ಬಸವಕಲ್ಯಾಣ ಅನುಭವ ಮಂಟಪ ಆವರಣದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಲಾದ ʼಬಸವ ಸಂಸ್ಕೃತಿ ಚಿಂತನ ಶಿಬಿರʼ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ʼಇಂತಹ ಶಿಬಿರಗಳಿಂದ ಯುವಕರಲ್ಲಿ ಬಸವತತ್ವದ ನಿಷ್ಠೆ ಗಟ್ಟಿಯಾಗುತ್ತದೆ. ಬಸವತತ್ವದ ನಿಜವಾದ ಅರಿವು ಮೂಡಿ, ಅದು ಅವರ ಜೀವನಾಚರಣೆಯಲ್ಲಿಯೂ ಪ್ರತಿಫಲಿಸುತ್ತದೆʼ ಎಂದರು,
ʼಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಬಸವಾದಿ ಶರಣರು, ಲಿಂಗಾಯತ ಧರ್ಮ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಸಂಬಂಧಿಸಿದ ಸುಮಾರು 20 ವಿಷಯಗಳ ಕುರಿತು ವಿದ್ವಾಂಸರ ಅನುಭಾವ ಚಿಂತನೆ ನಡೆಯಲಿದೆʼ ಎಂದು ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಬಸವಾದಿ ಶರಣರ ನೆಲವಾದ ಬಸವಕಲ್ಯಾಣದಲ್ಲಿ ಇಂತಹ ಶಿಬಿರ ಉದ್ಘಾಟನೆ ಮಾಡುವ ಅವಕಾಶ ದೊರೆತಿರುವುದು ಧನ್ಯತೆಯ ಸಂಗತಿಯಾಗಿದೆ. 12ನೇ ಶತಮಾನದಲ್ಲಿ ಶರಣರು ಸಮಸಮಾಜ ನಿರ್ಮಾಣದ ಜೊತೆಗೆ ದುಶ್ಚಟ ಹಾಗೂ ದುರ್ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಬದುಕಿನ ಮೌಲ್ಯಗಳನ್ನು ಅನೇಕ ಸಂತರು ಹಾಗೂ ಮಹಾತ್ಮರು ಮುಂದಿನ ಪೀಳಿಗೆಗಳಿಗೆ ಸಾರುತ್ತ ಬಂದಿದ್ದಾರೆʼ ಎಂದು ಹೇಳಿದರು.
ʼಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಮಾಜದಲ್ಲಿ ವ್ಯಸನಮುಕ್ತ ಜೀವನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ. ಭಾಲ್ಕಿಯ ಶ್ರೀಗಳು ಹಲವು ದಶಕಗಳಿಂದ ಯುವಕರಲ್ಲಿ ಬಸವಪ್ರಜ್ಞೆ ಮೂಡಿಸುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆʼ ಎಂದು ಶ್ಲಾಘಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮಿಗಳು ಹಾಗೂ ಬಸವಮಹಾಮನೆಯ ಲಾವಣ್ಯ ಮಾತಾಜಿ ಅವರು ನೇತೃತ್ವ ವಹಿಸಿದ್ದರು. ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಅನುಭವ ಮಂಟಪ ಕಾರ್ಯದರ್ಶಿ ಡಾ. ಎಸ್.ಬಿ. ದುರ್ಗೆ ಬಸವಗುರುಪೂಜೆ ನೆರವೇರಿತು.
ಇದನ್ನೂ ಓದಿ : ಬೀದರ್ | ಪಶು ವೈದ್ಯಕೀಯ ವಿವಿಯಲ್ಲಿ 45 ಕೋಟಿ ರೂ. ಹಗರಣ: ವಿಶ್ರಾಂತ ಕುಲಪತಿ ಸೇರಿ ಆರು ಮಂದಿ ಬಂಧನ
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯಪ್ರಕಾಶ ಸದಾನಂದೆ, ಕಲ್ಯಾಣರಾವ ಶಿವಣಕರ್, ಜಗನ್ನಾಥ ಪತಂಗೆ, ಗೌತಮ ಬುದ್ಧ, ನಂದೀಶ ಎಂ.ಎಸ್., ಕೆ.ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಗಮೇಶ ತೊಗರಖೇಡೆ ಕಾರ್ಯಕ್ರಮ ನಿರೂಪಿಸಿದರು. ಸಚೀನ್ ಕೌಂಟೆ ವಂದಿಸಿದರು.




