ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ ಆಳ-ಅಗಲವನ್ನು ಅನುಭಾವಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಡಾ.ಮೃತ್ಯುಂಜಯ ರುಮಾಲೆ ಹೇಳಿದರು.
ಬಸವಕಲ್ಯಾಣ ಅನುಭವಮಂಟಪದ ವತಿಯಿಂದ ಆಯೋಜಿಸಿದ ‘ತಿಂಗಳ ಅನುಭವ ಮಂಟಪ-21’ ಕಾರ್ಯಕ್ರಮದಲ್ಲಿ ಅನುಭಾವ ನೀಡಿ, “ಅಲ್ಲಮಪ್ರಭು ಅವರು ಸಿದ್ಧರಾಮ, ಮುಕ್ತಾಯಕ್ಕ, ಗೊಗ್ಗಯ್ಯ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಸೇರಿ ಅನೇಕ ಶರಣರೊಂದಿಗೆ ನಡೆಸಿದ ಸಂವಾದವು ಜಗತ್ತಿನ ಅಧ್ಯಾತ್ಮ ಪರಂಪರೆಯ ಸರ್ವಶ್ರೇಷ್ಠ ಸಂವಾದವಾಗಿದೆ. ಈ ಸಂವಾದವನ್ನು ಜಗತ್ತಿನ ವಿವಿಧ ದಾರ್ಶನಿಕರ ಸಂವಾದಗಳೊಂದಿಗೆ ತೌಲನಿಕವಾಗಿ ಅಧ್ಯಯನ ಮಾಡಬಹುದು” ಎಂದರು.
“ಅಲ್ಲಮ ಮಾಯೆಯನ್ನು ಗೆದ್ದು, ತಮ್ಮ ದೇಹದಲ್ಲಿನ ವಿಕಾರಗಳನ್ನು ಸುಟ್ಟು ಗುಹೇಶ್ವರ ಲಿಂಗಕ್ಕೆ ಅರ್ಪಿಸಿದ ಅನುಭಾವವನ್ನು ಕೇವಲ ಓದುವುದರಿಂದ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಅವರ ಗಂಭೀರ ಚಿಂತನೆ ಹಾಗೂ ಸ್ವರವಚನಗಳನ್ನು ಅನುಭವಿಸುವ ಮೂಲಕವೇ ಅದರ ಅರ್ಥವನ್ನು ಅರಿಯಬೇಕು. ಆಗ ಲಿಂಗಾಂಗ ಸಾಮರಸ್ಯದ ಸುಖ ದೊರೆಯುತ್ತದೆ” ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿ, “ಮನುಷ್ಯನು ತನ್ನ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಶರಣರು ಇದನ್ನು ‘ಪ್ರಸಾದ ಕಾಯ’ ಎಂದು ಕರೆದಿದ್ದಾರೆ. ಬಸವಣ್ಣನವರು ದೇಹವನ್ನು ದೇಗುಲವನ್ನಾಗಿ ಮಾಡಿಕೊಳ್ಳಬೇಕು ಎಂದು ಸಾರಿದ್ದಾರೆ. ದೇಹವನ್ನು ದೇಗುಲ ಮಾಡಿಕೊಳ್ಳುವುದೆಂದರೆ ಜೀವನವನ್ನು ನಿರ್ವ್ಯಸನದಿಂದ ನಡೆಸುವುದು ಹಾಗೂ ಉತ್ತಮ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳುವುದು. ‘ಸದಾಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂಬುದನ್ನು ಅರಿತು ಬದುಕಬೇಕು” ಎಂದರು.
This video cannot be played in your browser. Open the video directly
“ಅಲ್ಲಮಪ್ರಭು ಅವರು ವಚನಗಳು ಹಾಗೂ ಸ್ವರವಚನಗಳ ಮೂಲಕ ಬದುಕಿನ ದಾರಿಯನ್ನು ತೋರಿಸಿದ್ದಾರೆ. ಡಾ.ಮೃತ್ಯುಂಜಯ ರುಮಾಲೆ ಅವರು ಅಲ್ಲಮರ ಸ್ವರವಚನಗಳನ್ನು ಅನುಭಾವಿಕ ನೆಲೆಯಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದು, ಅವರ ‘ಉಳ್ಳವರು ಶಿವಾಲಯ, ದೇಹ ದೇಗುಲ’ ಕೃತಿಯೂ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ಬರೆದ ‘ಉಳ್ಳವರು ಶಿವಾಲಯ, ದೇಹ ದೇಗುಲ’ ಕೃತಿಯನ್ನು ಪೂಜ್ಯ ಗುರುಬಸವ ಪಟ್ಟದ್ದೇವರು ಲೋಕಾರ್ಪಣೆ ಮಾಡಿದರು. ಡಾ.ಸೋಮನಾಥ ಯಾಳವಾರ ಗ್ರಂಥ ಪರಿಚಯ ಮಾಡಿಕೊಟ್ಟರು.
ಇದನ್ನೂ ಓದಿ : ಬೀದರ್ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ
ಕಾರ್ಯಕ್ರಮದಲ್ಲಿ ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಸುಗುಣಾತಾಯಿ, ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ನಾಗಪ್ಪ ನಿಣ್ಣೆ ಉಪಸ್ಥಿತರಿದ್ದರು. ರಾಜು ಜುಬರೆ ಸ್ವಾಗತಿಸಿದರು. ಅಂಬರೀಷ ಭಿಮಾಣಿ ನಿರೂಪಿಸಿದರು.





