹಕ್ಕು ಚಲಾಯಿಸುವುದರಿಂದ ವಂಚಿತರಾಗಲಿದ್ದಾರೆ ಎಂದು ಲಡಾಖ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ಆತಂಕ ವ್ಯಕ್ತಪಡಿಸಿವೆ.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿನ ಲೋಪಗಳು, ರಾಜಕೀಯ ಬೇಡಿಕೆಗಳು ಹಾಗೂ ಚಳಿಗಾಲದ ಸವಾಲುಗಳನ್ನು ಉಲ್ಲೇಖಿಸಿ ಲೇಹ್‌ನಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿದ್ದರೆ, ಕಾರ್ಗಿಲ್‌ನಲ್ಲಿ ಬಂದ್ ಮತ್ತು ಧರಣಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ ಚುನಾವಣಾ ಆಯೋಗ ಈ ನಿಷೇಧಾಜ್ಞೆ ಜಾರಿ ಮಾಡಿದೆ.




